ಆ ಒಂದು ಡೈರಿಯಿಂದ ಸ್ಟಾರ್ ನಟರ ಮನೆ ಮೇಲೆ ದಾಳಿ!

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಲು ಕಾರಣವಾಗಿದ್ದು ಒಂದು ಡೈರಿ ಎನ್ನುವ ವಿಚಾರ ಈಗ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಹೌದು. ಐಟಿ ದಾಳಿ ನಡೆಯಲು ಕಾರಣವಾಗಿದ್ದು ಜಯಣ್ಣ ಅವರ ಡೈರಿಯಂತೆ. ಐಟಿ ಅಧಿಕಾರಿಗಳು ದಾಳಿ ನಡೆಸುವ 1 ವಾರದ ಮೊದಲು ಜಯಣ್ಣ ಅವರನ್ನು ಕರೆದು ವಿಚಾರಣೆ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಹಲವು ಥಿಯೇಟರ್ ಮಾಲೀಕರ ಜೊತೆಗೂ ಸಿನಿಮಾ ಕಲೆಕ್ಷನ್ ಗೆ ಸಂಬಂಧಪಟ್ಟಂತೆ ಮಾಹಿತಿಯನ್ನು ಐಟಿ ಸಂಗ್ರಹಿಸಿತ್ತು.

ಡೈರಿ ಸಿಕ್ಕಿದ ಕಾರಣ ಸ್ಟಾರ್ ನಟರ ಆದಾಯದ ಮೇಲೂ ಐಟಿ ಕಣ್ಣು ಹಾಕಿದೆ ಎಂದು ಮೂಲಗಳು ತಿಳಿಸಿವೆ. ಜಯಣ್ಣ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ವ್ಯವಹಾರದ ಬಗ್ಗೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಯಾವ ನಟರೊಂದಿಗೆ ಏನು ವ್ಯವಹಾರ, ರಿಯಲ್ ಎಸ್ಟೇಟ್ ಹೂಡಿಕೆ ಮಾಹಿತಿ ಈ ಡೈರಿಯಲ್ಲಿ ಇದೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಎರಡನೇ ದಿನವೂ ದಾಳಿ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರಿಸಿದ ಸ್ಟಾರ್ ನಟರು

ನಿರ್ಮಾಪಕರಾಗಿರುವ ಜಯಣ್ಣ ಕಳೆದ 20 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದಾರೆ. ನೂರಾರು ಚಿತ್ರಗಳನ್ನು ವಿತರಿಸಿರುವ ಜಯಣ್ಣ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಲವು ವ್ಯಕ್ತಿಗಳಿಗೆ ಬೇಕಾಗಿರುವ ಜಯಣ್ಣ ಅವರು ವಿತರಣಾ ಹಕ್ಕನ್ನು ಪಡೆದುಕೊಂಡರೆ ಆ ಚಿತ್ರ ಕನಿಷ್ಟ 200 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ. ‘ದಿ ವಿಲನ್’, ‘ಕೆ.ಜಿ.ಎಫ್’ಚಿತ್ರಗಳ ಬಿಡುಗಡೆಗೂ ಸಹಾಯ ಮಾಡಿದ್ದ ಜಯಣ್ಣ ‘ಸಾಹೇಬ’, ‘ಮಫ್ತಿ’, ‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರವನ್ನು ನಿರ್ಮಿಸಿದ್ದರು.  ಇದನ್ನೂ ಓದಿ: ಐಟಿ ದಾಳಿ ವೇಳೆ ಬೆಳಕಿಗೆ ಬಂತು ಮಹತ್ವದ ವಿಚಾರಗಳು

ಯಶ್ ಅಭಿನಯದ ಡ್ರಾಮಾ, ಗೂಗ್ಲಿ, ಗಜಕೇಸರಿ, ಮಿ.ಆಂಡ್ ಮಿಸ್ಸಸ್ ರಾಮಾಚಾರಿ, ಪುನೀತ್ ರಾಜ್ ಕುಮಾರ್ ಅಭಿನಯದ ಪರಾಮತ್ಮ, ರಣವಿಕ್ರಮವನ್ನು ಜಯಣ್ಣ ನಿರ್ಮಿಸಿದ್ದರೆ, ಈ ವರ್ಷ ಕೂಡ ಅವರು ನಿರ್ಮಿಸುತ್ತಿರುವ ‘ರುಸ್ತುಂ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಜಯಣ್ಣ ಅವರು ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ಗುತ್ತಿಗೆದಾರರ ಜೊತೆಗೂ ನಂಟು ಹೊಂದಿದ್ದಾರೆ.

ಗುರುವಾರ ಐಟಿ ಅಧಿಕಾರಿಗಳು ಯಶ್, ಸುದೀಪ್, ಪುನೀತ್, ಶಿವಣ್ಣ ಹಾಗೂ ರಾಧಿಕಾ ಅವರ ಮನೆ ಮೇಲೆ ನಡೆಸಿದ್ದರು. ಈ ವೇಳೆ ಹಲವು ದಾಖಲೆಗಳು ಸಿಕ್ಕಿದ್ದು, ಸ್ಟಾರ್ ನಟರು ಸಾಕಷ್ಟು ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ವ್ಯವಹಾರಗಳ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಎರಡನೇ ದಿನವೂ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಪ್ರಶ್ನೆ ಕೇಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *