ಗೆಲುವಿನ ದಿನವೇ ಕೊನೆ ಚುನಾವಣೆ ಬಗ್ಗೆ ಪ್ರಸ್ತಾಪಿಸಿದ ಆನಂದ್ ಸಿಂಗ್

Public TV
1 Min Read

ಬಳ್ಳಾರಿ: ಉಪಸಮರದಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರೂ ಇದೇ ನನ್ನ ಕೊನೆ ಚುನಾವಣೆ ಎಂದು ಹೊಸಪೇಟೆ ನಗರದಲ್ಲಿ ಆನಂದ್ ಸಿಂಗ್ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಗೆಲುವಿನ ದಿನವೇ ವಿದಾಯದ ಮಾತನ್ನಾಡಿದ್ದಾರೆ. ಇದು ನನ್ನ ಕೊನೆಯ ಚುನಾವಣೆ. ಉಪಚುನಾವಣೆಗೂ ಮುನ್ನವೇ ನಾನು ಕೊನೆ ಚುನಾವಣೆ ಎಂದು ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ನನ್ನ ಮಗ ರಾಜಕೀಯದ ಬಗ್ಗೆ ಆಸಕ್ತಿ ತೋರಿಸಿಲ್ಲ. ಆದ್ದರಿಂದ ಸದ್ಯ ವಕೀಲನಾಗಿ ವಕಾಲತ್ತು ಮಾಡು ಎಂದು ಹೇಳಿದ್ದೇನೆ. ಮುಂದೆ ಏನು ಆಗುತ್ತೋ ಗೊತ್ತಿಲ್ಲ ಎಂದು ತಮ್ಮ ಮುಂದಿನ ನಡೆಯ ಬಗ್ಗೆ ತಿಳಿಸಿದರು.

ಹಾಗೆಯೇ ಇದು ಆನಂದ್ ಸಿಂಗ್ ಗೆಲುವಲ್ಲ, ವಿಜಯನಗರ ಕ್ಷೇತ್ರದ ಗೆಲುವು. ಗೆಲುವು ಸಾಧಿಸಿದ್ದೇನೆ ಎಂದು ನಾನು ಯಾರಿಗೂ ಟೀಕೆ ಮಾಡಲ್ಲ. ವಿಜಯನಗರ ಜಿಲ್ಲೆಯ ಕುರಿತು ಎರಡು, ಮೂರು ಬೇಡಿಕೆಗಳು ಇವೆ. ಅವುಗಳನ್ನು ಸರ್ಕಾರ ಈಡೇರಿಸುವ ಭರವಸೆ ಇದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ನನಗೆ ಉಪಚುನಾವಣೆ ಅಗ್ನಿ ಪರೀಕ್ಷೆ ಆಗಿತ್ತು, ಆದರೆ ಪಂಪವಿರೂಪಾಕ್ಷನ ಕೃಪೆಯಿಂದ ಸರಾಗವಾಗಿ ಗೆಲುವು ಸಾಧಿಸಿದ್ದೇನೆ. ನನ್ನ ಗೆಲುವಿಗೆ ಶ್ರಮಿಸಿದ ಮುಖಂಡರು, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಉಪಚುನಾವಣೆಯ ಭರ್ಜರಿ ಗೆಲುವಿನಿಂದ ವಿಜಯನಗರದ ಕಿಂಗ್ ನಾನೇ ಎಂಬುದನ್ನು ಆನಂದ್ ಸಿಂಗ್ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. 30,207 ಮತಗಳಿಂದ ಗೆಲ್ಲುವ ಮೂಲಕ ಕಾಂಗ್ರೆಸ್ಸಿನ ಬಳ್ಳಾರಿ ರಾಜಕೀಯಕ್ಕೆ ತಿರುಗೇಟು ನೀಡಿದ್ದಾರೆ. ಬಿಜೆಪಿ 85,332 ಮತಗಳನ್ನು ಪಡೆದರೆ, ಕಾಂಗ್ರೆಸ್ 55,270 ಮತಗಳನ್ನು ಪಡೆದಿದೆ. 2018ರಲ್ಲಿ ಬಿಜೆಪಿಯ ಗವಿಯಪ್ಪ ವಿರುದ್ಧ 8,228 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *