ಕೆಆರ್‌ಎಸ್‌ ನೀರು ಬಳಕೆ ಮಾಡಿಕೊಂಡು ಜಲಪಾತೋತ್ಸವ ಮಾಡಲಾಗುತ್ತಿದೆ ಎಂಬ ಆರೋಪ

Public TV
2 Min Read

– ರೈತರ ಬೆಳೆಗಳಿಗೆ ಇಲ್ಲದ ನೀರು ಮೋಜು ಮಸ್ತಿಗೆ ಬೇಕಂತೆ

ಮಂಡ್ಯ: ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ರಾಜ್ಯದಲ್ಲೆಡೆ ಭಾರೀ ಮಳೆ ಸುರಿದು ಹಳ್ಳ ತೊರೆಗಳು ತುಂಬಿ ಹರಿಯುತ್ತಿದ್ದವು. ಅದೇ ರೀತಿ ವಿಶ್ವಪ್ರಸಿದ್ಧ ಗಗನಚುಕ್ಕಿ ಜಲಪಾತವೂ ಭೋರ್ಗರೆದು ಧುಮ್ಮಿಕ್ಕುತ್ತಿತ್ತು. ಆಗ ಜಲಪಾತ ಉತ್ಸವ ಮಾಡದ ಜಿಲ್ಲಾಡಳಿತ ಈಗ ನೀರೇ ಇಲ್ಲದೆ ಖಾಲಿ ಖಾಲಿಯಾಗಿರುವ ಗಗನಚುಕ್ಕಿ ಜಲಪಾತದಲ್ಲಿ ಜಲಪಾತೋತ್ಸವ ಮಾಡಲು ಮುಂದಾಗಿದೆ.

ಇದೇ ತಿಂಗಳ 18 ಹಾಗೂ 19ರಂದು ಎರಡು ದಿನಗಳ ಕಾಲ ಉತ್ಸವ ನಡೆಸುವುದಕ್ಕಾಗಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆಯನ್ನು ನಡೆಸಿದೆ. ಇದು ವಿವಾದಕ್ಕೆ ಕಾರಣವಾಗಿದ್ದು, ಕೆಆರ್‌ಎಸ್‌ ನೀರನ್ನು ಬಳಕೆ ಮಾಡಿಕೊಂಡು ಜಲಪಾತೋತ್ಸವ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜಿಲ್ಲೆಯ ರೈತರು ಹಿಂಗಾಳು ಬೆಳೆ ಬೆಳೆಯುವುದಕ್ಕೆ ನೀರು ಬಿಡುವ ಬಗ್ಗೆ ನಿರ್ಧಾರವೇ ಆಗಿಲ್ಲ ಅಂತಹದರಲ್ಲಿ ಈಗ ಜಲಪಾತೋತ್ಸವ ಮಾಡುವ ಅಗತ್ಯವಿದಿಯಾ ಎಂದು ರೈತರು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ.

ಪ್ರತಿ ವರ್ಷ ಜೂನ್-ಜುಲೈ ತಿಂಗಳಲ್ಲಿ ಮಳೆ ಸುರಿದು ಕೆಆರ್‌ಎಸ್‌ ಡ್ಯಾಂ ಭರ್ತಿಯಾಗಿ ಹೆಚ್ಚಿನ ಪ್ರಮಾಣದ ನೀರು ಹರಿದು ಬರುವ ಸಂದರ್ಭದಲ್ಲಿ ಜಲಪಾತ ತುಂಬಿ ಹರಿಯುತ್ತಿತ್ತು. ಆಗ ಪ್ರತಿ ವರ್ಷ ಜಲಪಾತೋತ್ಸವ ಮಾಡಲಾಗುತ್ತಿತ್ತು. ಆದರೆ ಕಳೆದ ಎರಡು ಮೂರು ವರ್ಷಗಳಲ್ಲಿ ಮಳೆ ಇಲ್ಲದೆ ಡ್ಯಾಂ ಭರ್ತಿಯಾಗಿರಲಿಲ್ಲ. ಹೀಗಾಗಿ ಜಲಪಾತೋತ್ಸವವನ್ನೂ ಮಾಡಲಾಗಿರಲಿಲ್ಲ. ಆದರೆ ಈ ವರ್ಷ ಹಿಂದೆಂದೂ ಕಾಣದ ರೀತಿಯಲ್ಲಿ ಮಳೆಯಾಗಿ ಡ್ಯಾಂ ಭರ್ತಿ ಆಯಿತು.

