ಜಗ್ಗೇಶ್ ಅಭಿಮಾನಿಗಳಿಂದ ಪುನೀತ್ ಹೆಸರಲ್ಲಿ ವೃದ್ಧೆಗೆ ಸೂರು

Public TV
2 Min Read

ತುಮಕೂರು: ಪವರ್‌ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಒಂದು ತಿಂಗಳು ಕಳೆದಿದೆ. ಆದರೆ ಅವರ ಮೇಲಿನ ಅಭಿಮಾನ ಮಾತ್ರ ಅಭಿಮಾನಿಗಳಲ್ಲಿ ಇನ್ನು ಹೆಚ್ಚಾಗುತ್ತಿದೆ. ಇದಕ್ಕೆ ಉದಾಹರಣೆ ಎಂದರೆ ನವರಸ ನಾಯಕ ಜಗ್ಗೇಶ್ ಅಭಿಮಾನಿಗಳು ಅಪ್ಪು ಅವರ ಹೆಸರಲ್ಲಿ ವೃದ್ಧೆಗೆ ಮನೆಯೊಂದನ್ನು ಕಟ್ಟಿಕೊಟ್ಟು ‘ಪರಮಾತ್ಮ’ನನ್ನು ಕಾಣುತ್ತಿದ್ದಾರೆ.

ಕನ್ನಡಿಗರ ಕಣ್ಮಣಿ, ಪುನೀತ್ ರಾಜ್‍ಕುಮಾರ್ ಮೇಲಿನ ಅಭಿಮಾನ ನಿರಂತರವಾಗಿ ವಿವಿಧ ಆಯಾಮದಲ್ಲಿ ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರರಂಗದ ಎಲ್ಲ ನಾಯಕ ನಟರ ಅಭಿಮಾನಿಗಳು ಅಪ್ಪು ಅಗಲಿಕೆಗೆ ಕಂಬನಿ ಮಿಡಿದಿದ್ದು ನಮ್ಮ ಕಣ್ಣ ಮುಂದೆ ಇದೆ. ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಜಗ್ಗೇಶ್ ಅವರ ಅಭಿಮಾನಿಗಳು ಪುನೀತ್ ಅವರ ಹೆಸರಲ್ಲಿ ಅನಾಥ ವೃದ್ಧೆಗೆ ಸೂರೊಂದನ್ನು ಕಲ್ಪಿಸಿ ಕೊಟ್ಟು ಅಪ್ಪು ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ಆಂಧ್ರಪ್ರದೇಶ ಪ್ರವಾಹ ಸಂತ್ರಸ್ತರಿಗೆ ಮಿಡಿದ ಟಾಲಿವುಡ್ ಸ್ಟಾರ್ಸ್

ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ಫ್ರೆಂಡ್ಸ್ ಗ್ರೂಪ್ ಹಾಗೂ ಜಗ್ಗೇಶ್ ಅಭಿಮಾನಿಗಳು ಸೇರಿ ರಂಗಮ್ಮ ವೃದ್ಧೆಗೆ ಪುಟ್ಟ ಮನೆಯೊಂದನ್ನು ಕಟ್ಟಿಕೊಟ್ಟಿದ್ದಾರೆ. ಈ ಮನೆಗೆ ‘ಪುನೀತ್ ನಿಲಯ’ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ.

ಗಿರಿನಗರ ನಿವಾಸಿ ರಂಗಮ್ಮ ಅವರು ಗುಡಿಸಲಿನಲ್ಲಿ ವಾಸ ಮಾಡುತ್ತಾ ಶೋಚನೀಯ ಸ್ಥಿತಿಯಲ್ಲಿ ಇದ್ದರು. ಇದನ್ನು ಮನಗಂಡ ಜಗ್ಗೇಶ್ ಅಭಿಮಾನಿಗಳು ಹಣ ಹೊಂದಿಸಿ ಸ್ವತಃ ತಾವೇ ಶ್ರಮದಾನ ಮಾಡಿ ರಂಗಮ್ಮಗೆ ಸೂರು ಕಲ್ಪಿಸಿ ಕೊಟ್ಟಿದ್ದಾರೆ. ಈ ಸೂರಿಗೆ ಪುನೀತ್ ನಿಲಯ ಎಂದು ಹೆಸರಿಟ್ಟು ಅಪ್ಪು ಮೇಲಿನ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಮನೆ ನಿರ್ಮಾಣ ಕಳೆದ ನಾಲ್ಕು ತಿಂಗಳ ಹಿಂದೆಯೇ ಶುರುವಾದರೂ ಕೆಲ ಕಾರಣಗಳಿಂದ ಅರ್ಧಕ್ಕೆ ನಿಂತಿತ್ತು. ಅಪ್ಪು ಸಾವಿನ ಬಳಿಕ ಜಗ್ಗೇಶ್ ಅಭಿಮಾನಿಗಳು ಮತ್ತೆ ಕಾರ್ಯಪ್ರವರ್ತರಾದರು. ಅಪ್ಪು ಹೆಸರಲ್ಲಿ ಮನೆ ಕಟ್ಟಿ ಬಿಡೋಣ ಎಂದು ಅವರ ನಾಮಸ್ಮರಣೆ ಮಾಡುತ್ತಾ ಈ ಮನೆ ಸಂಪೂರ್ಣ ಮಾಡಿದರು. ಒಂದು ತಿಂಗಳಲ್ಲಿ ಮನೆ ನಿರ್ಮಾಣದ ಎಲ್ಲ ಕೆಲಸ ಮುಗಿಸಿ, ಸಿದ್ದರಬೆಟ್ಟ ವೀರಭದ್ರ ಶಿವಾಚಾರ್ಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಇಂದು ಗೃಹ ಪ್ರವೇಶ ಮಾಡಲಾಯಿತು. ಇದನ್ನೂ ಓದಿ:  ಉತ್ತರ ಪ್ರದೇಶದ ಸರ್ಕಾರಿ ನೌಕರರು, ವಕೀಲರಿಗೆ 1 ರೂ.ಗೆ ಸಿಗಲಿದೆ ಮನೆ

ಫ್ರೆಂಡ್ಸ್ ಗ್ರೂಪ್ ಹಾಗೂ ಜಗ್ಗೇಶ್ ಅಭಿಮಾನಿ ಸಂಘದಲ್ಲಿ ಸರಿಸುಮಾರು 800ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಅವರಲ್ಲಿ ಗಾರೆ ಕೆಲಸ, ಎಲೆಕ್ಟ್ರಿಕ್, ಪ್ಲಂಬಿಂಗ್ ಹೀಗೆ ಎಲ್ಲ ಕೆಲಸ ಮಾಡುವ ಸದಸ್ಯರಿದ್ದಾರೆ. ಅವರೆಲ್ಲರೂ ತಮ್ಮ-ತಮ್ಮ ಪಾಲಿನ ಕೆಲಸ ಮಾಡಿ, ದಾನಿಗಳಿಂದ ಹಣ ಸಂಗ್ರಹಿಸಿ ಕಡಿಮೆ ಅವಧಿ ಮತ್ತು ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಟ್ಟಿದ್ದಾರೆ. 15*20 ಸುತ್ತಳತೆಯ ಸೈಟಿನಲ್ಲಿ ಮನೆಕಟ್ಟಿದ್ದಾರೆ. ಒಂದು ಹಾಲ್, ಅಡುಗೆ ಕೋಣೆ, ಅಟ್ಯಾಚ್ ಬಾತ್ ರೂಂ ಅನ್ನು ವ್ಯವಸ್ಥೆ ಮಾಡಿಕೊಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *