ಫೆ.11ಕ್ಕೆ ಬಿಡುಗಡೆಯಾಗಲಿದೆ ಜೇಮ್ಸ್ ಸಿನಿಮಾದ ಟೀಸರ್

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹು ನಿರೀಕ್ಷಿತ ಜೇಮ್ಸ್ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕವನ್ನು ಘೋಷಿಸುವ ಮೂಲಕ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಪುನೀತ್ ಅಗಲಿಕೆಗೂ ಮುನ್ನ ಕೊನೆದಾಗಿ ಅಭಿನಯಿಸಿರುವ ಸಿನಿಮಾ ಜೇಮ್ಸ್ ಆಗಿದ್ದು, ಈ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ಜೇಮ್ಸ್ ಸಿನಿಮಾದ ಪೋಸ್ಟರ್ ರಿವೀಲ್ ಮಾಡಿ ಚಿತ್ರತಂಡ ಭಾರೀ ಸದ್ದು ಮಾಡಿತ್ತು. ಇದೀಗ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಜೇಮ್ಸ್ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾರಿನ ಮೇಲೆ ಜೆ ಎಂದು ಸಿಂಬಲ್ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿರುವ ಅಶ್ವಿನಿ ಅವರು ಫೆಬ್ರವರಿ 11 ರಂದು ಬೆಳಿಗ್ಗೆ 11.11 ಕ್ಕೆ ಜೇಮ್ಸ್ ಅಧಿಕೃತ ಟೀಸರ್ ಬಿಡುಗಡೆಯಾಗಲಿದೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಜೇಮ್ಸ್ ಸಿನಿಮಾಕ್ಕೆ ನಟ ಶಿವರಾಜ್ ಕುಮಾರ್ ವಾಯ್ಸ್ ಡಬ್ಬಿಂಗ್ ನೀಡುತ್ತಿದ್ದಾರೆ ಎಂದು ಚಿತ್ರತಂಡ ಬಹಿರಂಗಪಡಿಸಿದೆ. ಇದನ್ನೂ ಓದಿ: ಸಲಾಂ ಸೋಲ್ಜರ್, ದೇಶಕ್ಕೆ ನೀನೇ ಪವರ್ – ಪುನೀತ್ ಖದರ್

ಇನ್ನೂ ಕೆಲವು ದಿನಗಳ ಹಿಂದೆಯಷ್ಟೇ ಬಿಡುಗಡೆಯಾದ ಜೇಮ್ಸ್ ಸಿನಿಮಾದ ಪೋಸ್ಟರ್‌ನಲ್ಲಿ ಪುನೀತ್ ಗನ್ ಹಿಡಿದು ಖಡಕ್ ಆರ್ಮಿ ಆಫೀಸರ್ ಆಗಿ ಮಿಂಚಿದ್ದರು. ಅದರಲ್ಲಿಯೂ ಪೋಸ್ಟರ್‌ನಲ್ಲಿರುವ ಸಲಾಂ ಸೋಲ್ಜರ್ ದೇಶಕ್ಕೆ ನೀನೇ ಪವರ್ ಎಂಬ ಸಾಲುಗಳು ಎಲ್ಲರ ಗಮನ ಸೆಳೆದಿತ್ತು. ಇನ್ನೂ ಪುನೀತ್ ಲುಕ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದರು.

ಈ ಚಿತ್ರಕ್ಕೆ ನಿರ್ದೇಶಕ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದು, ಅಪ್ಪು ಹುಟ್ಟುಹಬ್ಬದ ದಿನದಂದೇ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗುತ್ತಿದೆ. ರಾಜಕುಮಾರ ಸಿನಿಮಾದಲ್ಲಿ ನಟಿಸಿದ್ದ ಪ್ರಿಯಾ ಆನಂದ್ ಅವರೇ ಜೇಮ್ಸ್ ಚಿತ್ರದಲ್ಲಿ ಅಪ್ಪು ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಚಿತ್ರದಲ್ಲಿ ಶ್ರೀಕಾಂತ್, ಆದಿತ್ಯ ಮೆನನ್ ಹಾಗೂ ಅನು ಪ್ರಭಾಕರ್, ಮುಖೇಶ್ ರಿಷಿ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆ ಡ್ಯಾನ್ಸ್ ಕಾರ್ಯಕ್ರಮಕ್ಕೆ ಹೋಗಿದ್ದು, ನನ್ನ ಜೀವನದ ಮರೆಯಲಾಗದ ಕ್ಷಣ: ಅಲ್ಲು ಅರ್ಜುನ್

Share This Article
Leave a Comment

Leave a Reply

Your email address will not be published. Required fields are marked *