ಇದು ಮ್ಯಾಚ್‌ ಅಷ್ಟೇ; ಭಾರತ – ಪಾಕ್ ಪಂದ್ಯ ಬೇಡ ಎಂದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

Public TV
2 Min Read

– ರಾಷ್ಟ್ರದ ಹಿತಾಸಕ್ತಿಗಿಂತ ಕ್ರಿಕೆಟ್‌ ದೊಡ್ಡದಲ್ಲ ಅಂತ ಅರ್ಜಿದಾರರ ವಾದ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ (Ind vs Pak) ನಡುವೆ ಸೆ.14ರಂದು ನಡೆಯಲಿರುವ ಟಿ20 ಏಷ್ಯಾಕಪ್‌ ಪಂದ್ಯವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ (Supreme Court) ವಿಚಾರಣೆಗೆ ತಿರಸ್ಕರಿಸಿದೆ.

2025ರ ಟಿ20 ಏಷ್ಯಾಕಪ್‌ (Asia Cup 2025) ವೇಳಾಪಟ್ಟಿ ಪ್ರಕಟವಾದಾಗಿನಿಂದಲೂ ಭಾರತ – ಪಾಕ್‌ ನಡುವಿನ ಪಂದ್ಯಕ್ಕೆ ಭಾರೀ ವಿರೋಧ ಕೇಳಿಬರ್ತಿದೆ. ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ಬಳಿಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿವೆ. ಹೀಗಾಗಿ ಇಂಡೋ-ಪಾಕ್‌ ಪಂದ್ಯ ನಿಲ್ಲಿಸುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಅದೇ ರೀತಿ ಭಾರತ-ಪಾಕಿಸ್ತಾನ ನಡುವಿನ ಏಷ್ಯಾಕಪ್‌ ಪಂದ್ಯವನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಆದ್ರೆ ಅರ್ಜಿಯನ್ನ ವಿಚಾರಣೆಗೆ ಪರಿಗಣಿಸೋದಕ್ಕೂ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಜೆಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರ ಪೀಠವು ಅರ್ಜಿ ವಿಚಾರ ಕೇಳೋದಕ್ಕೂ ನಿರಾಕರಿಸಿದ್ದು, ಇದು‌ ಕೇವಲ ಒಂದು ಪಂದ್ಯ ಅಷ್ಟೇ ಎಂದು ಹೇಳಿದೆ. ಇದನ್ನೂ ಓದಿ: ಕೇವಲ 4.3 ಓವರ್‌ನಲ್ಲೇ ಗುರಿ ತಲುಪಿದ ಟೀಂ ಇಂಡಿಯಾ – ಯುಎಇ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

ಊರ್ವಶಿ ಜೈನ್‌ ನೇತೃತ್ವದಲ್ಲಿ ನಾಲ್ವರು ಕಾನೂನು ವಿದ್ಯಾರ್ಥಿಗಳ ಪರವಾಗಿ ಸಂವಿಧಾನದ 32ನೇ ವಿಧಿ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗಿತ್ತು. ಸೆ.14ರಂದು ದುಬೈನಲ್ಲಿ ಏಷ್ಯಾಕಪ್‌ ಭಾಗವಾಗಿ ನಡೆಯಲಿರುವ ಭಾರತ-ಪಾಕಿಸ್ತಾನ ಟಿ20 ಕ್ರಿಕೆಟ್‌ ಪಂದ್ಯವನ್ನ ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ತುರ್ತು ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಈ ವೇಳೆ ನ್ಯಾ. ಮಹೇಶ್ವರಿ ತುರ್ತು ಏನಿದೆ? ಅಂತ ಪ್ರಶ್ನಿಸಿದರಲ್ಲದೇ ಅದು ಒಂದು ಅಷ್ಟೇ.. ಭಾನುವಾರ ಪಂದ್ಯ ಇದೆ, ಏನು ಮಾಡೋಕಾಗುತ್ತೆ? ಅಂತ ತಿಳಿಸಿದ್ದಾರೆ.  ಇದನ್ನೂ ಓದಿ:ಕುಲ್ದೀಪ್‌, ದುಬೆ ಮಿಂಚು; 57 ರನ್‌ಗೆ ಯುಎಇ ಆಲೌಟ್ – ಟಿ20 ಇತಿಹಾಸದಲ್ಲೇ ಕೆಟ್ಟ ದಾಖಲೆ 

ಅರ್ಜಿದಾರರ ವಾದ ಏನು?
ಪಹಲ್ಗಾಮ್‌ ದಾಳಿ ಮತ್ತು ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಂತರ ಪಾಕಿಸ್ತಾನದೊಂದಿಗೆ ಕ್ರಿಕೆಟ್‌ ಪಂದ್ಯವನ್ನ ಆಯೋಜಿಸುವುದು ರಾಷ್ಟ್ರೀಯ ಘನತೆ ಮತ್ತು ಸಾರ್ವಜನಿಕ ಭಾವನೆಗೆ ತಪ್ಪು ಸಂದೇಶ ನೀಡುತ್ತದೆ. ಭಯೋತ್ಪಾದನೆಗೆ ಆಶ್ರಯ ನೀಡುವ ರಾಷ್ಟ್ರಗಳೊಂದಿಗೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಸೈನಿಕರ ನೈತಿಕತೆಯನ್ನ ಹಾಳು ಮಾಡಿದಂತಾಗುತ್ತದೆ. ಕ್ರಿಕೆಟ್‌ ರಾಷ್ಟ್ರದ ಹಿತಾಸಕ್ತಿ, ನಾಗರಿಕರ ಜೀವನ ಹಾಗೂ ಸೈನಿಕರ ತ್ಯಾಗಕ್ಕಿಂತ ಹೆಚ್ಚಿನದ್ದಲ್ಲ ಎಂದು ಅರ್ಜಿದಾರರು ವಾದಿಸಿದರು. ಆದಾಗ್ಯೂ ಕೋರ್ಟ್‌ ತುರ್ತು ವಿಚಾರಣೆಗೆ ಅರ್ಜಿಯನ್ನು ನಿರಾಕರಿಸಿತು.

2008ರ ಮುಂಬೈ ದಾಳಿ ಬಳಿಕ ಭಾರತ ಮತ್ತು ಪಾಕ್‌ ನಡುವಿನ ಸಂಬಂಧ ಹದಗೆಟ್ಟಿತು. ಪಹಲ್ಗಾಮ್‌ ದಾಳಿ ಬಳಿಕ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿತು. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಕೇಸ್‌ | ಕ್ರಿಕೆಟಿಗ ಪೃಥ್ವಿ ಶಾಗೆ 100 ರೂ. ದಂಡ ವಿಧಿಸಿದ ಮುಂಬೈ ಕೋರ್ಟ್

Share This Article