250 ಚಿತ್ರಗಳಲ್ಲಿ ನಟಿಸಿದ ಹಿರಿಯ ಕಲಾವಿದನಿಗೆ ಲಿವರ್ ವೈಫಲ್ಯ- ಉಳಿಸಿಕೊಳ್ಳಲು ಜಗ್ಗೇಶ್ ಪ್ರಯತ್ನ

Public TV
2 Min Read

ಬೆಂಗಳೂರು: ನವರಸನಾಯಕ ಜಗ್ಗೇಶ್ ಇತ್ತೀಚೆಗಷ್ಟೇ ಒಂದು ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಕಲಾವಿದನ ಬಗ್ಗೆ ಮಾತನಾಡಿ ಭಾವುಕರಾಗಿದ್ದರು. ಇದೀಗ ಆ ಕಲಾವಿದ ಯಾರು ಎಂಬುದನ್ನು ತಿಳಿಸಿದ್ದಾರೆ.

ಜಗ್ಗೇಶ್ ಅಂದು ಕನ್ನಡ ಚಿತ್ರರಂಗದ ಪೋಷಕ ನಟ ಕಿಲ್ಲರ್ ವೆಂಕಟೇಶ್ ಬಗ್ಗೆ ಮಾತನಾಡಿದ್ದು. ಇವರು ಒಂದು ಕಾಲದಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದರು. ಆದರೆ ಇಂದು ವೆಂಕಟೇಶ್ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ಈ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ಬೇಸರವ್ಯಕ್ತಪಡಿಸಿದ್ದಾರೆ.

“250 ಕನ್ನಡ ಚಿತ್ರ ನಟಿಸಿದ ಮಿತ್ರ ಕಿಲ್ಲರ್ ವೆಂಕಟೇಶ್. ಇಂದು ಲಿವರ್ ವೈಫಲ್ಯದಿಂದ ಸಾವು ಬದುಕಿನ ಹೋರಾಟ ಮಾಡುತ್ತಿದ್ದಾನೆ. ಇವನ ವಿಷಯವೇ ನಾನು ಚಂದನವನ ಅವಾರ್ಡ್ ವೇದಿಕೆಯಲ್ಲಿ ಮಾತಾಡಿದ್ದು. ನನ್ನ ಕೈಲಾದ ಸಹಾಯ ಮಾಡಿ ಇವನ ಉಳಿಸಿಕೊಳ್ಳಲು ಯತ್ನಿಸುತಿರುವೆ. ತುಂಬಾ ದುಃಖವಾಯಿತು ಹಿರಿಯ ಕಲಾವಿದರ ಸ್ಥಿತಿ ಕಂಡು. ರಾಯರೆ ಕಾಪಾಡಬೇಕು ಇಂಥ ಕಲಾವಿದರ..ಹರಿ ಓಂ” ಎಂದು ಜಗ್ಗೇಶ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೆ ಒಂದು ಅವಾರ್ಡ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸುಮಾರು 200ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿರುವ ಕಲಾವಿದ ನನಗೆ ಫೋನ್ ಮಾಡಿ ಭೇಟಿ ಮಾಡಿದ್ದನು. ಅವನು ನನ್ನ ಬಳಿ ಬಂದು ಮಗು ತರ ಕಣ್ಣೀರು ಹಾಕಿದ. ಯಾಕೆಂದರೆ ಅವನ ಬಳಿ ಒಂದು ಕೆ.ಜಿ ಅಕ್ಕಿ ತರಲು ಹಣವಿರಲಿಲ್ಲ. ಇದು ನಮ್ಮ ಚಿತ್ರರಂಗ ಎಂದು ಕಲಾವಿದನ ಇಂದಿನ ಬದುಕನ್ನು ನೆನೆದು ಬೇಸರ ವ್ಯಕ್ತಪಡಿಸಿದ್ದರು.

ಜಗ್ಗೇಶ್, ಕಿಲ್ಲರ್ ವೆಂಕಟೇಶ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಕಿಲ್ಲರ್ ವೆಂಕಟೇಶ್ ಒಂದು ಕಾಲದಲ್ಲಿ ಬೇಡಿಕೆಯ ಖಳನಟ ಹಾಗೂ ಪೋಷಕನಟರಾಗಿದ್ದರು. ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಜಗ್ಗೇಶ್ ಹಾಗೂ ಕಿಲ್ಲರ್ ವೆಂಕಟೇಶ್ ಜೊತೆಯಾಗಿ ‘ರಣಧೀರ’ ಸಿನಿಮಾದಲ್ಲಿ ಅಭಿನಯಿಸಿದ್ದರು. ಅಂದಿನಿಂದಲೂ ವೆಂಕಟೇಶ್ ಪೋಷಕ ಪಾತ್ರಗಳಲ್ಲಿಯೇ ಅಭಿನಯಿಸುತ್ತಿದ್ದರು. ಆದರೆ ಬರುಬರುತ್ತಾ ಇವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದೆ. ಹೀಗಾಗಿ ವೆಂಕಟೇಶ್ ಯಾವುದೇ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ.

ಸದ್ಯಕ್ಕೆ ಕಿಲ್ಲರ್ ವೆಂಕಟೇಶ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಜೊತೆಗೆ ಚಿಕಿತ್ಸೆಗೆ ಹಣದ ಅವಶ್ಯಕತೆ ಕೂಡ ಇದೆ. ಹೀಗಾಗಿ ಕುಟುಂಬದವರು ಆಸ್ಪತ್ರೆಗೆ ಹಣ ಕಟ್ಟಲು ಪರಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *