ಸರ್ಕಾರವೇ ನಾಚುವಂತೆ ರೈತರಿಂದಲೇ ನಿರ್ಮಾಣವಾಯ್ತು ವಿಶೇಷ ಬ್ಯಾರಲ್‌ ಸೇತುವೆ

Public TV
3 Min Read

– ಜಮಖಂಡಿಯ ಕಂಕಣವಾಡಿ ಗ್ರಾಮದ ರೈತರ ಸಾಧನೆ
– ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ದುಡ್ಡು ಹಾಕಿ ನಿರ್ಮಾಣ

ಬಾಗಲಕೋಟೆ: ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ. ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದು ಎಂಬ ಚಿತ್ರಗೀತೆಯಂತೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದ ರೈತರು ಒಂದು ವಿಶೇಷ ಸಾಧನೆ ಮಾಡಿದ್ದಾರೆ. ಸರ್ಕಾರವೇ ನಾಚುವಂತೆ ಯಾವ ಎಂಜಿನಿಯರ್‌ಗಳ ಸಹಾಯ ಇಲ್ಲದೇ ಸ್ವತಃ ತಾವೇ ಎಂಜಿನಿಯರ್‌ಗಳಾಗಿ ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರಲ್ ಸೇತುವೆ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಈ ಬ್ಯಾರಲ್ ಸೇತುವೆ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, 300 ಪ್ಲಾಸ್ಟಿಕ್ ಬ್ಯಾರೆಲ್‌ಗಳು, 15 ಟನ್ ಕಬ್ಬಿಣದ ಆ್ಯಂಗ್ಲರ್, 10 ಟನ್ ಕಟ್ಟಿಗೆ ಹಾಗೂ 10 ಟನ್‌ನಷ್ಟು ಪ್ಲಾಸ್ಟಿಕ್ ಹಗ್ಗದಿಂದ ನಿರ್ಮಾಣವಾಗುತ್ತಿದೆ. ಇದನ್ನೂ ಓದಿ: ಕರ್ನಾಟಕ ಬಂದ್ ಬಿಸಿ – 60 ವಿಮಾನ ರದ್ದು

ಸೇತುವೆ ನಿರ್ಮಿಸಿದ್ದು ಯಾಕೆ?
ಕಂಕನವಾಡಿ ಗ್ರಾಮದಿಂದ ಸುಮಾರು 600 ಅಡಿ ದೂರದ ಗುಹೇಶ್ವರ ಗಡ್ಡೆಗೆ (ನಡುಗಡ್ಡೆ) ತೆರಳಲು ಜನ ಹಲವು ವರ್ಷಗಳಿಂದ ಬೋಟನ್ನೇ ಅವಲಂಬಿಸಿದ್ದರು. ಅಲ್ಲದೇ ಗುಹೇಶ್ವರ ನಡುಗಡ್ಡೆಯಲ್ಲಿ ಈ ರೈತರ ಸುಮಾರು 700 ಎಕರೆ ಜಮೀನು ಇದೆ. ರೈತರು ಹೊಲ, ಗದ್ದೆಗಳಿಗೆ ಹೋಗಲು, ದನಕರುಗಳನ್ನು ಕರೆದೊಯ್ಯಲು ಹಾಗೂ ತಾವು ಬೆಳೆದ ಫಸಲನ್ನು ಮಾರುಕಟ್ಟೆಗೆ ಸಾಗಿಸಲು ಬೋಟನ್ನೇ ಅವಲಂಬಿಸಿದ್ದರು.

ಅಷ್ಟೇ ಅಲ್ಲದೇ ಆ ಗುಹೇಶ್ವರ ಗಡ್ಡೆಯಲ್ಲಿ ಪ್ರಖ್ಯಾತ ಗುಹೇಶ್ವರ ದೇವಸ್ಥಾನವಿದ್ದು, ಪ್ರತಿ ಅಮವಾಸ್ಯೆ ದಿನದಂದು ನೂರಾರು ಭಕ್ತಾದಿಗಳು ಬೋಟ್ ಮೂಲಕವೇ ದೇವಸ್ಥಾನಕ್ಕೆ ತೆರಳುವ ಪರಿಸ್ಥಿತಿ ಇತ್ತು. ಅದೇ ನಡುಗಡ್ಡೆಯ ಜಮೀನುಗಳಲ್ಲಿ ಮನೆ ಮಾಡಿಕೊಂಡು ಸುಮಾರು 150 ಕುಟುಂಬಗಳು ವಾಸಿಸುತ್ತಿವೆ. ಹೀಗಾಗಿ ನಡುಗಡ್ಡೆಯಿಂದ ಕಂಕನವಾಡಿಗೆ ಬರಲು, ಊರಿನಿಂದ ಗುಹೇಶ್ವರ ಗಡ್ಡೆ ತಲುಪಲು, ಜನ ಜೀವ ಕೈಯಲ್ಲೇ ಹಿಡಿದುಕೊಂಡು ಬೋಟ್ ಮೂಲಕವೇ ಕೃಷ್ಣಾ ನದಿಯನ್ನು ದಾಟಬೇಕಿತ್ತು.

ಇದರಿಂದಾಗಿ ನೊಂದ ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳಿಗೆ ಮತ್ತು ಆ ಭಾಗದ ಜನಪ್ರತಿನಿಧಿಗಳಿಗೆ ನದಿಗೆ ಅಡ್ಡಲಾಗಿ ಮೇಲು ಸೇತುವೆ ಮಾಡಿಸಿಕೊಡಿ ಎಂದು ಮನವಿ‌ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ಮನವಿಗೆ ಸ್ಪಂದನೆ ಸಿಗದೇ ಇದ್ದಾಗ ರೈತರು ಯಾರ ಸಹಾಯವೂ ಇಲ್ಲದೇ ಸೇತುವೆ ನಿರ್ಮಾಣಕ್ಕೆ ಕೈ ಹಾಕಿದರು.

ಪ್ರೇರಣೆ ಏನು?
ಕಂಕನವಾಡಿ ಗ್ರಾಮದಲ್ಲಿ ನಡೆಯುವ ಗುಹೇಶ್ವರ ಜಾತ್ರೆಯ ದಿನ ಪ್ರತಿ ವರ್ಷ ಗ್ರಾಮಸ್ಥರು ಕೃಷ್ಣಾ ನದಿಯಲ್ಲಿ, ಪ್ಲಾಸ್ಟಿಕ್ ಬ್ಯಾರಲ್‌ಗಳ ಸಹಾಯದಿಂದ ಒಂದು (ಫ್ಲೋಟಿಂಗ್) ನೀರಿನ ಕಾರಂಜಿಯನ್ನು ಮಾಡುತ್ತಿದ್ದರು. ಪ್ಲಾಸ್ಟಿಕ್ ಬ್ಯಾರಲ್‌ಗಳಿಂದ ಆದ ಆ ಸುಂದರ ಕಾರಂಜಿ ಎಲ್ಲರ ಗಮನ ಸೆಳೆಯುತ್ತಿತ್ತು. ಪ್ಲಾಸ್ಟಿಕ್ ಬ್ಯಾರಲ್‌ಗಳು ಇದ್ದರೆ ಆ ನೀರಿನ ಕಾರಂಜಿ ನದಿಯಲ್ಲಿ ಮುಳುಗುವುದಿಲ್ಲ ಎಂಬುದನ್ನು ಅರಿತ ರೈತರು ಕಾರಂಜಿ ಪ್ರೇರಣೆಯಿಂದಲೇ ತಾವೇ ಸ್ವತಃ ಪ್ಲಾಸ್ಟಿಕ್ ಬ್ಯಾರಲ್, ಕಬ್ಬಿಣದ ಆ್ಯಂಗ್ಲರ್ ಹಾಗೂ ಕಟ್ಟಿಗೆ ತುಂಡುಗಳ ಸಹಾಯದಿಂದ ಒಂದು ಸೇತುವೆ‌ ಯಾಕೆ ನಿರ್ಮಿಸಬಾರದು ಎಂದು ಆಲೋಚಿಸಿ ಸೇತುವೆ ನಿರ್ಮಾಣದ ಸಾಹಸಕ್ಕೆ ಕೈಹಾಕಿದರು.

ಜನರಿಂದಲೇ ದುಡ್ಡು:
ಗ್ರಾಮದ ರೈತರೆಲ್ಲ ಸೇರಿ, ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರಲ್‌ ಸೇತುವೆ ನಿರ್ಮಾಣ ಮಾಡುವ ತೀರ್ಮಾನ ಕೈಗೊಂಡರು. ಪ್ರತಿ ಎಕರೆಗೆ 1 ಸಾವಿರ ರೂ. ನಂತೆ ಗ್ರಾಮದ ಎಲ್ಲ ರೈತರಿಂದ ದೇಣಿಗೆ ಸಂಗ್ರಹಿಸಲಾಯಿತು. ನಂತರ ಸಂಗ್ರಹವಾದ ಹಣದಿಂದ ನದಿಗೆ ಸೇತುವೆ ನಿರ್ಮಿಸುವ ಕೆಲಸ ಆರಂಭಿಸಿದರು. ಸದ್ಯ ಸೇತುವೆ ಕಾರ್ಯ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ರೈತರ ಒಂದೂವರೆ ತಿಂಗಳ ನಿರಂತರ ಪರಿಶ್ರಮದಿಂದ ಈ ಸೇತುವೆ ನಿರ್ಮಾಣವಾಗುತ್ತಿದ್ದು, ರೈತರ ಈ ವಿಶೇಷ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಂತ್ರಜ್ಞರು, ಸರ್ಕಾರ ಹಾಗೂ ಸಂಘಸಂಸ್ಥೆ ಹೀಗೆ ಯಾರ ಸಹಾಯವೂ ಇಲ್ಲದೇ ನದಿಗೆ ಅಡ್ಡಲಾಗಿ ಸೇತುವೆ ಮಾಡುತ್ತಿರುವ ಈ ರೈತರ ಛಲ ಹಾಗೂ ಸಾಹಸ ನಿಜಕ್ಕೂ ಅಸಾಮಾನ್ಯ ಸಾಧನೆಯೇ ಸರಿ.

 

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್