ಬಳ್ಳಾರಿ ಜೈಲಲ್ಲಿ ಗುರುವಾರ ಕೊಲೆ ಆರೋಪಿ ದರ್ಶನ್‌ಗೆ `ಐಟಿ’ ಡ್ರಿಲ್

Public TV
2 Min Read

-ಮಾಹಿತಿ ನೀಡದೇ ವಕೀಲರ ದಿಢೀರ್ ಭೇಟಿ, ದರ್ಶನ್ ಜೊತೆ ಚರ್ಚೆ

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಆದಷ್ಟು ಬೇಗ ಜಾಮೀನು ಪಡೆದು ಹೊರಗೆ ಬರಬೇಕು ಎನ್ನುವ ಆಲೋಚನೆಯಲ್ಲಿದ್ದ ದರ್ಶನ್‌ಗೆ ಐಟಿ (ಆದಾಯ ತೆರಿಗೆ ಇಲಾಖೆ) (Income Tax) ಅಧಿಕಾರಿಗಳ ವಿಚಾರಣೆ ಬಹುತೇಕ ಮುಳುವಾಗುವ ಸಾಧ್ಯತೆ ಹೆಚ್ಚಾಗಿದೆ.

ಕೊಲೆ ಪ್ರಕರಣದಲ್ಲಿನ ಹಣದ ವಹಿವಾಟಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಐಟಿ ಎಂಟ್ರಿ ಕೊಟ್ಟಿದೆ. ಗುರುವಾರ ಅಥವಾ ಶುಕ್ರವಾರ ಬಳ್ಳಾರಿ ಜೈಲಿಗೆ ಐಟಿ ಅಧಿಕಾರಿಗಳು ಬರಲಿದ್ದಾರೆ. ಈಗಾಗಲೇ ಆರೋಪಿ ದರ್ಶನ್ ವಿಚಾರಣೆಗೆ ಕೋರ್ಟ್ ಅದೇಶ ನೀಡಿದೆ. ಜೊತೆಗೆ ಐಟಿ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಕೋರ್ಟ್‌ನಿಂದ ಜೈಲಿಗೆ ಇ-ಮೇಲ್ ಕಳುಹಿಸಲಾಗಿದೆ. ಹಣ ಕೊಟ್ಟು ಕೊಲೆ ಆರೋಪವನ್ನು ಮತ್ತೊಬ್ಬರ ಮೇಲೆ ಹೊರಿಸಲು ಪ್ಲಾನ್ ಮಾಡಲಾಗಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಅಷ್ಟೊಂದು ಹಣ ಎಲ್ಲಿಂದ ಬಂತು? ಹೇಗೆಲ್ಲ ಹಣ ವರ್ಗಾವಣೆ ಮಾಡಲಾಗಿದೆ? ಎನ್ನುವ ನಿಟ್ಟಿನಲ್ಲಿ ವಿಚಾರಣೆ ನಡೆಸಲಿರುವ ಐಟಿ ಅಧಿಕಾರಿಗಳು ಹಣದ ಮೂಲ ಪತ್ತೆಗೆ ಮುಂದಾಗಿದ್ದು, ಐಟಿ ಅಧಿಕಾರಿಗಳು ಬರುವುದನ್ನು ಜೈಲು ಮೂಲಗಳು ಖಚಿತಪಡಿಸಿವೆ.ಇದನ್ನೂ ಓದಿ: MUDA Scam| ಸಿಎಂ ವಿರುದ್ಧ ಲೋಕಾಯುಕ್ತ ತನಿಖೆಗೆ ಕೋರ್ಟ್‌ ಆದೇಶ

ಕೊಲೆ ಬಳಿಕ ಅರೋಪ ಮೈಮೇಲೆ ಹೊತ್ತುಕೊಳ್ಳಲು ಆರೋಪಿ ದರ್ಶನ್ (Actor Darshan) ಲಕ್ಷ ಲಕ್ಷ ಡೀಲ್ ನೀಡಿದ್ದ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಐಟಿ ಅಧಿಕಾರಿಗಳು ಆರೋಪಿ ದರ್ಶನ್‌ಗೆ ಡ್ರಿಲ್ ಮಾಡೋದಕ್ಕೆ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬರ್ತಾರೆ ಎನ್ನುವ ಮಾಹಿತಿ ಸಿಕ್ಕಿದ ಕೂಡಲೇ ದರ್ಶನ್ ಪರ ವಕೀಲರು ಬಳ್ಳಾರಿ ಸೆಂಟ್ರಲ್ ಜೈಲಿಗೆ ಬಂದಿದ್ದಾರೆ.

ಜೈಲಿಗೆ ಬರುವ ಕುರಿತು ಸಣ್ಣ ಸುಳಿವನ್ನು ನೀಡದೇ ದರ್ಶನ್ ಪರ ವಕೀಲ ರಾಮಸಿಂದ್ 35 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ. ಐಟಿ ಅಧಿಕಾರಿಗಳು ದರ್ಶನ್ ವಿಚಾರಣೆ ಮಾಡಲಿರುವ ಹಿನ್ನೆಲೆ ಐಟಿ ಅಧಿಕಾರಿಗಳ ಮುಂದೆ ಯಾವ ರೀತಿಯಲ್ಲಿ ಉತ್ತರ ನೀಡಬೇಕು ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಕೊಲೆ ಆರೋಪದ ಬಳಿಕ ಜಾಮೀನಿನ ನಿರೀಕ್ಷೆಯಲ್ಲಿದ್ದ ಆರೋಪಿ ದರ್ಶನ್‌ಗೆ ಇದೀಗ ಐಟಿ ವಿಚಾರಣೆಯ (IT Enquiry) ಆತಂಕ ಎದುರಾಗಿದೆ. ಐಟಿ ಅಧಿಕಾರಿಗಳ ಮುಂದೆ ಸ್ವಲ್ಪ ಯಾಮಾರಿದ್ರೂ ಜಾಮೀನಿಗೆ ಮತ್ತೇ ಕಷ್ಟ ಎಂದು ಜೈಲಿನಲ್ಲಿ ಆರೋಪಿ ಚಡಪಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಬುಧವಾರ ಬಂದಿದ್ದ ಆರೋಪಿ ದರ್ಶನ್ ಪರ ವಕೀಲರು ಒಂದಷ್ಟು ಆತ್ಮವಿಶ್ವಾಸ ತುಂಬಿದ್ದು, ವಿಚಾರಣೆ ವೇಳೆ ಧೈರ್ಯ ಕಳೆದುಕೊಳ್ಳದಂತೆ ಸಲಹೆ ನೀಡಿದ್ದಾರೆ.ಇದನ್ನೂ ಓದಿ: ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ಬಂತು 1.25 ಕೋಟಿ ಪ್ರತಿಕ್ರಿಯೆ

 

Share This Article