ಮದುವೆ ದಿಬ್ಬಣದಂತೆ ಹೊರಟು ಕೊಡಗಿನ ಹಲವು ಕಡೆ ಏಕಕಾಲದಲ್ಲಿ ಐಟಿ ರೇಡ್

Public TV
1 Min Read

ಮಡಿಕೇರಿ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕಾರಿನಲ್ಲಿ ಬಂದು ಮನೆ, ಕಚೇರಿಗಳ ಮೇಲೆ ದಾಳಿ ಮಾಡಿದ್ದ ಸುದ್ದಿಯನ್ನು ನೀವು ಓದಿರಬಹುದು. ಆದರೆ ಬುಧವಾರ ಮದುವೆಯ ವೇಳೆ ಶೃಂಗಾರಗೊಂಡ ಕಾರಿನಲ್ಲಿ ದಿಬ್ಬಣ ಹೇಗೆ ಹೊರಡುತ್ತದೋ ಅದೇ ರೀತಿಯಾಗಿ ಐಟಿ ಅಧಿಕಾರಿಗಳು ಹೊರಟು ಏಕ ಕಾಲದಲ್ಲಿ ಕೊಡಗು ಜಿಲ್ಲೆಯಲ್ಲಿ ಹಲವು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಸೋಮವಾರಪೇಟೆ ತಾಲೂಕಿನ ಕುಶಾಲನಗರ ಬಳಿಯ ಎಸ್‍ಎಲ್‍ಎನ್ ಸಮೂಹ ಸಂಸ್ಥೆಯ ಕಛೇರಿಗಳ ಮೇಲೆ ಐಟಿ ರೇಡ್ ನಡೆದಿದೆ. ಎಸ್‍ಎಲ್‍ಎನ್ ಸಮೂಹ ಸಂಸ್ಥೆಗಳ ಮಾಲೀಕರಾದ ವಿಶ್ವನಾಥ್ ಹಾಗೂ ಸಾತಪ್ಪನ್ ಸಹೋದರರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಕಡತಗಳ ಪರಿಶೀಲನೆಯಲ್ಲಿ ಅಧಿಕಾರಿಗಳು ತೊಡಗಿದ್ದಾರೆ.

ಎಸ್‍ಎಲ್‍ಎನ್ ಸಮೂಹ ಸಂಸ್ಥೆಗಳಿಗೆ ಸೇರಿದ ಎಸ್‍ಎಲ್‍ಎನ್ ಕಾಫಿ ಕ್ಯೂರಿಂಗ್ ವರ್ಕ್, ಎಸ್‍ಎಲ್‍ಎನ್ ಪೆಟ್ರೋಲ್ ಬಂಕ್, ಎಸ್‍ಎಲ್‍ಎನ್ ಮಾಲೀಕರಿಗೆ ಸೇರಿದ 2 ಮನೆಗಳು, ಈಡನ್ ಗಾರ್ಡನ್ ಲೇಔಟ್, ಪರ್ಪಲ್‍ಪಾರ್ಮ್ ಎಂಬ ರೆಸಾರ್ಟ್ ಮೇಲೆ ದಾಳಿ ನಡೆದಿದೆ.

ಮೈಸೂರು ಮತ್ತು ಬೆಂಗಳೂರಿನ 50ಕ್ಕೂ ಅಧಿಕ ಐಟಿ ಅಧಿಕಾರಿಗಳು 15ಕ್ಕೂ ಅಧಿಕ ಇನ್ನೋವಾ ವಾಹನಗಳಲ್ಲಿ ಎಸ್‍ಎಲ್‍ಎನ್‍ಗೆ ಸೇರಿದ ಐದಾರು ಕಛೇರಿಗಳ ಮೇಲೆ ಮುಂಜಾನೆ 8 ಗಂಟೆಯ ದಾಳಿ ನಡೆಸಿದ್ದಾರೆ. ಬೆಳಗ್ಗಿನಿಂದ ಸಂಜೆಯವರೆಗೂ ದಾಖಲೆಗಳ ಪರಿಶೀಲನೆ ನಡೆದಿದೆ.

ಐಟಿ ಅಧಿಕಾರಿಗಳು ತಮ್ಮ ಇನ್ನೋವಾ ಕಾರಿಗೆ ಮದುವೆ ದಿಬ್ಬಣಕ್ಕೆ ಹೊರಡುವ ಹಾಗೆ ಸಿಂಗಾರ ಮಾಡಿದ್ದು, ಕಾರಿನ ಮುಂಭಾಗದಲ್ಲಿ “ಧೀರಜ್ ವೆಡ್ಸ್ ಕಾಜಲ್” ಎಂಬ ಹೆಸರಿನ ಬೋರ್ಡ್ ಹಾಕಿದ್ದಾರೆ. ಒಮ್ಮೆಗೆ 15ಕ್ಕೂ ಅಧಿಕ ಇನ್ನೋವಾದಲ್ಲಿ ಅಧಿಕಾರಿಗಳು ಬರುತ್ತಿರುವುದರ ಬಗ್ಗೆ ಯಾರಿಗೂ ಅನುಮಾನ ಬರದಿರಲಿ ಎಂಬುದಕ್ಕೆ ಹೀಗೆ ಕಾರ್‍ಗಳನ್ನು ಮದುವೆ ದಿಬ್ಬಣಕ್ಕೆ ಹೋಗುವ ಹಾಗೆ ಸಿಂಗರಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ಬೆಳಗ್ಗಿನಿಂದ ಪರಿಶೀಲನೆಯಲ್ಲಿ ತೊಡಗಿರುವ ಅಧಿಕಾರಿಗಳು ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ಮತ್ತು ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ವಿರಾಜಪೇಟೆ ತಾಲೂಕಿನ ಪಾಳಿಘಟ್ಟ ಗ್ರಾಮದಲ್ಲಿ ಸುಮಾರು 500 ಎಕರೆ ಕಾಫೀ ತೋಟವಿದ್ದು ಅದನ್ನು ಎಸ್‍ಎಲ್‍ಎನ್ ಸಮೂಹ ಸಂಸ್ಥೆಗಳು ನಿರ್ವಹಿಸುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *