ಉಗ್ರ ಮಸೂದ್ ಸಾವನ್ನಪ್ಪಿಲ್ಲ – ಪಾಕ್ ಮಾಧ್ಯಮ

Public TV
2 Min Read

ಶ್ರೀನಗರ: ಹಲವಾರು ವಿಧ್ವಂಸಕ ಕೃತ್ಯಗಳ ರೂವಾರಿ ಜೈಷ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸಾವನ್ನಪ್ಪಿದ್ದಾನೆ ಎನ್ನುವ ಸುದ್ದಿ ಭಾನುವಾರ ಸಂಜೆ ಭಾರತದ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ರಾತ್ರಿ ಅಜರ್ ಮೃತಪಟ್ಟಿಲ್ಲ ಆತ ಜೀವಂತವಾಗಿದ್ದಾನೆ ಎಂದು ಪಾಕ್ ಮಾಧ್ಯಮವೊಂದು ಹೇಳಿದೆ.

ಜಿಯೋ ಉರ್ದು ವಾಹಿನಿ ಅಜರ್ ಕುಟುಂಬಸ್ಥರನ್ನು ಸಂಪರ್ಕಿಸಿ ಈ ವರದಿ ಮಾಡಿದೆ. ಆದರೆ ಆತನ ಆರೋಗ್ಯ ಮಾಹಿತಿ ಹೇಗಿದೆ ಎನ್ನುವುದು ತಿಳಿದು ಬಂದಿಲ್ಲ. ಪಾಕಿಸ್ತಾನದ ಸಚಿವ ಫಾವದ್ ಚೌಧರಿ ಅವರಲ್ಲಿ ಈ ವಿಚಾರದ ಬಗ್ಗೆ ಕೇಳಿದಾಗ, ನನಗೆ ಈ ಕ್ಷಣದಲ್ಲಿ ಏನು ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

50 ವರ್ಷದ ಅಜರ್ ಮೃತಪಟ್ಟ ಬಗ್ಗೆ ಎರಡು ಸುದ್ದಿಗಳು ಹರಿದಾಡಿತ್ತು. ಭಾರತದ ಏರ್ ಸ್ಟ್ರೈಕ್ ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಒಂದು ಸುದ್ದಿಯಾಗಿದ್ದರೆ ಇನ್ನೊಂದು ರಾವಲ್ಪಿಂಡಿ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಸೂದ್ ಅಜರ್ ಲಿವರ್ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾನೆ ಎನ್ನುವ ಸುದ್ದಿ ಹರಿದಾಡಿತ್ತು.

ಸದ್ಯ ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಪಾಕ್ ವಿದೇಶಾಂಗ ಸಚಿವರೇ ಹೇಳಿದ್ದರು. ಅಜರ್ ಸಾವನ್ನಪ್ಪಿದ್ದಾನೆ ಅಥವಾ ಜೀವಂತವಾಗಿದ್ದಾನೆ ಎನ್ನುವ ಬಗ್ಗೆ ಪಾಕಿಸ್ತಾನ ಸರ್ಕಾರ ಯಾವುದೇ ಅಧಿಕೃತ ಮಾಹಿತಿಯನ್ನು ತಿಳಿಸಿಲ್ಲ.

ಬಾಲಕೋಟ್ ಏರ್ ಸ್ಟ್ರೈಕ್ ನಡೆದ ಬಳಿಕ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯಿಸಿ, ಈಗಿನ ಕಾಲದಲ್ಲಿ ಯಾವುದು ಅಸಾಧ್ಯವಲ್ಲ. ದೂರದ ಅಮೇರಿಕವೇ ಪಾಕ್‍ಗೆ ನುಗ್ಗಿ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‍ನನ್ನು ಹೊಸಕಿ ಹಾಕಿದೆ. ಇಂತಹ ಕೆಲಸ ನಮ್ಮಿಂದ ಆಗುವುದಿಲ್ಲವೇ? ನೆರೆಯ ದೇಶಕ್ಕೆ ನುಗ್ಗಿ ಉಗ್ರರನ್ನು ಮಟ್ಟ ಹಾಕುವ ತಾಕತ್ತು ಭಾರತಕ್ಕೂ ಇದೆ ಎಂದು ಹೇಳಿ ಸರ್ಜಿಕಲ್ ಸ್ಟ್ರೈಕ್ ಅನ್ನು ಸಮರ್ಥಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ನಾವು ಏನು ಮಾಡಬೇಕು ಎಂದು ಪ್ಲಾನ್ ಮಾಡಿದ್ದೇವೋ ಅವು ಎಲ್ಲ ಯಶಸ್ವಿಯಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಬಾಲಕೋಟ್ ಉಗ್ರರ ಕ್ಯಾಂಪ್‍ನಿಂದ ಸಾಗಿಸಲಾಗಿತ್ತು 35 ಶವ: ಪ್ರತ್ಯಕ್ಷದರ್ಶಿಗಳಿಂದ ಬಯಲಾಯ್ತು ಪಾಕ್ ಬಣ್ಣ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *