ಕಾಶ್ಮೀರದ ಕುರಿತು ಕೇಂದ್ರ ನಿರ್ಧಾರ, ಬಹಳ ಹಿಂದಿನ ಕನಸು ನನಸಾಗಿದೆ- ಶೋಭಾ ಕರಂದ್ಲಾಜೆ

Public TV
2 Min Read

– ಕಾಲಿಗೆ ಹೊಕ್ಕಿದ್ದ ಮುಳ್ಳನ್ನು ತೆಗೆದಂತಾಗಿದೆ

ನವದೆಹಲಿ: ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರದಿಂದ ತುಂಬಾ ಸಂತಸವಾಗಿದ್ದು, ಬಹಳ ಹಿಂದಿನ ಕನಸು ಈಗ ನನಸಾಗಿದೆ. ಒಂದು ರೀತಿ ಕಾಲಿಗೆ ಹೊಕ್ಕಿದ್ದ ಮುಳ್ಳನ್ನು ಹೊರ ತೆಗೆದಂತಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಾಶ್ಮೀರದ ವಿಚಾರದಲ್ಲಿ ಬಹಳ ಹಿಂದಿನ ಕನಸು ಈಗ ನನಸಾಗಿದ್ದು, ಜನಸಂಘದ ಸ್ಥಾಪಕರಾದ ಶಾಮ್ ಪ್ರಸಾದ್ ಮುಖರ್ಜಿ ಅವರು ಇದೇ ವಿಷಯವಾಗಿ ಹೋರಾಟ ನಡೆಸಿದ್ದರು. ಅದಕ್ಕಾಗಿಯೇ ಪ್ರಾಣ ತ್ಯಾಗ ಮಾಡಿದ್ದರು. ಅವರ ಕನಸು ಸಹ ಇದೇ ಆಗಿತ್ತು ಎಂದು ತಿಳಿಸಿದರು.

ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಒಂದು ದೇಶದಲ್ಲಿ ಎರಡು ಧ್ವಜ, ಪ್ರಧಾನಿ ಇರಬಾರದು ಎಂದುಕೊಂಡಿದ್ದರು ಹಾಗೇಯೇ ಆಗಿದೆ. ಇದೀಗ ಅಖಂಡ ಭಾರತ ಒಂದಾಗಿದೆ. ಬೇರೆ ರಾಜ್ಯಗಳಂತೆ ಕಾಶ್ಮೀರ ಕೂಡ ನಮ್ಮದಾಗಬೇಕೆಂಬ ಕನಸು ಆಗಿನಿಂದಲೂ ಇತ್ತು. ಈಗ ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರದಲ್ಲಿನ ವಿಪಕ್ಷಗಳಿಗೆ ತಿಳಿಯದಂತೆ ಅಲ್ಲಿನ ನಾಯಕರರಿಂದ ಈ ವಿಷಯವನ್ನು ದೂರ ಇಡಲಾಗಿತ್ತು. ಹೀಗಾಗಿ ವಿರೋಧ ಪಕ್ಷದವರನ್ನು ಗೃಹ ಬಂಧನದಲ್ಲಿಡಲಾಗಿದೆ. ದೇಶದ ಹಿತದೃಷ್ಟಿಯಿಂದ ಈ ವಿಚಾರವನ್ನು ಗುಟ್ಟಾಗಿ ಇಡಲಾಗಿತ್ತು. ಕಾಲಿಗೆ ಹೊಕ್ಕಿದ್ದ ಮುಳ್ಳನ್ನು ಹೊರ ತೆಗೆದಂತಾಗಿದೆ. ಇದರಿಂದ ದೇಶಕ್ಕೆ ಅಷ್ಟು ನಿರಾಳತೆ ಒದಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಒಳಿತಿನ ದೃಷ್ಟಿಯಿಂದ ಕೆಲವು ನಿರ್ಧಾರಗಳನ್ನು ದಿಢೀರ್ ತೆಗೆದುಕೊಳ್ಳಬೇಕಿತ್ತು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ನಿರ್ಧಾರವನ್ನು ಗುಪ್ತವಾಗಿಟ್ಟಿದ್ದರು. ಇಲ್ಲವಾದಲ್ಲಿ, ದೊಂಬೆ, ಗಲಾಟೆ, ಭಯೋತ್ಪಾದನೆಯಂತಹ ಕೃತ್ಯಗಳು ನಡೆಯುತ್ತಿದ್ದವು. ಇಷ್ಟು ವರ್ಷಗಳಲ್ಲಿ ಕಾಶ್ಮೀರಕ್ಕಾಗಿ ಬಲಿಯಾಗಿರುವ ಸೈನಿಕರು, ಸಾರ್ವಜನಿಕರ ಆತ್ಮಕ್ಕೆ ಇಂದು ತೃಪ್ತಿಯಾಗಿರುತ್ತದೆ. ಇದಕ್ಕೆ ನಮ್ಮೆಲ್ಲ ಸಂಸದರ ಬೆಂಬಲವಿತ್ತು. ಅಲ್ಲದೆ, ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿಯೂ ಸಹ ಈ ಅಂಶ ಉಲ್ಲೇಖವಾಗಿತ್ತು. ಹೀಗಾಗಿ ನಿರ್ಧಾರದ ಕುರಿತು ಆಶ್ಚರ್ಯವೇನು ಇಲ್ಲ. ನಮಗೆ ಇದು ಹೊಸ ವಿಚಾರವಲ್ಲ. ಇಂತಹ ದಿಟ್ಟ ನಿರ್ಧಾರ ಕೈಗೊಂಡಿದ್ದು, ಶ್ಲಾಘನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಶ್ಮಿರ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡಿದೆ, ರಾಷ್ಟ್ರಪತಿಗಳ ಹಾಗೂ ಕೇಂದ್ರ ನಾಯಕರ ಆಡಳಿತಕ್ಕೊಳಪಡಲಿದೆ. ಕಾಶ್ಮೀರದ ಕೆಲ ನಾಯಕರನ್ನು ಗೃಹಬಂಧನದಲ್ಲಿರಿಸಿರುವುದು ಗದ್ದಲ ಗಲಾಟೆಗಳಾಗಬಾರದು ಎಂಬ ಉದ್ದೇಶದಿಂದ. ಎಲ್ಲ ನಾಯಕರ ಭದ್ರತೆಯನ್ನು ಕೇಂದ್ರ ಸರ್ಕಾರ ವಹಸಿಕೊಳ್ಳಲಿದೆ. ಕಾಶ್ಮೀರದ ಜನಕ್ಕೆ, ದೇಶದ ಜನಕ್ಕೆ ಕಾಶ್ಮೀರ ನಮ್ಮದು ಎಂಬ ಭಾವನೆಯನ್ನು ಕೇಂದ್ರ ಸರ್ಕಾರ ಮೂಡಿಸುತ್ತಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *