ರಮೇಶ್ ಕುಮಾರ್ ಮಹಿಳೆಯರ ಬಗ್ಗೆ ಅವಹೇಳನ ಮಾಡಬಾರದಾಗಿತ್ತು: ಜಗದೀಶ್ ಶೆಟ್ಟರ್

Public TV
2 Min Read

ಹುಬ್ಬಳ್ಳಿ: ಸದನದಲ್ಲಿ ರಮೇಶ್ ಕುಮಾರ್ ಅಂತಹ ಹಿರಿಯರು ಮಹಿಳೆಯರ ಬಗ್ಗೆ ಅವಹೇಳನ ಮಾಡಬಾರದಾಗಿತ್ತು. ಅವರು ಯಾಕೆ ಆ ರೀತಿ ಹೇಳಿದರು ಅಂತ ಅರ್ಥ ಆಗಲಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈ ರೀತಿ ಶಬ್ದ ಪ್ರಯೋಗ ಅಥವಾ ಮಹಿಳೆಯರ ಬಗ್ಗೆ ಮಾತನಾಡುವುದು ಸರಿ ಅಲ್ಲ. ನಿನ್ನೆಯೇ ಆ ಬಗ್ಗೆ ಕ್ಷಮೆ ಕೇಳಬೇಕಿತ್ತು. ಇವತ್ತು ಕೇಳಿದ್ದಾರೆ. ಅವರೊಬ್ಬ ಒಳ್ಳೆ ರೀತಿಯ ಸಂಸದೀಯ ಪಟು, ಆದರೆ ನಡುವಳಿಕೆ ಇದಲ್ಲ. ಅವರು ಒಬ್ಬ ಸ್ಪೀಕರ್ ಆಗಿ ಕೆಲಸ ಮಾಡಿದವರು, ಮಾತನಾಡುವಾಗ ಬಹಳಷ್ಟು ಚಿಂತಿಸಿ ಮತನಾಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಕ್ರಿಸ್ತನಿಗೆ ಪರಿವರ್ತನೆಯಾದ್ರೆ ಸಿದ್ದರಾಮಯ್ಯಗೆ ಜಾಗ ಎಲ್ಲಿದೆ: ಸಿ.ಟಿ ರವಿ

ಸದನದಲ್ಲಿ ಸರಿಯಾದ ಚರ್ಚೆ ನಡೆಯದೇ ಇರುವ ವಿಚಾರವಾಗಿ ಮಾತನಾಡಿದ ಅವರು, ಸದನದಲ್ಲಿ ನಾವು ಸರ್ಕಾರ ನಡೆಸುವುದಕ್ಕೆ ಉತ್ತರ ಕೊಡುವುದಕ್ಕೆ ಸಿದ್ಧರಾಗಿರುತ್ತೇವೆ. ಸ್ಪಷ್ಟವಾಗಿ ಅವರು ಯಾವುದನ್ನು ಮಂಡಿಸಬೇಕು ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಸದನದಲ್ಲಿ ಧರಣಿ ಮಾಡುವುದು, ಬಾಯ್ಕಾಟ್ ಮಾಡುವುದು, ಬೀದಿಲಿ ಪ್ರತಿಭಟನೆ ಮಾಡುವುದೆಲ್ಲಾ ರಾಜಕೀಯ ಗಿಮಿಕ್, ಈ ಭಾಗದ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ಸರ್ಕಾರಕ್ಕೆ ಸಲಹೆ ನೀಡಿ, ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಆದರೆ ಅದಕ್ಕೆ ಯಾವುದೇ ಆಧಾರ ಇಲ್ಲ, ಸರಿಯಾಗಿ ಸದನ ನಡೆಯದೇ ಇಡುವುದಕ್ಕೆ ಕಾಂಗ್ರೆಸ್ಸಿಗರ ಅಸಹಕಾರ ಕಾರಣ ಆರೋಪಿಸಿದರು.

ಮತಾಂತರ ಕಾಯ್ದೆ ವಿಚಾರವಾಗಿ ಮಾತನಾಡಿದ ಅವರು, ಸ್ವಯಂಪ್ರೇರಿತ ಮತಾಂತರಕ್ಕೆ ಯಾವುದೇ ನಿರ್ಬಂಧ ಇಲ್ಲ, ಆದರೆ ಬಲವಂತವಾಗಿ ಇವತ್ತು ಮತಾಂತರ ನಡೆಯುತ್ತಿದೆ, ಆಸೆ, ಆಮಿಷ ಒಡ್ಡಿ ಮತಾಂತರ ಮಾಡುವುದಕ್ಕೆ ನಮ್ಮ ತಡೆ ಇದೆ. ಯಾವುದೇ ಸಮುದಾಯ ಇರಲಿ ಮತಾಂತರ ನಿಷೇಧ ಕಾಯ್ದೆ ಕಾಂಗ್ರೆಸ್‍ಗೆ ಯಾಕೆ ಅನ್ವಯವಾಗುತ್ತದೆ. ಬಿಲ್ ನಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಮಾತ್ರ ಅಂತ ಇರುವುದಿಲ್ಲ, ನೀವು ತಪ್ಪು ಮಾಡದಿದ್ದರೆ ಹೆದರುವ ಪ್ರಶ್ನೆ ಇಲ್ಲ ಎಂದರು. ಇದನ್ನೂ ಓದಿ: ಸಾಕಾನೆಗಳಿಂದ ಉಪಟಳ – ಬಂಡೀಪುರಕ್ಕೆ 8 ಆನೆಗಳ ಸ್ಥಳಾಂತರ

ಮಹಾದಾಯಿ ವಿಚಾರದಲ್ಲಿ ಕೆಲ ಕಾನೂನು ತೊಡಕಿದೆ, ಕೋರ್ಟ್‍ನಲ್ಲಿ ಕೇಸ್ ಪೆಂಡಿಂಗ್ ಇದೆ, ಸರ್ಕಾರದ ಹಂತದಲ್ಲಿ ಬಗೆಹರಿಸಬೇಕಾಗುತ್ತದೆ. ನ್ಯಾಯಾಲಯದಲ್ಲಿ ನಮಗೆ ಮಹದಾಯಿ ನೀರಿನ ಬಗ್ಗೆ ಹಕ್ಕಿದೆ ಎನ್ನುವ ತೀರ್ಪು ಬಂದಿದೆ. ನಮಗೆ ಬರಬೇಕಾದ ನೀರು ನಮಗೆ ಬರುವುದು ನಿಶ್ಚಿತ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *