ಒಂದೇ ದಿನಕ್ಕೆ 1.26 ಲಕ್ಷ ಮಂದಿಗೆ ಸರ್ಕಾರಿ ಕೆಲಸ – ದಾಖಲೆ ಬರೆದ ಆಂಧ್ರ ಸರ್ಕಾರ

Public TV
2 Min Read

ಹೈದರಾಬಾದ್: ಒಂದೇ ದಿನಕ್ಕೆ ಬರೋಬ್ಬರಿ 1.26 ಲಕ್ಷ ಮಂದಿಗೆ ಸರ್ಕಾರಿ ಕೆಲಸ ನೀಡುವ ಮೂಲಕ ಆಂಧ್ರ ಪ್ರದೇಶ ಸರ್ಕಾರ ದಾಖಲೆ ನಿರ್ಮಿಸಿದ್ದು, ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಕಾರ್ಯವೈಖರಿ ಎಲ್ಲರ ಮನ ಗೆದ್ದಿದೆ.

ಭಾರತದಲ್ಲಿ ಹೀಗೆ ಭಾರೀ ಸಂಖ್ಯೆಯಲ್ಲಿ ಈ ಹಿಂದೆ ಒಂದೇ ದಿನಕ್ಕೆ ಯಾವ ಸರ್ಕಾರ ಕೂಡ ಉದ್ಯೋಗ ನೀಡಿರಲಿಲ್ಲ. ಆದರೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಈ ಸಾಧನೆ ಮಾಡಿದ್ದು, ಒಂದೇ ದಿನಕ್ಕೆ 1.26 ಲಕ್ಷ ಮಂದಿಗೆ ಉದ್ಯೋಗ ನೀಡಿ ಇತಿಹಾಸ ಬರೆದಿದೆ.

ಸೋಮವಾರ ವಿಜಯವಾಡದಲ್ಲಿ ಖುದ್ದು ಸಿಎಂ ಜಗನ್ ಮೋಹನ್ ರೆಡ್ಡಿಯವರೇ, ಹೊಸದಾಗಿ ನೇಮಕಗೊಂಡವರಿಗೆ ಆದೇಶ ಪತ್ರ ವಿತರಿಸಿ ಅಭಿನಂದನೆ ತಿಳಿಸಿದರು. ಈ ವೇಳೆ ಮಾತಾಡಿದ ಸಿಎಂ, ವೈಎಸ್‍ಆರ್ ಕಾಂಗ್ರೆಸ್ ಸರ್ಕಾರ ನಿರುದ್ಯೋಗವನ್ನು ಹೋಗಲಾಡಿಸಿ, ಜನತೆಗೆ ಉದ್ಯೋಗ ಕಲ್ಪಿಸಿಕೊಡಲು ಪಣತೊಟ್ಟಿದೆ. ಆದ್ದರಿಂದ ಇನ್ಮುಂದೆ ಯುವ ಜನತೆಗೆ ಭಾರೀ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಿದ್ದೇವೆ. ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ಸುಮಾರು 500 ಸಾರ್ವಜನಿಕ ಸೇವೆಗಳಿಗೆ 21 ಲಕ್ಷಕ್ಕೂ ಅಧಿಕ ಮಂದಿ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರು. ಸೆಪ್ಟೆಂಬರ್ 1 ರಿಂದ 8ರವರೆಗೆ ಒಟ್ಟು 19.50 ಲಕ್ಷ ಮಂದಿ ಸರ್ಕಾರಿ ಕೆಲಸಕ್ಕಾಗಿ ಲಿಖಿತ ಪರೀಕ್ಷೆ ಬರೆದಿದ್ದರು. ಈ ಪರೀಕ್ಷೆಗಳಲ್ಲಿ ಅರ್ಹತೆ ಪಡೆದ 1,98,164 ಅಭ್ಯರ್ಥಿಗಳಲ್ಲಿ ನಗರ ಪ್ರದೇಶಗಳಲ್ಲಿ 31,640 ಉದ್ಯೋಗ ನೀಡಿರುವುದನ್ನೂ ಸೇರಿಸಿ ಒಟ್ಟು 1,26,728 ಮಂದಿಗೆ ವಿವಿಧ ಹುದ್ದೆಗೆ ನೇಮಿಸಲಾಗಿದೆ.

ಈ ಹಿಂದೆ ನೂತನವಾಗಿ ಸಿಎಂ ಪಟ್ಟ ಏರಿದಾಗಲೇ ಜಗನ್ ಅವರು ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಸಿಹಿಸುದ್ದಿ ನೀಡಿದ್ದರು. ಅವರಿಗೆ ನೀಡುತ್ತಿದ್ದ ಗೌರವ ಧನವನ್ನು 3 ಸಾವಿರದಿಂದ ದಿಢೀರ್ 10 ಸಾವಿರಕ್ಕೇರಿಸಿ ಅಧಿಕೃತವಾಗಿ ಘೋಷಿಸಿ ಮೆಚ್ಚುಗೆ ಪಡೆದಿದ್ದರು. ಇದರಿಂದ ಕಡಿಮೆ ಸಂಬಳ ಪಡೆಯುತ್ತಿದ್ದವರು ಖುಷಿಯಿಂದ ಸಿಎಂ ಕಾರ್ಯವನ್ನು ಶ್ಲಾಘಿಸಿದ್ದರು.

ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಸಿಎಂ ಜಗನ್ ಅವರು ಹೊಸ ಯೋಜನೆಗಳನ್ನು ಘೋಷಿಸುತ್ತಲೇ ಬಂದಿದ್ದು, ವೃದ್ಧಾಪ್ಯ ವೇತನ ಹೆಚ್ಚಳ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ, ಕಷ್ಟಪಟ್ಟು ದುಡಿಯುವ ಆಶಾ ಕಾರ್ಯಕರ್ತೆಯರಿಗೆ ಸಂಬಳ ಹೆಚ್ಚಿಸಿದ್ದರು. ಈಗ ನಿರುದ್ಯೋಗಿಗಳಿಗೆ 1 ಲಕ್ಷ 26 ಸಾವಿರ ಸರ್ಕಾರಿ ಉದ್ಯೋಗ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಿ ಭೇಷ್ ಎನಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *