ಒಂದೇ ಕಡೆ 20 ಕೋಟಿ ಹಣ ಜಪ್ತಿ – ಸಿಮೆಂಟ್ ಚೀಲ, ಬಾಕ್ಸ್‌ಗಳಲ್ಲಿ ದುಡ್ಡೋ ದುಡ್ಡು

Public TV
1 Min Read

– ಲೋಕ ಕಣದಲ್ಲಿ ಝಣ ಝಣ ಕಾಂಚಾಣ

ಚೆನ್ನೈ: ಆದಾಯ ತೆರಿಗೆ ಅಧಿಕಾರಿಗಳು ಇಂದು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಡಿಎಂಕೆ ಮುಖಂಡರೊಬ್ಬರಿಗೆ ಸೇರಿದ್ದ ಸಿಮೆಂಟ್ ಗೋಡೌನ್ ಮೇಲೆ ದಾಳಿ ಮಾಡಿದ್ದು, ಬರೋಬ್ಬರಿ 20 ಕೋಟಿಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಲೋಕಸಭಾ ಕ್ಷೇತ್ರದ ಡಿಎಂಕೆ ಅಭ್ಯರ್ಥಿಯಾಗಿ ಕ್ಯಾಥೀರ್ ಆನಂದ್ ಸ್ಪರ್ಧಿಸಿದ್ದಾರೆ. ಅವರ ಗೆಲುವಿಗಾಗಿ ಮತದಾರರಿಗೆ ವಿತರಣೆ ಮಾಡಲು ಹಣವನ್ನು ಸಂಗ್ರಹಿಸಿರಬಹುದು ಎಂದು ಐಟಿ ಅಧಿಕಾರಿಗಳು ಶಂಕಿಸಿದ್ದಾರೆ. ಸದ್ಯಕ್ಕೆ ಗೋಡೌನ್‍ನಲ್ಲಿ ಸಿಕ್ಕ ಹಣವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇಂದು ಐಟಿ ಅಧಿಕಾರಿಗಳು ಡಿಎಂಕೆ ಮುಖಂಡರೊಬ್ಬರಿಗೆ ಸೇರಿದ್ದ ಸಿಮೆಂಟ್ ಗೋಡಾನ್ ನಲ್ಲಿ ಶೋಧ ಮಾಡಿದ್ದಾರೆ. ಆಗ ಸಿಮೆಂಟ್ ಗೋಣಿಚೀಲದಲ್ಲಿ, ಬಾಕ್ಸ್ ಒಳಗಡೆ ತುಂಬಿಸಿರುವುದು ಪತ್ತೆಯಾಗಿದೆ. ಒಂದೊಂದು ಬಾಕ್ಸಿನಲ್ಲೂ ಹಣವನ್ನು ಪ್ಯಾಕ್ ಮಾಡಿ ಒಂದೊಂದು ತಾಲೂಕಿಗೆ ಇಷ್ಟಿಷ್ಟು ಎಂದು ಹೆಸರನ್ನು ಕೂಡ ಬರೆದು ಪ್ಯಾಕ್ ಮಾಡಿ ಇಟ್ಟಿರುವುದು ಕಂಡು ಬಂದಿದೆ.

ಅಭ್ಯರ್ಥಿ ಕ್ಯಾಥೀರ್ ಆನಂದ್ ಡಿಎಂಕೆ ಮುಖಂಡ ಮತ್ತು ಪಕ್ಷದ ಖಜಾಂಚಿ ದುರೈ ಮುರುಗನ್ ಅವರ ಪುತ್ರರಾಗಿದ್ದಾರೆ. ಇವರ ಮನೆಯಲ್ಲಿ ಇತ್ತೀಚೆಷ್ಟೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆಗ ಕ್ಯಾಥೀರ್ ಆನಂದ್ ಸ್ವಾಮ್ಯದ ಕಾಲೇಜು ಸೇರಿದಂತೆ ದುರೈ ಮುರುಗನ್ ಅವರ ಆಸ್ತಿಗೆ ಸಂಬಂಧಪಟ್ಟಂತೆ ಸುಮಾರು 10.50 ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿದ್ದರು.

ಐಟಿ ಅಧಿಕಾರಿಗಳು ಮಾರ್ಚ್ 30 ರಂದು ಆನಂದ್ ಸ್ವಾಮ್ಯದ ಕಾಲೇಜಿನಲ್ಲಿ ಪರಿಶೀಲನೆ ನಡೆಸಿದ್ದರು. ಆದರೆ ಅದಕ್ಕೂ ಮುನ್ನಾ ದಿನ ಅಂದರೆ ಮಾರ್ಚ್ 29 ಮತ್ತು 30ರ ಮಧ್ಯರಾತ್ರಿಯಲ್ಲಿ ಹಣವನ್ನು ಬೇರೆಕಡೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದರು.

ಐಟಿ ದಾಳಿಯ ಬಗ್ಗೆ ಮಾತನಾಡಿದ ದುರೈಮುರುಗನ್, ಚುನಾವಣಾ ಕಣದಲ್ಲಿ ನಮ್ಮನ್ನು ಎದುರಿಸಲು ಸಾಧ್ಯವಾಗದ ಕೆಲವು ರಾಜಕೀಯ ಮುಖಂಡರು ಈ ದಾಳಿಯ ಪಿತೂರಿ ಮಾಡಿಸಿದ್ದಾರೆ ಎಂದು ಆರೋಪಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *