ಡಬ್ಬಿಂಗ್ ಚಿತ್ರ ಬಿಡುಗಡೆಯಾದ್ರೆ ಆ ಚಿತ್ರಮಂದಿರಕ್ಕೆ ಬೆಂಕಿ: ಜಗ್ಗೇಶ್

Public TV
2 Min Read

ಬೆಂಗಳೂರು:ಡಬ್ಬಿಂಗ್ ಚಿತ್ರ ಬಿಡುಗಡೆಯಾದರೆ ಆ ಚಿತ್ರಮಂದಿರಕ್ಕೆ ಬೆಂಕಿ ಹಾಕಲು ಸಿದ್ಧ ಎಂದು ನಟ ಜಗ್ಗೇಶ್ ಹೇಳಿದ್ದಾರೆ.

ಮಾರ್ಚ್ 3ರಂದು ಬಿಡುಗಡೆಯಾಗಲಿರುವ ಸತ್ಯದೇವ್ ಐಪಿಎಸ್ ಚಿತ್ರವನ್ನು ವಿರೋಧಿಸಿ ಪ್ರೆಸ್ ಕ್ಲಬ್‍ನಲ್ಲಿ ಆಯೋಜನೆಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಡಬ್ಬಿಂಗ್ ಚಿತ್ರ ಬಿಡುಗಡೆಯಾಗಬಾರದು. ನಾನು ಜೈಲಿಗೆ ಹೋದರೂ ಚಿಂತೆಯಿಲ್ಲ. ಒಂದು ವೇಳೆ ಬಿಡುಗಡೆಯಾದರೆ ಆ ಚಿತ್ರ ಮಂದಿರಕ್ಕೆ ಬೆಂಕಿ ಹಚ್ಚುತ್ತೇವೆ ಆಕ್ರೋಶ ವ್ಯಕ್ತಪಡಿಸಿದರು.

ಹುಚ್ಚು ಕಲ್ಪನೆ: ತಮಿಳನಾಡಿನಲ್ಲಿ ಹಿಂದಿ ಭಾಷೆಯನ್ನು ಬಿಟ್ಟಿಲ್ಲ. ಬಹಳ ಜನ ಡಬ್ಬಿಂಗ್ ಬೆಂಬಲಿಸುತ್ತಾರೆ ಎನ್ನುವ ಹುಚ್ಚು ಕಲ್ಪನೆ ಇದೆ. ಹೃದಯದಿಂದ ಕನ್ನಡವನ್ನು ಪ್ರೀತಿಸುವ ಅಭಿಮಾನಿಗಳು ಅಖಂಡ  ಕರ್ನಾಟಕದಲ್ಲಿ ಇದ್ದಾರೆ. ಅವರೆಲ್ಲ ಹೋರಾಟಕ್ಕೆ ಇಳಿದರೆ ಡಬ್ಬಿಂಗ್ ಬೇಕು ಅಂತ ಹೇಳುತ್ತಿರುವವರು ಕೊಚ್ಚಿಕೊಂಡು ಹೋಗುತ್ತಾರೆ ಎಂದರು.

ಜ್ಲಾನ ಸಿಗಲ್ಲ: ಅಂದು ಕನ್ನಡ ಚಿತ್ರಗಳಿಗೆ ಸ್ಟುಡಿಯೋ ಸಿಕ್ಕುತ್ತಿರಲಿಲ್ಲ. ಅಂತಹ ಸಮಯದಲ್ಲಿ ಡಬ್ಬಿಂಗ್‍ನ ಡಾ.ರಾಜ್‍ಕುಮಾರ್ ಅನಕೃ ನೇತೃತ್ವದಲ್ಲಿ ವಿರೋಧಿಸಿದರು ಎನ್ನುವ ಅಂತಹ ಕಲ್ಪನೆ ಇದ್ರೆ ಬಿಟ್ಬಿಡೋದು ಒಳ್ಳೆಯದು. ಕನ್ನಡದ ಜ್ಞಾನ ಡಬ್ಬಿಂಗ್ ನಿಂದ ಆಗುತ್ತದೆ ಎನ್ನುವುದು ಸುಳ್ಳು ಎಂದು ಜಗ್ಗೇಶ್ ತಿಳಿಸಿದರು.

ಅಲ್ಲಿ ಬಿಡುಗಡೆಯಾಗುತ್ತಾ:   ನನ್ನ ಕಾಳಜಿ ಇರುವುದು ಮುಂದಿನ ಪೀಳಿಗೆಯ ಉಳಿವಿಗಾಗಿ. ಡಬ್ಬಿಂಗ್ ಬಂದ್ರೆ ನಮ್ಮ ಚಿತ್ರರಂಗದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ತಮಿಳು ನಾಡಲ್ಲಿ 17-18 ಲಕ್ಷ, ಆಂಧ್ರದಲ್ಲಿ 25 ಲಕ್ಷ ಜನ ಕನ್ನಡಿಗರಿದ್ದಾರೆ. ಅಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ನಾನು ರಜನಿಕಾಂತ್ ಸಿನಿಮಾ ನೋಡಿದ್ದು ಅವರು ಕನ್ನಡಿಗರು ಎನ್ನುವ ಕಾರಣಕ್ಕೆ ಎಂದು ತಿಳಿಸಿದರು.

ಸುಮಾರು 300, 400 ಚಿತ್ರಗಳನ್ನು ಈಗಾಗಲೇ ಡಬ್ಬಿಂಗ್ ಮಾಡಿದ್ದಾರೆ. ಇದಾದ ಬಳಿಕ ಟಿವಿ ಧಾರವಾಹಿಗಳು ಡಬ್ಬಿಂಗ್ ಆಗಿ ಕನ್ನಡಕ್ಕೆ ಬರುತ್ತವೆ. ಆಂಧ್ರದ ಮಂದಿ ಬೆಂಗಳೂರಿನ ಗಾಂಧಿ ನಗರದಲ್ಲೇ ಕಚೇರಿ ಆರಂಭಿಸುತ್ತಾರೆ. ಈ ಎಲ್ಲ ಪರಿಣಾಮದಿಂದಾಗಿ 6 ಲಕ್ಷ ಮಂದಿಯ ಜೀವನ ಬೀದಿಗೆ ಬೀಳುತ್ತದೆ ಎಂದು ಜಗ್ಗೇಶ್ ವಿವರಿಸಿದರು.

ವಾಟಾಳ್ ನಾಗರಾಜ್ ಮಾತನಾಡಿ, ಡಬ್ಬಿಂಗ್ ಚಿತ್ರ ವಿರೋಧಿಸಿ ಪೊಲೀಸರ ಬೂಟ್ ಪೆಟ್ಟು ತಿಂದವನು ನಾನು. ಡಬ್ಬಿಂಗ್ ತೀರಾ ಕೆಟ್ಟ ಸಂಸ್ಕೃತಿಯಾಗಿದ್ದು, ಅದು ಯಾವ ರೀತಿ ಬಿಡುಗಡೆ ಮಾಡ್ತಿರೋ ನಾವು ನೋಡುತ್ತೇವೆ. ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಲು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಡಬ್ಬಿಂಗ್ ಕಾಲಿಡೋದಕ್ಕೆ ಕನ್ನಡ ಒಕ್ಕೂಟ ಬಿಡುವುದಿಲ್ಲ ಎಂದು ತಿಳಿಸಿದರು.

ಮಾರ್ಚ್ 6ರಂದು 11 ಘಂಟೆಗೆ ಎಲ್ಲಾ ಚಿತ್ರೋದ್ಯಮದವರ ಸಭೆ ಕರೆದಿದ್ದೇವೆ. 11ರಂದು ಚಿತ್ರರಂಗ ಬಂದ್ ಮಾಡಿ ಮೈಸೂರು ಬ್ಯಾಂಕ್ ನಿಂದ ಬೃಹತ್ ಮೆರವಣಿಗೆ ಮಾಡಲಾಗುವುದು ಎಂದು ವಾಟಾಳ್ ನಾಗರಾಜ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಂಗಾಯಣ ರಘು, ನಿರ್ದೇಶಕ ಎನ್ ಆರ್ ರಮೇಶ್, ಹಿರಿಯ ನಟ ಶಿವರಾಂ, ಸಾಧು ಕೋಕಿಲಾ ಮತ್ತು ಹಿರಿಯ ನಟ ಶ್ರೀನಿವಾಸ್ ಮೂರ್ತಿ ಉಪಸ್ಥಿತರಿದ್ದರು

.

Share This Article
Leave a Comment

Leave a Reply

Your email address will not be published. Required fields are marked *