ನಿರಂತರವಾಗಿ ಸುಮಾರು 4 ತಿಂಗಳಿಗೂ ಹೆಚ್ಚು ಕಾಲ ಡ್ಯಾಂನ ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹವಾಗಿದೆ. ಈಗಲೂ ಡ್ಯಾಂನಲ್ಲಿ 120 ಅಡಿಯಷ್ಟು ನೀರು ಸಂಗ್ರಹವಾಗಿದೆ. ಹೀಗೆ ಎರಡೂ ತಿಂಗಳಿಗೂ ಅಧಿಕ ದಿನಗಳ ಕಾಲ ಗಗನಚುಕ್ಕಿ ಜಲಪಾತ ತುಂಬಿ ಹರಿಯುತ್ತಿತ್ತು. ಆಗ ಜಲಪಾತೋತ್ಸವ ಮಾಡುವ ಬದಲು ಈಗ ಗಗನಚುಕ್ಕಿ ಜಲಪಾತ ಸಂಪೂರ್ಣ ಖಾಲಿ ಖಾಲಿಯಾಗಿದ್ದು, ಇದರ ಮದ್ಯೆಯೇ ಇದೇ ತಿಂಗಳ 18 ಹಾಗೂ 19ರಂದು ಗಗನಚುಕ್ಕಿ ಜಲಪಾತೋತ್ಸವ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಇದು ರೈತರನ್ನು ಕೆರಳಿಸಿದ್ದು ಜಿಲ್ಲೆಯ ರೈತರಿಗೆ ಹಿಂಗಾಳು ಬೆಳೆ ಬೆಳೆಯಲು ನೀರನ್ನು ಬಿಡಬೇಕೆಂಬ ಬಗ್ಗೆ ನಿರ್ಧಾರವೇ ಆಗಿಲ್ಲ. ಅಂತಹದರಲ್ಲಿ ಈಗ ಜಲಪಾತೋತ್ಸವ ಮಾಡುವ ಮೂಲಕ ನೀರನ್ನು ಪೋಲು ಮಾಡಲಾಗುತ್ತಿದೆ. ಇದರಿಂದ ಬೇಸಿಗೆ ಕಾಲದಲ್ಲಿ ಬೆಂಗಳೂರು, ಮೈಸೂರು ಮಂಡ್ಯದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ.

ಯಾರೂ ಏನೇ ಅಂದರು ಇದೇ ತಿಂಗಳ 18ರಂದು ಹಾಗೂ 19ರಂದು ಗಗನಚುಕ್ಕಿ ಜಲಪಾತೋತ್ಸವ ಮಾಡಲು ನಿರ್ಧರಿಸಿದ್ದು, ಜಲಪಾತದ ಪಕ್ಕದಲ್ಲೇ ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದೆ. ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, 18ರಂದು ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎರಡು ದಿನ ಸಿನಿಮಾ ನಟ-ನಟಿಯರಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ನೀರು ಹರಿಯುವಾಗ ಗಗನ ಚುಕ್ಕಿ ಜಲಪಾತೋತ್ಸವ ಮಾಡುವ ಬದಲು ಈಗ ಖಾಲಿ ಖಾಲಿಯಾಗಿರುವ ಸಂದರ್ಭದಲ್ಲಿ ಉತ್ಸವ ಮಾಡುವ ಅಗತ್ಯವೇನಿತ್ತು. ತಮಿಳು ನಾಡಿಗೆ ನೀರು ಬಿಡುವುದಕ್ಕಾಗಿಯೇ ಉತ್ಸವ ಮಾಡಲಾಗುತ್ತಿದೆ ಎನ್ನುವ ರೈತರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಅನ್ನದಾನಿ ನಾವು ಕೆಆರ್‌ಎಸ್‌ ನೀರನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ. ಸ್ಥಳೀಯವಾಗಿರುವ ಖಾಸಗಿ ಪವರ್ ಸ್ಟೇಷನ್‍ನವರ ಬಳಿ ನೀರು ಪಡೆದುಕೊಂಡು ನಾವು ಉತ್ಸವ ಮಾಡುತ್ತಿದ್ದೀವಿ ಎಂದು ಸ್ಪಷ್ಟನೆ ನೀಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *