ಸಭಾಪತಿಗಳನ್ನು ಬೀದಿಗೆ ನಿಲ್ಲಿಸಿದ್ದು ಸಿಎಂ ಕುಮಾರಸ್ವಾಮಿ: ಜಗದೀಶ್ ಶೆಟ್ಟರ್

Public TV
2 Min Read

– ಸಿಎಂ ಕುಮಾರಸ್ವಾಮಿ ಆರೋಪಿ ನಂಬರ್ 1
– ಎಸ್‍ಐಟಿಯಿಂದ ತನಿಖೆ ವಿಳಂಬ, ಸದನ ಸಮಿತಿ ಮೂಲಕ ತನಿಖೆಯಾಗ್ಲಿ

ಕೊಪ್ಪಳ: ಆಪರೇಷನ್ ಕಮಲ ಆಡಿಯೋ ಬಿಡುಗಡೆ ಮೂಲಕ ಸಿಎಂ ಕುಮಾರಸ್ವಾಮಿ ಅವರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಬೀದಿಗೆ ನಿಲ್ಲಿಸಿದರು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರು ಶಾಸಕರ ಪುತ್ರ ಶರಣಗೌಡಗೆ ರೆಕಾರ್ಡ್ ಮಾಡುವಂತೆ ಹೇಳಿರುವುದು ಅಪರಾಧ. ಅಷ್ಟೇ ಅಲ್ಲದೆ ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಸಂಭಾಷಣೆಯನ್ನು ಕೇಳಿರುವುದು ಕದ್ದಾಲಿಕೆ. ಇಂತಹದ್ದೇ ಪ್ರಕರಣದಿಂದಾಗಿ ರಾಮಕೃಷ್ಣ ಹೆಗ್ಡೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ಹೇಳಿದರು.

ಬಜೆಟ್ ಅಧಿವೇಶನದ ಬಳಿಕ ಸ್ಪೀಕರ್ ರಮೇಶ್ ಕುಮಾರ್ ಅವರ ಹೆಸರು ಪ್ರಸ್ತಾಪವಾಗಿರುವುದನ್ನು ಹೇಳಬಹುದಿತ್ತು. ಹೀಗಾಗಿ ಸಿಎಂ ಕುಮಾರಸ್ವಾಮಿ ಅವರೇ ಅಪರಾಧಿ ನಂಬರ್ 1 ಎಂದ ಅವರು, ಆಪರೇಷನ್ ಕಮಲ ಆಡಿಯೋ ತನಿಖೆಗೆ ನಾವು ಬೇಡವೆಂದಿಲ್ಲ. ಪ್ರಕರಣವನ್ನು ಎಸ್‍ಐಟಿಗೆ ನೀಡಿದರೆ ತನಿಖೆ ವಿಳಂಬ ಆಗುತ್ತದೆ ಎನ್ನುವ ಕಾರಣಕ್ಕೆ ಬೇಡವೆಂದು ಒತ್ತಾಯಿಸಿದ್ದೇವೆ. ಹೀಗಾಗಿ ಸದನ ಸಮಿತಿ ಮೂಲಕ ತನಿಖೆ ಮಾಡಬಹುದು ಎಂದರು.

ರಾಜಕೀಯ ದ್ವೇಷ ಸಾಧನೆಗಾಗಿ ಕಾಂಗ್ರೆಸ್-ಜೆಡಿಎಸ್ ಸರ್ಕಾರವು ಎಸ್‍ಐಟಿ ತನಿಖೆಗೆ ವಹಿಸಲು ಹೊರಟಿದೆ. ಈ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರ ದ್ವಂದ್ವ ನೀತಿ ಸ್ಪಷ್ಟವಾಗಿದೆ. ನಾವು ಆಪರೇಷನ್ ಕಮಲ ಮಾಡಿಲ್ಲ. ಈ ಹಿಂದೆ ಸಿಎಂ ಕುಮಾರಸ್ವಾಮಿ ಅವರು ವಿಜುಗೌಡ ಪಾಟೀಲ್ ಹಾಗೂ ಸುಭಾಷ್ ಗುತ್ತೇದಾರ ಅವರಿಗೆ ಹಣ ಕೇಳಿದ್ದರು ಎಂದು ಆರೋಪಿಸಿದರು.

ಆಪರೇಷನ್ ಕಮಲ ಆಡಿಯೋದಲ್ಲಿ ಬಹಳಷ್ಟು ಎಡಿಟ್ ಆಗಿದೆ ಎಂದು ಸಿಎಂ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ತನಿಖೆಯಲ್ಲಿ ಸಾಬೀತಾಗುವರೆಗೂ ಇದು ಸ್ಪಷ್ಟವಾಗುದಿಲ್ಲ ಎಂದ ಅವರು, ದೋಸ್ತಿ ಸರ್ಕಾರದಲ್ಲಿ ಭಿನ್ನಮತವಿದೆ. ಅವರೇ ಸರ್ಕಾರ ಪತನ ಮಾಡಿಕೊಂಡರೆ ಅದಕ್ಕೆ ನಾವು ಏನೂ ಮಾಡುವುದಕ್ಕೆ ಆಗುತ್ತದೆ ಎಂದು ಗುಡುಗಿದರು.

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿ ಕುರಿತು ಪ್ರತಿಕ್ರಿಯೆ ನೀಡಿದ ಜಗದೀಶ್ ಶೆಟ್ಟರ್ ಅವರು, ಉಗ್ರರಿಗೆ ತಕ್ಕ ಪಾಠ ಕಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸೈನಿಕರಿಗೆ ಸಂಪೂರ್ಣವಾದ ಅಧಿಕಾರವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಭಯೋತ್ಪಾದನೆ ಸಂಪೂರ್ಣವಾಗಿ ಸ್ಥಗಿತವಾಗುವ ವಿಶ್ವಾಸವಿದೆ ಎಂದ ಅವರು, ಇಂತಹ ಘಟನೆಗಳನ್ನು ರಾಜಕೀಯವಾಗಿ ಬಳಕೆ ಮಾಡಬಾರದು ಎಂದರು.

ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಈಗಾಗಲೇ ಪಾಕಿಸ್ತಾನವು ಎರಡು ಭಾಗವಾಗಿದೆ. ಇತ್ತ ಜಮ್ಮು-ಕಾಶ್ಮೀರದ ಸ್ಥಳೀಯ ನಿವಾಸಿಗಳೇ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದಾರೆ. ಈ ಮೂಲಕ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *