ಟಾಪ್ 10 ಉಗ್ರರ ಲಿಸ್ಟ್ ಪಡೆದ ಅಮಿತ್ ಶಾ

Public TV
3 Min Read

ನವದೆಹಲಿ: ಕಾಶ್ಮೀರದ ಕಣಿವೆ ಪ್ರದೇಶದಲ್ಲಿರುವ ಟಾಪ್ 10 ಉಗ್ರ ಪಟ್ಟಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಡೆದಿದ್ದಾರೆ.

ಗೃಹ ಸಚಿವ ಖಾತೆಯ ಜವಾಬ್ದಾರಿ ಹೊತ್ತ ಅಮಿತ್ ಶಾ ಅವರು ದೇಶದ ಭದ್ರತೆಯ ಕುರಿತು ಅನೇಕ ತಂತ್ರಗಳನ್ನು ರೂಪಿಸಲು ಮುಂದಾಗಿದ್ದಾರೆ. ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ ಅವರು, ಮೋಸ್ಟ್ ವಾಂಟೆಡ್ 10 ಭಯೋತ್ಪಾದಕರ ಪಟ್ಟಿಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.

ಈ ಪಟ್ಟಿಯಲ್ಲಿ ರಿಯಾಜ್ ನಾಯ್ಕು, ಒಸಾಮಾ ಮತ್ತು ಅಶ್ರಫ್ ಮೌಲ್ವಿ ಸೇರಿದಂತೆ ಪ್ರಮುಖ ಭಯೋತ್ಪಾದಕರಿದ್ದಾರೆ. ಈ ಭಯೋತ್ಪಾದಕರೇ ಭದ್ರತಾ ಏಜೆನ್ಸಿಗಳ ಮುಂದಿನ ಪ್ರಮುಖ ಟಾರ್ಗೆಟ್ ಆಗಿದೆ. ಕಾಶ್ಮೀರದ ಕಣಿವೆ ಪ್ರದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವ ಈ ಉಗ್ರರನ್ನು ಮಟ್ಟ ಹಾಕಲು ಸಕಲ ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಪಟ್ಟಿಯಲ್ಲಿ ಯಾರಿದ್ದಾರೆ?:
ರಿಯಾಜ್ ನಾಯ್ಕು ಅಲಿಯಾಸ್ ಮೊಹಮ್ಮದ್ ಬಿನ್ ಕಾಸಿಮ್ ಟಾಪ್ ಒನ್ ಉಗ್ರ. ರಿಯಾಜ್ 2010ರಿಂದಲೂ ಕಾಶ್ಮೀರದ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದಾನೆ. ಇತ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ರಿಯಾಜ್ ಬಂಡಿಪೊರ್ ಕಮಾಂಡರ್ ಆಗಿದ್ದಾನೆ.

ವಾಸಿಂ ಅಹ್ಮದ್ ಅಕಾ ಒಸಾಮಾ ಮತ್ತೊಬ್ಬ ಪ್ರಮುಖ ಉಗ್ರ. ಇವನು ಲಷ್ಕರ್-ಇ-ತೊಯ್ಬಾದ ಭಯೋತ್ಪಾದಕನಾಗಿದ್ದು, ಇತನು ಶೋಪಿಯನ್‍ನ ಜಿಲ್ಲಾ ಕಮಾಂಡರ್ ಆಗಿ ದಾಳಿಗಳನ್ನು ನಡೆಸುತ್ತಿದ್ದಾನೆ.

ಮೊಹಮ್ಮದ್ ಅಶ್ರಫ್ ಖಾನ್ ಅಲಿಯಾಸ್ ಅಶ್ರಫ್ ಮೌಲ್ವಿ ಮೂರನೇ ಪ್ರಮುಖ ಭಯೋತ್ಪಾದಕ. ಅಶ್ರಫ್ ಮೌಲ್ವಿ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಜೊತೆಗೆ ಗುರುತಿಸಿಕೊಂಡಿದ್ದು, ಅನಂತ್‍ನಾಗ್ ಪ್ರದೇಶದಲ್ಲಿ ಭಯೋತ್ಪಾದನೆ ನಡೆಸುತ್ತಿದ್ದಾನೆ.

ಟಾಪ್ 10 ಉಗ್ರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವುದು ಮೆಹ್ರಾಜ್-ಉದ್-ದಿನ್. ಇತನು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆ ಗುರುತಿಸಿಕೊಂಡಿದ್ದಾನೆ. ಮೆಹ್ರಾಜ್-ಉದ್-ದಿನ್ ಬಾರಾಮುಲ್ಲಾದಲ್ಲಿ ಹಿಜ್ಬುಲ್ ಮುಜಾಹಿದೀನ್ ಜಿಲ್ಲೆಯ ಕಮಾಂಡರ್ ಆಗಿದ್ದಾನೆ.

ಡಾ. ಸೈಫುಲ್ಲಾ ಅಲಿಯಾಸ್ ಸೈಫುಲ್ಲಾ ಮಿರ್ ಅಲಿಯಾಸ್ ಡಾ. ಸೈಫ್ ಟಾಪ್ 5 ಉಗ್ರ. ಡಾ. ಸೈಫ್ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯನಾಗಿದ್ದು, ಶ್ರೀನಗರದಲ್ಲಿದ್ದಾನೆ. ಇತನು ಭದ್ರತಾ ಸಿಬ್ಬಂದಿ ಹುಡುಕುತ್ತಿರುವ ಉಗ್ರರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾನೆ.

ಅರ್ಷದ್ ಉಲ್ ಹಕ್ ಟಾಪ್ 6 ಉಗ್ರ. ಇವನು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಪುಲ್ವಾಮಾ ಜಿಲ್ಲಾ ಕಮಾಂಡರ್. ಭದ್ರತಾ ಪಡೆಯ ಹಿಟ್ ಲಿಸ್ಟ್ ನಲ್ಲಿ ಅರ್ಷದ್ ಉಲ್ ಹಕ್ ಹೆಸರು ಸೇರ್ಪಡೆಗೊಂಡಿದ್ದು, ಅವನನ್ನು ಶೀಘ್ರದಲ್ಲೇ ಮಟ್ಟಹಾಕಲು ಪ್ಲಾನ್ ರೂಪಿಸಲಾಗಿದೆಯಂತೆ.

ಹಫಿಜ್ ಒಮರ್ ಪಾಕಿಸ್ತಾನ ಮೂಲದ ಉಗ್ರ. ಟಾಪ್ 10 ಹಿಸ್ಟ್ ಲಿಸ್ಟ್ ಉಗ್ರರ ಪಟ್ಟಿಯಲ್ಲಿ ಈತನಿಗೆ 7ನೇ ಸ್ಥಾನ ಸಿಕ್ಕಿದೆ. ಹಫಿಜ್ ಒಮರ್ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಸದಸ್ಯನಾಗಿದ್ದು, ಪಾಕ್ ಆಕ್ರಮಿತ ಕಾಶ್ಮೀರದ ಬಾಲಕೋಟ್ ಶಿಬಿರದಲ್ಲಿ ತರಬೇತಿ ಪಡೆದಿದ್ದಾನೆ. ಸದ್ಯ ಭಯೋತ್ಪಾದಕ ಕಾರ್ಯಾಚರಣೆಯ ಕಮಾಂಡರ್ ಗಳ ಮುಖ್ಯಸ್ಥನಾಗಿದ್ದಾನೆ.

ಜಹೀದ್ ಶೇಖ್ ಅಲಿಯಾಸ್ ಓಮರ್ ಅಫ್ಘಾನಿ ಟಾಪ್ 8 ಉಗ್ರ. ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಸದಸ್ಯನಾಗಿದ್ದು, ಕಾಶ್ಮೀರದಲ್ಲಿ ತಾಲಿಬಾನ್ ಉಗ್ರಗಾಮಿಗಳೊಂದಿಗೆ ತರಬೇತಿ ಪಡೆದಿದ್ದ. ಇವನ ಬಂಧನಕ್ಕಾಗಿ ಭದ್ರತಾ ಏಜೆನ್ಸಿಗಳು ಬಲೆ ಬೀಸಿದ್ದಾರೆ.

ಜಾವೆದ್ ಮಾತು ಅಲಿಯಾಸ್ ಫೈಸಲ್ ಅಲಿಯಾಸ್ ಷಕೀಬ್ ಅಲಿಯಾಸ್ ಮುಸಾಬ್ ಟಾಪ್ 9 ಉಗ್ರ. ಅಲ್-ಬ್ರದರ್ ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿದ್ದು, ಉತ್ತರ ಕಾಶ್ಮೀರದ ಅಲ್ ಬದಾರ್ನ ವಿಭಾಗೀಯ ಕಮಾಂಡರ್ ಆಗಿದ್ದಾನೆ.

ಎಝಾಝ್ ಅಹ್ಮದ್ ಮಲಿಕ್ ಭದ್ರತಾ ಪಡೆಯ ಹಿಟ್ ಪಟ್ಟಿಯ 10ನೇ ಉಗ್ರ. ಇತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯನಾಗಿದ್ದು, ಇತ್ತೀಚೆಗೆ ಕುಪ್ವಾರಾ ಜಿಲ್ಲಾ ಕಮಾಂಡರ್ ಆಗಿ ನೇಮಕಗೊಂಡಿದ್ದಾನೆ.

ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭದ್ರತಾ ಪಡೆಯು ಈವರೆಗೆ 25 ವಿದೇಶಿ ಮತ್ತು 76 ಕಾಶ್ಮೀರಿ ಭಯೋತ್ಪಾದಕರನ್ನು ಸೇರಿದಂತೆ 101 ಉಗ್ರರನ್ನು ಹತ್ಯೆ ಮಾಡಿದೆ. ಈ ಉಗ್ರರು ಜೈಷ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್, ಎಲ್.ಟಿ.ಟಿ ಮತ್ತು ಅಲ್-ಬದ್ರ್ ಸೇರಿದವರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *