ದೆಹಲಿ ಗಲಭೆ – ಜಾಮಿಯಾ ಪಿಹೆಚ್‍ಡಿ ವಿದ್ಯಾರ್ಥಿ ಅರೆಸ್ಟ್

Public TV
1 Min Read

ನವದೆಹಲಿ: ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ದೆಹಲಿ ಗಲಭೆಯ ವಿಚಾರವಾಗಿ ಜಾಮಿಯಾ ವಿವಿಯಲ್ಲಿ ಪಿಹೆಚ್‍ಡಿ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವಿದ್ಯಾರ್ಥಿಯನ್ನು ಮಿರಾನ್ ಹೈದರ್ ಎಂದು ಗುರುತಿಸಲಾಗಿದೆ. ಈತ ಲಾಲು ಯಾದವ್ ಅವರ ರಾಷ್ಟ್ರೀಯ ಜನತಾದಳ (ಆರ್.ಜೆ.ಡಿ) ದೆಹಲಿ ಯುವ ವಿಭಾಗದ ಮುಖ್ಯಸ್ಥನಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈತ ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಂದು ಹೇಳಲಾಗಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅವರ ಕುಟುಂಬ ಸಮೇತ ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದಾಗ ಈ ಗಲಭೆ ನಡೆದಿತ್ತು. ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸತತ ನಾಲ್ಕು ದಿನಗಳ ಕಾಲ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ನಡೆದಿತ್ತು. ಈ ಗಲಭೆಯಲ್ಲಿ 54 ಜನರು ಸಾವನ್ನಪ್ಪಿದ್ದರು ಮತ್ತು ನೂರಾರು ಜನರು ಗಾಯಗೊಂಡಿದ್ದರು.

ಈ ಹಿಂಸಾಚಾರವು ನೆರೆಹೊರೆಯ ಜನರ ನಡುವೆಯೇ ಜಗಳದ ವಾತಾವರಣವನ್ನು ನಿರ್ಮಾಣ ಮಾಡಿತ್ತು. ಈ ವೇಳೆ ಮನೆಗಳು ಮತ್ತು ಅಂಗಡಿಗಳನ್ನು ಸುಟ್ಟುಹಾಕಲಾಗಿತ್ತು. ಪೌರತ್ವ ವಿರೋಧಿ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ದೊಡ್ಡ ಮಟ್ಟದ ಘರ್ಷಣೆಯಾಗಿತ್ತು. ಇದರಲ್ಲಿ ಕೆಲವು ಪ್ರತಿಭಟನಾಕಾರರು ಬಂದೂಕು ಹಿಡಿದು ದಾಳಿ ಕೂಡ ಮಾಡಿದ್ದರು. ಜೊತೆಗೆ ಅನೇಕ ಪ್ರತಿಭಟನಾಕಾರರು ಗುಂಡೇಟಿನಿಂದ ಗಾಯಗೊಂಡಿದ್ದರು.

ಟ್ರಂಪ್ ಅವರು ಭಾರತಕ್ಕೆ ಬಂದ ಸಮಯದಲ್ಲೇ ಉದ್ದೇಶಪೂರ್ವಕವಾಗಿಯೇ ಈ ಗಲಭೆಯನ್ನು ಸಂಘಟಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದ್ದವು. ಗಲಭೆಗೆ ಸಂಬಂಧಿಸಿದಂತೆ ಅಮಾನತುಗೊಂಡ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ತಾಹೀರ್ ಹುಸೇನ್ ಮತ್ತು ಆತನ ಸಹೋದರ ಸೇರಿದಂತೆ 7 ಜನರನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ಹಿಂಸಾಚಾರದ ಸಮಯದಲ್ಲಿ ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ತಾಹಿರ್ ಹುಸೇನ್ ಆರೋಪಿಯಾಗಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *