ಐತಿಹಾಸಿಕ ಬೆಟ್ಟದ ಬಸವೇಶ್ವರ ಸನ್ನಿಧಿಯಲ್ಲಿ ಭಕ್ತರ ಸೇವೆಯಿಂದಲೇ ಜಾತ್ರೆ ಆಚರಣೆ

Public TV
2 Min Read

– ಬಯಲು ದೇವಾಲಯದ ಬೃಹತ್ ನಂದಿಗೆ ನಿತ್ಯ ಸೇವೆಯ ಅಭಿಷೇಕ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಜಾಗಟಗಲ್ ಸುಕ್ಷೇತ್ರದಲ್ಲಿ ಐತಿಹಾಸಿಕ ಪ್ರಸಿದ್ದಿ ಪಡೆದಿರುವ ಬೆಟ್ಟದ ಬಸವೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ರಾಜ್ಯದ ನಾನಾ ಕಡೆಗಳಲ್ಲಿ ನಡೆಯುವ ಜಾತ್ರೆಗಿಂತಲೂ ಭಿನ್ನವಾಗೇ ನಡೆಯುವ ಬಸವಣ್ಣನ ಜಾತ್ರೆಯಲ್ಲಿ ಆಚರಣೆಗಿಂತ ಸೇವೆಗೆ ಹೆಚ್ಚು ಪ್ರಾತಿನಿಧ್ಯ ನೀಡಲಾಗುತ್ತದೆ. ಇಲ್ಲಿ ದೊಡ್ಡ ತೇರು ಇಲ್ಲ, ಮಹಾ ರಥೋತ್ಸವವೂ ನಡೆಯಲ್ಲ, ಉಚ್ಚಾಯಿ ಎಳೆಯುವುದಿಲ್ಲ ಆದ್ರೂ ಇಡೀ ಗ್ರಾಮ ಸಾವಿರಾರು ಜನ ಭಕ್ತರಿಂದ ತುಂಬಿಹೋಗುತ್ತದೆ.

ಇಲ್ಲಿನ ಬೆಟ್ಟದ ಮೇಲಿರುವ ಕರಿಗೂಳಿ ಎಂದು ಕರೆಯಿಸಿಕೊಳ್ಳುವ, ನಿಸರ್ಗದತ್ತವಾಗಿ ಬೃಹತ್ ಕಲ್ಲಿನಲ್ಲಿ ಮೂಡಿಬಂದಿರುವ ನಂದಿ ಬಸವಣ್ಣನಾಗಿದ್ದಾನೆ. ಜಾಗೃತ ಶಕ್ತಿಕೇಂದ್ರವಾಗಿರುವ ಈ ಸ್ಥಳದ ಬಗ್ಗೆ ಭಕ್ತರಲ್ಲಿ ಅಪಾರ ನಂಬಿಕೆಯಿದೆ. ನೂರಾರು ವರ್ಷಗಳ ಹಿಂದೆ ಬಸವಣ್ಣನ ಪರಮಭಕ್ತನಾದ ಶರಣ ರಾಚಯಪ್ಪ ತಾತ ಪವಾಡ ಪುರುಷನೆಂದೇ ಪ್ರಸಿದ್ದಿ ಪಡೆದವರು. ರಾಚಯಪ್ಪ ತಾತನ ಗದ್ದುಗೆಗೂ ಇಲ್ಲಿ ಬಹಳ ಮಹತ್ವವಿದೆ. ಇಲ್ಲಿಗೆ ಬರುವ ಭಕ್ತರು ಬಸವಣ್ಣ ಹಾಗೂ ರಾಚಯಪ್ಪ ತಾತನ ಸೇವೆಯಲ್ಲಿ ತೊಡಗುತ್ತಾರೆ.

ವರ್ಷಕ್ಕೆ ಮೂರು ಬಾರಿ ಇಲ್ಲಿ ಜಾತ್ರಾಮಹೋತ್ಸವ ನಡೆಯುತ್ತವೆ. ಈ ಬಾರಿ ಡಿಸೆಂಬರ್ 16 ರಿಂದ 18ರ ವರೆಗೆ ನಡೆಯುತ್ತಿರುವ ಎಳ್ಳುಅಮವಾಸ್ಯೆ ಜಾತ್ರೆಯನ್ನ ದೊಡ್ಡ ಜಾತ್ರೆ ಅಂತಲೂ ಶ್ರಾವಣ ಮಾಸ, ಶಿವರಾತ್ರಿಯಲ್ಲಿ ನಡೆಯುವ ಜಾತ್ರೆಗಳನ್ನ ಸಣ್ಣ ಜಾತ್ರೆ ಅಂತಲೂ ಕರೆಯುತ್ತಾರೆ.

ದೊಡ್ಡ ಜಾತ್ರೆಯಲ್ಲಿ ಬಹುಮುಖ್ಯವಾಗಿ ಆಚರಣೆಗಿಂತ ಸೇವಾಗಳು ನಡೆಯುತ್ತವೆ. ತಾಲೂಕಿನ ಮಸರಕಲ್ ಗ್ರಾಮದಿಂದ ಕಾಲ್ನಡಿಗೆಯಲ್ಲೇ ಬಸವಣ್ಣನಿಗೆ ಪ್ರತೀವರ್ಷ ಬಾಸಿಂಗವನ್ನ ತರುವ ಭಕ್ತರಿಂದ ಸೇವೆಗಳು ಆರಂಭಗೊಳ್ಳುತ್ತದೆ. ಬಾಸಿಂಗದ ಜೊತೆ ಇಡೀ ರಾತ್ರಿ ನಂದಿಕೋಲು ಸೇವೆ ನಡೆಯುತ್ತದೆ. ಬಳಿಕ ಇಲ್ಲಿನ ನಾಲ್ಕು ದಿಕ್ಕಿನ ನಾಲ್ಕು ಮಠಗಳ ಶರಣರಿಂದ ಸೇವೆ ಆರಂಭಗೊಳ್ಳುತ್ತದೆ. ಬಸವಣ್ಣ ಹಾಗೂ ಶರಣರ ಸಾಲು ಗದ್ದುಗೆಗಳಿಗೆ ಸೇವೆಯ ರೂಪದಲ್ಲಿ ಪ್ರಾರ್ಥನೆಯನ್ನ ಸಲ್ಲಿಸಲಾಗುತ್ತದೆ. ಬಳಿಕ ಬೆಟ್ಟದ ಮೇಲೆ ಪುಟ್ಟರಥೋತ್ಸವ ನೆರವೇರುತ್ತದೆ. ರಥೋತ್ಸವದಲ್ಲಿ ನಾನಾ ಕಡೆಗಳಿಂದ ಬಂದ ಭಕ್ತರು ಪಾಲ್ಗೊಳ್ಳುತ್ತಾರೆ.

ಜಾತ್ರೆಯ ವೇಳೆ ರಾಯಚೂರು ಮಾತ್ರವಲ್ಲದೆ ರಾಜ್ಯದ ಮೂಲೆಮೂಲೆಯಿಂದಲೂ ಭಕ್ತರ ದಂಡು ಹರಿದುಬರುತ್ತದೆ. ಇಷ್ಟಾರ್ಥ ನೆರವೇರಿದ ಭಕ್ತರು ಧೀಡ್ ನಮಸ್ಕಾರ, ಜ್ಯೋತಿ ಹೊತ್ತುಬರುವುದು ಸೇರಿದಂತೆ ನಾನಾ ಹರಕೆಗಳನ್ನ ಈ ವೇಳೆ ತೀರಿಸುತ್ತಾರೆ. ಇಲ್ಲಿಗೆ ಬರುವ ಭಕ್ತರಿಗಾಗಿ ಅನ್ನ ದಾಸೋಹ, ಕುಡಿಯುವ ನೀರು ಸೇರಿದಂತೆ ಸಕಲ ವ್ಯವಸ್ಥೆಗಳನ್ನ ಬೆಟ್ಟದ ಬಸವಣ್ಣ ಹಾಗೂ ರಾಚಯಪ್ಪ ತಾತ ಗದ್ದುಗೆ ದೇವಾಲಯಗಳ ಆಡಳಿತ ಮಂಡಳಿಗಳು ಮಾಡುತ್ತವೆ.

ಇನ್ನೂ ಬಸವಣ್ಣನಿಗೆ ಭಕ್ತರು ನಾನಾ ರೀತಿಯಲ್ಲಿ ಸೇವೆಯನ್ನ ಅರ್ಪಿಸುತ್ತಾರೆ. ಕಾಣಿಕೆ, ಹಾರ, ತೆಂಗಿನಕಾಯಿ, ಗಂಟೆಗಳು, ಆಕಳು ಕರು ಸಮರ್ಪಣೆ ಮಾಡುತ್ತಾರೆ. ಇದರ ಜೊತೆ ಗ್ರಾಮದ ಕಲಾವಿದ ಭಕ್ತ ವೆಂಕನಗೌಡ ಬಸವಣ್ಣನ ಚಿತ್ರ ಬಿಡಿಸುವ ಮೂಲಕ ಸುಮಾರು ವರ್ಷಗಳಿಂದ ಭಕ್ತಿ ಮೆರೆಯುತ್ತಿದ್ದಾನೆ. ಬೆಲೆಯನ್ನ ನಿಗದಿಗೊಳಿಸದ ಬಸವಣ್ಣನ ಚಿತ್ರವನ್ನ ದುಬಾರಿ ಬೆಲೆಗೆ ಭಕ್ತರು ಕೊಂಡುಕೊಳ್ಳುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *