ಕಾಂಗ್ರೆಸ್ ತತ್ವ ಸಿದ್ಧಾಂತ ಒಪ್ಪಿಕೊಂಡು ‘ಕೈ’ ಸೇರ್ಪಡೆ : ಶೆಟ್ಟರ್

By
2 Min Read

ಬೆಂಗಳೂರು: ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್  (Jagadish Shetter) ತಿಳಿಸಿದರು.

ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ (BJP) ಬಿಟ್ಟು ಕಾಂಗ್ರೆಸ್ (Congress) ಸೇರ್ಪಡೆಯಾಗಿದ್ದೇನೆ. ಬಹಳ ಜನಕ್ಕೆ ಆಶ್ವರ್ಯವಾಗಿದೆ. ಸಿಎಂ, ಪ್ರತಿಪಕ್ಷದ ನಾಯಕನಾಗಿ ಪಕ್ಷದ ಅಧ್ಯಕ್ಷನಾಗಿದ್ದ ವ್ಯಕ್ತಿ ಏಕೆ ಪಕ್ಷ ಬಿಡ್ತಿದ್ದಾರೆ ಅಂತಾ ಎಲ್ಲರೂ ಕೇಳುತ್ತಿದ್ದಾರೆ. ಆದರೆ ನನಗೆ ಬಹಳ ಬೇಜಾರಾಗಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದೆ. ಜೊತೆಗೆ ಬಿಜೆಪಿಯೂ ಎಲ್ಲಾ ಸ್ಥಾನಮಾನ ಕೊಟ್ಟಿದೆ. ಪಕ್ಷ ಕೊಟ್ಟ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. 6 ಬಾರಿ ನಿರಂತರವಾಗಿ ಗೆದ್ದಿದ್ದೇನೆ. 7ನೇ ಬಾರಿ ಸ್ಪರ್ಧೆ ಮಾಡಬೇಕು. ಒಬ್ಬ ಹಿರಿಯ ನಾಯಕನಿಗೆ ನ್ಯಾಚುರಲ್ ಆಗಿ ಟಿಕೆಟ್ ಸಿಗುತ್ತದೆ ಅನ್ಕೊಂಡಿದ್ದೆ. ಯಾವಾಗ ಟಿಕೆಟ್ ಸಿಗಲ್ಲ ಎಂದು ಹೇಳಿದ್ದರೋ ಆಘಾತವಾಯ್ತು ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಸಂಘ ಪರಿವಾರದ ಹಿನ್ನೆಲೆಯಲ್ಲಿ ಬಂದಂತ ವ್ಯಕ್ತಿ. ಬಿಜೆಪಿಯಲ್ಲಿ ನನ್ನ ಕಡೆಗಣನೆ ಯಾಕಾಗುತ್ತಿದೆ ಎಂದು ಗೊತ್ತಾಗ್ಲಿಲ್ಲ. ಕಳೆದ 6 ತಿಂಗಳಿಂದ ಒಂದು ರೀತಿಯ ವೇದನೆ. ಕೊನೆಗಳಿಗೆಯಲ್ಲಿ ನಿಮಗೆ ಹಾಗೂ ಈಶ್ವರಪ್ಪಗೆ ಟಿಕೆಟ್ ಇಲ್ಲ ಎಂದು ಬಿಜೆಪಿ ಹೈಕಮಾಂಡ್‌ ತಿಳಿಸಿತ್ತು. ಅಷ್ಟೇ ಅಲ್ಲದೇ ಅದಕ್ಕೆ ಒಪ್ಪಿಗೆ ಪತ್ರ ಕಳಿಸಿಕೊಡಿ ಎಂದು ಹೇಳಿತ್ತು. ಒಬ್ಬ ಚಿಕ್ಕ ಬಾಲಕನಿಗೆ ಹೇಳಿದ ಹಾಗೆ ಟಿಕೆಟ್ ಇಲ್ಲ ಎಂದು ಹೇಳಿದರು. ಒಬ್ಬ ಹಿರಿಯ ನಾಯಕನಿಗೆ ಹೇಳುವ ರೀತಿನಾ ಇದು. ಬಹಳ ಬೇಜಾರಾಯ್ತು ಎಂದರು.

ಪಕ್ಷ ಮುಖ್ಯ ಅಂತಾ ಕಟ್ಟಿ ಬೆಳೆಸಿದವರು ನಾವು. ಆದರೆ ಬಿಜೆಪಿಯಲ್ಲಿ ಇವತ್ತು ರಾಜ್ಯದಲ್ಲಿ ಪಕ್ಷಕ್ಕಿಂತಲೂ ಕೆಲವೇ ಕೆಲವು ವ್ಯಕ್ತಿಗಳು ಮುಖ್ಯವಾಗಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿಯು ನನ್ನ ಜನತೆಯ ಸ್ವಾಭಿಮಾನಕ್ಕೆ ಹಾಗೂ ಜಗದೀಶ್ ಶೆಟ್ಟರ್ ಸ್ವಾಭಿಮಾನಕ್ಕೂ ಪೆಟ್ಟು ಕೊಟ್ಟಿದೆ. ಕಟ್ಟಿ ಬೆಳೆಸಿದ ಪಕ್ಷದಿಂದ ಹೊರಹಾಕಿದರು. ಈ ವೇಳೆ ಕಾಂಗ್ರೆಸ್ ನಾಯಕರು ನನ್ನ ಸಂಪರ್ಕ ಮಾಡಿ ಪಕ್ಷಕ್ಕೆ ಬರುವಂತೆ ಆಹ್ವಾನ ಕೊಟ್ಟರು. ನನಗೆ ಬೇರೆ ದಾರಿಯಿರಲಿಲ್ಲ. ಕಾಂಗ್ರೆಸ್‍ಗೆ ಸೇರ್ಪಡೆಯಾದೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ತೊರೆದು ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಸೇರ್ಪಡೆ

ಮೋದಿ, ಅಮಿತ್ ಶಾ, ನಡ್ಡಾರನ್ನು ಟೀಕೆ ಮಾಡಲು ಹೋಗುವುದಿಲ್ಲ. ಇಲ್ಲಿನ ಕೆಲವರು ತಮ್ಮ ಹಿತಾಸಕ್ತಿಗಾಗಿ ಹೀಗೆ ಮಾಡುತ್ತಿದ್ದಾರೆ. ನಮ್ಮ ಕುಟುಂಬದವರಿಗೆ ಟಿಕೆಟ್ ಬೇಡ ಎಂದು ಮೊದಲ ದಿವಸವೇ ಹೇಳಬಹುದಿತ್ತು. ಆದರೆ ನಾಮಪತ್ರ ಸಲ್ಲಿಸಲು ಕೆಲವೇ ದಿನಗಳಿದ್ದಾಗ ತಿಳಿಸಿರುವುದು ನನಗೆ ಬೇಸರ ತರಿಸಿದೆ. ಆದರೆ ನನಗೆ ಅಧಿಕಾರ ಬೇಡವಾಗಿತ್ತು. ನನಗೆ ಮಂತ್ರಿ ಬೇಡ ಅಂತಾ ಎಂದು ಹೇಳಿದ್ದೆ. ಆದರೆ ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು ಎಂದು ಕಿಡಿಕಾರಿದರು. ಇದನ್ನೂ ಓದಿ: ಸ್ವಾಭಿಮಾನಕ್ಕೆ ಧಕ್ಕೆಯಾದವರೆಲ್ಲ ಕಾಂಗ್ರೆಸ್‌ಗೆ ಬರ್ತಿದ್ದಾರೆ: ಡಿಕೆಶಿ

Share This Article