ಪಂಚರಾಜ್ಯ ಚುನಾವಣೆ ಫಲಿತಾಂಶ ಬಿಜೆಪಿ ಆಡಳಿತಕ್ಕೆ ಸಿಕ್ಕ ಜನಮನ್ನಣೆ: ಜಗದೀಶ್ ಶೆಟ್ಟರ್

Public TV
2 Min Read

ಬೆಂಗಳೂರು: ಪಂಚರಾಜ್ಯ ಚುನಾವಣೆ ಫಲಿತಾಂಶ ಬಿಜೆಪಿ ಆಡಳಿತಕ್ಕೆ ಸಿಕ್ಕ ಜನಮನ್ನಣೆಯಾಗಿದೆ. ಭರ್ಜರಿ ಬಹುಮತದೊಂದಿಗೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಂತೋಷ ವ್ಯಕ್ತಪಡಿಸಿದರು.

ಪಂಚರಾಜ್ಯ ಚುನಾವಣೆ ಫಲಿತಾಂಶ ಕುರಿತು ಮಾತನಾಡಿದ ಅವರು, ಸಮಾಜವಾದಿ ಪಕ್ಷವನ್ನು ಜನರು ಸಂಪೂರ್ಣವಾಗಿ ನಂಬಿಲ್ಲ. ಮಣಿಪುರ, ಉತ್ತರಾಖಂಡ ಹಾಗೂ ಗೋವಾ ರಾಜ್ಯಗಳಲ್ಲಿ ಕೂಡ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ. ಕಾಂಗ್ರೆಸ್ ಪಕ್ಷ ಅವನತಿಯ ಘಟ್ಟ ತಲುಪಿದೆ. ಐದು ರಾಜ್ಯಗಳಲ್ಲಿಯೂ ಕೈ ಹೀನಾಯ ಸೋಲು ಕಂಡಿದೆ. ಕಾಂಗ್ರೆಸ್ ಬಿಜೆಪಿಗೆ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲೂ ಕೂಡ ಪರ್ಯಾಯ ಪಕ್ಷವಲ್ಲ ಎಂದು ಸಾಬೀತು ಆಗಿದೆ. ಮತದಾರ ಪ್ರಭುಗಳು ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆ, ವಂಶಪಾರಂಪರ್ಯ ರಾಜಕೀಯಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಜನರು ರಾಷ್ಟ್ರೀಯತೆ, ಅಭಿವೃದ್ಧಿ ಮತ್ತು ಉತ್ತಮ ಆಡಳಿತವನ್ನ ಗೆಲ್ಲಿಸಿದ್ದಾರೆ: ಯೋಗಿ 

ಮಾರ್ಚ್ 10ರ ಬಳಿಕ ದೇಶದ ರಾಜಕೀಯದಲ್ಲಿ ಬದಲಾವಣೆ ಗಾಳಿ ಬೀಸಲಿದೆ ಎಂದು ಬಹಳ ಜನರು ಕನಸು ಕಂಡಿದ್ದರು. ಅವರ ಕನಸು ನುಚ್ಚುನೂರಾಗಿದೆ. ಉತ್ತರ ಪ್ರದೇಶದಲ್ಲಿ ಜನರು ಬಿಜೆಪಿ ಆರ್ಶೀವದಿಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ ಆಡಳಿತ ಮುಂದುವರಿಯುವ ಸ್ಪಷ್ಟ ಸೂಚನೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ರಾಜಕೀಯ ಪಕ್ಷಗಳು ಸೇರಿದಂತೆ ಹಲವು ಜನರು, ಬಿಜೆಪಿಯನ್ನು ದಲಿತರ ಅಲ್ಪಸಂಖ್ಯಾತರ ವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸಿದರು. ಇದನ್ನು ಮತದಾರ ಪ್ರಭುಗಳು ತಿರಸ್ಕರಿಸಿದ್ದಾರೆ. ಯೋಗಿ ಆದಿತ್ಯನಾಥ್ ಆಡಳಿತಕ್ಕೆ ಮನ್ನಣೆ ನೀಡಿದ್ದಾರೆ ಎಂದರು.

ಕಳೆದ ಬಾರಿಗಿಂತಲೂ ಬಿಜೆಪಿ ಈ ಬಾರಿ ಹೆಚ್ಚಿನ ಸೀಟು ಪಡೆಯಲಿದೆ. ಅಖಿಲೇಶ್ ಯಾಧವ್ ಸಮಾಜವಾದಿ ಪಕ್ಷದ ಸೈಕಲ್ ತುಳಿದು, ತುಳಿದು ಬಸವಳಿದ್ದಾರೆ. ಬಿಜೆಪಿ ವಿರುದ್ಧದ ಸುಳ್ಳು ಆರೋಪ ಹಾಗೂ ಅಪಪ್ರಚಾರ ಸಮಾಜವಾದಿ ಪಕ್ಷದ ಸೈಕಲ್ ಪಂಚರ್ ಮಾಡಿವೆ. ಪ್ರಿಯಾಂಕಾ ಗಾಂಧಿ ರಾಲ್ಯಿಗಳು ನೆಪಮಾತ್ರ. ಜನ ವಂಶಪಾರಂಪರ್ಯ ಆಡಳಿತವನ್ನು ವಿರೋಧಿಸಿ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವಾಗಿ ಉಳಿಯುವ ಸಾಧ್ಯತೆಯು ಇಲ್ಲ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಡಿಕೆಶಿ ವಿಮಾನ ಇಳಿಸಲು ರಾಜ್ಯಗಳೇ ಇಲ್ಲ: ಸುನೀಲ್ ಕುಮಾರ್ 

ಬಿಜೆಪಿಯ ದಕ್ಷ ಆಡಳಿತ ಹಾಗೂ ಅಭಿವೃದ್ಧಿ ಪರ ಚಿಂತನೆಗೆ ಜನರು ಮತ ಚಲಾಯಿಸಿದ್ದಾರೆ. ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಪಂಜಾಬ್‍ನಲ್ಲಿ ಆಡಳಿತಾರೂಢ ಕಾಂಗ್ರೆಸ್ ಸಂಪೂರ್ಣ ಸೋತು ಸುಣ್ಣವಾಗಿದೆ. ಆಮ್ ಆದ್ಮಿ ಪಕ್ಷ ಅಧಿಕಾರ ಹಿಡಿಯಲಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸಂಪೂರ್ಣ ಆಸ್ತಿತ್ವ ಕಳೆದುಕೊಳ್ಳಲಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *