– ಮಕ್ಕಳು ಸುಸಂಸ್ಕೃತರಾಗಲು ಪೋಷಕರು ಮಾದರಿಯಾಗ್ಬೇಕು
ಚಿತ್ರದುರ್ಗ: ಮಕ್ಕಳಿಗೆ ಸಂಸ್ಕಾರ ಕಲಿಸುವುದು ಪೋಷಕರ ಆದ್ಯ ಕರ್ತವ್ಯ. ಹೀಗಾಗಿ ಪೋಷಕರು ನ್ಯಾಯ, ಧರ್ಮ ಹಾಗೂ ಸತ್ಯದ ಪ್ರತೀಕವಾಗಿ ಬದುಕು ಸಾಗಿಸುವ ಮೂಲಕ ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಬೇಕು ಎಂದು ನಟ ಜಗ್ಗೇಶ್ ಹೇಳಿದರು.
ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸಯಳನಾಡು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಏರ್ಪಡಿಸಿದ್ದ ಶಾಲಾ ವಾರ್ಷಿಕೊತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದಾರೆ. ಪೋಷಕರು ನಡೆದ ದಾರಿಯಲ್ಲಿ ಮಕ್ಕಳು ನಡೆಯುತ್ತಾರೆ. ಹೀಗಾಗಿ ಮಕ್ಕಳ ಮನಸ್ಸಲ್ಲಿ ಏನಿದೆ ಎಂಬುದನ್ನು ಅರಿತುಕೊಂಡು ಅವರ ಮನಸ್ಸಿಗೆ ಒಪ್ಪುವ ಗುರಿಯನ್ನು ರೂಪಿಸುವ ಅದ್ಭುತವಾದ ಪೋಷಕರು ನೀವು ಆಗಬೇಕು ಎಂದರು.
ಎರಡು ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುವುದು ನಮ್ಮ ಸಂಪ್ರದಾಯ. ಆದರೆ ಈಗ ನಮ್ಮಲ್ಲಿ ನಿಮ್ಮಲ್ಲಿ ಆ ಸಂಸ್ಕೃತಿ ಇದಿಯಾ ಎಂದು ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಬೇಕು. ಇವತ್ತು ನಮ್ಮ ಸಂಸ್ಕೃತಿ ಬಿಟ್ಟು ವಿದೇಶಿಯರ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದೀವಿ. ನಾವು ಎಲ್ಲದರೂ ಹೋದರೆ ಶೇಕ್ ಹ್ಯಾಂಡ್ ಮಾಡುತ್ತೇವೆ. ನಾವು ಎರಡು ಕೈಗಳನ್ನು ಮುಗಿಯುವುದರಿಂದ ನಮ್ಮ ದೇಹದಲ್ಲಿರುವ ಶಕ್ತಿ ನಮ್ಮಲ್ಲೇ ಇರುತ್ತದೆ. ನಾವು ಶೇಕ್ ಹ್ಯಾಂಡ್ ಮಾಡುವುದರಿಂದ ಅವರ ದರಿದ್ರತನಗಳು ನಮಗೆ ಬರುತ್ತವೆ ಎಂದರು.
ಯಾವ ತಂದೆ-ತಾಯಿಗಳು ಮನೆಯಲ್ಲಿ ನೇರವಾಗಿ ಇರ್ತಾರೆ, ಅವರ ಮಕ್ಕಳು ಬದುಕಿನಲ್ಲಿ ಯಾವ ತಪ್ಪು ಮಾಡುವುದಿಲ್ಲ, ಅವರು ಸರಿಯಾದ ಹಾದಿಯಲ್ಲಿ ನಡೆಯುತ್ತಾರೆ. ಅಲ್ಲದೆ ನಾನು ಬಾಲ್ಯ ವ್ಯವಸ್ಥೆಯಲ್ಲಿದ್ದಾಗ ನನ್ನ ಅಜ್ಜಿ, ಚಿಕ್ಕಮ್ಮಂದಿರು ಬೆಳಿಗ್ಗೆ ಎದ್ದು ರಾಗಿ ಬೀಸುವರು. ತಾತಂದಿರು ಬೆಳಿಗ್ಗೆ ಎದ್ದ ತಕ್ಷಣ ಕೈಕಾಲು ತೋಳೆದು ಹೊಲದಲ್ಲಿ ಕೆಲಸ ಮಾಡುವರು. ಜೊತೆಗೆ ಮಕ್ಕಳಿಗೆ ಜೀವನದ ಪಾಠವನ್ನು ಕಲಿಸುತ್ತಿದ್ದರು. ಯಾವ ರೀತಿ ಮಾತನಾಡಬೇಕು, ದೊಡ್ಡವರೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು, ಯಾರಾದರೂ ಮನೆಗೆ ದೊಡ್ಡವರು ಬಂದರೆ ಕಾಲಿಗೆ ನಮಸ್ಕಾರ ಮಾಡು ಅಂತಾ ಹೇಳಿಕೊಡುವರು. ಎರಡು ಕೈಗಳನ್ನು ಜೋಡಿಸಿ ನಮಸ್ಕಾರ ಮಾಡು ಎನ್ನುವರು. ಈಗ ಎಲ್ಲಿ ಹೋಯ್ತು ಆ ಸಂಪ್ರದಾಯ? ಎಂದು ಪ್ರಶ್ನಿಸಿದರು.
ಸನಾತನ ಧರ್ಮದಲ್ಲಿ ಪರಸ್ಪರ ಭೇಟಿ ಮಾಡಿದಾಗ ಎರಡು ಕೈಗಳನ್ನು ನಮಸ್ಕಾರ ಮಾಡುವುದು. ನಮ್ಮಲ್ಲಿ ಹಳೇ ಸಂಪ್ರದಾಯ ಹೋಗಿ ಶೇಕ್ ಹ್ಯಾಂಡ್ ಹಂತಕ್ಕೆ ತಲುಪಿದ್ದೀವಿ. ಎರಡು ಕೈಗಳನ್ನು ಜೋಡಿ ನಮಸ್ಕಾರ ಮಾಡಿದಾಗ ನಮ್ಮಲ್ಲಿರುವ ಶಕ್ತಿ, ನಮ್ಮಲ್ಲೇ ಇರುತ್ತದೆ ಎಂದು ನಾವು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕೊಡಿಸಬೇಕು. ಶಿಸ್ತು, ಗುರಿಯನ್ನು ಕಲಿಸಬೇಕು ಇದನ್ನು ಯಾರು ಮಾಡುತ್ತಿಲ್ಲ ಎಂದರು.
ಈ ಕಾರ್ಯಕ್ರಮದಲ್ಲಿ ಐಪಿಎಸ್ ಪೋಲಿಸ್ ಅಧಿಕಾರಿ ಸಂದೀಪ್ ಪಾಟೀಲ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ವಿಶ್ವನಾಥ್ ಹೀರೆಮಠ್, ಡಿ.ಟಿ. ಶ್ರೀನಿವಾಸ್, ಶಾಲೆಯ ಮಹಾಪೋಷಕ ನಾ. ತಿಪ್ಪೇಸ್ವಾಮಿ, ಪ್ರಾಂಶುಪಾಲ ಚಂದ್ರಯ್ಯ ಮತ್ತಿತರರು ಭಾಗವಹಿಸಿದ್ದರು.