ಚಂದ್ರನ ದಕ್ಷಿಣ ಧ್ರುವವೇ ಆಯ್ಕೆ ಏಕೆ? ಯಾವ ಸಾಧನದ ಕೆಲಸ ಏನು?- ಇಲ್ಲಿದೆ ಚಂದ್ರಯಾನ 2 ಪೂರ್ಣ ಮಾಹಿತಿ

Public TV
8 Min Read

ಬೆಂಗಳೂರು: ಚಂದ್ರನಲ್ಲಿಗೆ ಭಾರತ ಮತ್ತೊಮ್ಮೆ ಕಾಲಿಡುತ್ತಿದೆ. ಇದು ಬರೀ ಉಪಗ್ರಹ ಅಲ್ಲ. ಶತಕೋಟಿ ಭಾರತೀಯರ ಹಿರಿಮೆ. ಇಸ್ರೋದ 10 ವರ್ಷಗಳ, ನೂರಾರು ವಿಜ್ಞಾನಿಗಳ ಶ್ರಮ. ಅದೇ ಚಂದ್ರಯಾನ 2.

ಮೊತ್ತಮೊದಲು ಚಂದ್ರನಲ್ಲಿಗೆ ಮಾನವ ಸಹಿತ ಪ್ರಯಾಣ ಕೈಗೊಂಡವರು ಅಮೆರಿಕದವರು. 1958 ಆಗಸ್ಟ್ 17ರಂದು ಅಮೆರಿಕ ಕಳಿಸಿದ್ದ ಪಯೋನಿಯರ್ ಆರ್ಬಿಟರ್ ಪ್ರಯತ್ನದಿಂದ ಹಿಡಿದು, ಚಂದ್ರನ ಮೇಲೆ ಗಗನಯಾತ್ರಿ ನೀಲ್ ಆರ್ಮ್‍ಸ್ಟ್ರಾಂಗ್ ಕಾಲಿಟ್ಟಿದ್ದು 1969ರ ಜುಲೈ 20ರಂದು. ಈ ತಿಂಗಳ 20ಕ್ಕೆ ಸರಿಯಾಗಿ 50 ವರ್ಷ. ಇಂತಹ ಸಂಭ್ರಮದ ಸಮಯದಲ್ಲೇ ಭಾರತ ತನ್ನ 2ನೇ ಚಂದ್ರಯಾನಕ್ಕೆ ಚಾಲನೆ ನೀಡುತ್ತಿದೆ.

ಸೋಮವಾರ ನಸುಕಿನ ಜಾವ 2.51ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಜಿಎಸ್‍ಎಲ್‍ವಿ ಮಾರ್ಕ್-3 ನಭಕ್ಕೆ ಚಿಮ್ಮಲಿದೆ. ಈ ಸಾಧನೆ ಮಾಡಿದ ಜಗತ್ತಿನ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಇಲ್ಲಿವರೆಗೆ ಅಮೆರಿಕ, ರಷ್ಯಾ, ಚೀನಾ ಮಾತ್ರ ಈ ಪ್ರಯೋಗದಲ್ಲಿ ಯಶಸ್ವಿಯಾಗಿವೆ. ಈ ಸಾಲಿಗೆ ಈಗ ಭಾರತ ಸೇರಲು ತುದಿಗಾಲಿನಲ್ಲಿ ನಿಂತಿದೆ. ಭಾರತದ ಈ ಸಾಧನೆ ಹೊತ್ತಲ್ಲೇ 2024ಕ್ಕೆ ಚಂದ್ರನ ದಕ್ಷಿಣ ಧ್ರುವಕ್ಕೇ ಹೋಗಬೇಕು ಎಂದು ನಾಸಾದ ಗಗನಯಾತ್ರಿಗಳಿಗೆ ಟ್ರಂಪ್ ಹೇಳಿದ್ದಾರೆ.

ಚಂದ್ರಯಾನ 2 ಬಗ್ಗೆ ತಿಳಿದುಕೊಳ್ಳುವುದಕ್ಕೆ ಮೊದಲು ಚಂದ್ರಯಾನ 1ರ ಬಗ್ಗೆ ತಿರುಗಿ ನೋಡಲೇಬೇಕು. ಭಾರತದ ಮಹತ್ವಾಕಾಂಕ್ಷಿ ಚಂದ್ರನ ಅಧ್ಯಯನ ಅಧ್ಯಾಯ ಆರಂಭವಾಗಿದ್ದು ಚಂದ್ರಯಾನ-1 ಬಾಹ್ಯಾಕಾಶ ಕಾರ್ಯಕ್ರಮದ ಮೂಲಕ. 2008ರ ಅಕ್ಟೋಬರ್ 22ರಂದು ಶ್ರೀಹರಿಕೋಟಾದಿಂದ ಚಂದ್ರಯಾನ ಉಡ್ಡಯನ ಆಗಿತ್ತು. 2009ರ ಆಗಸ್ಟ್ 29ರಂದು ತನ್ನ ಕಾರ್ಯ ಪೂರ್ಣಗೊಳಿಸಿತ್ತು. ಆಗಸ್ಟ್ 15, 2003ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಚಂದ್ರಯಾನ-1 ಯೋಜನೆಗೆ ಅನುಮೋದನೆ ನೀಡಿದ್ದರು. ಚಂದ್ರನಲ್ಲಿ ನೀರಿನ ಕಣಗಳಿವೆ ಎಂದು ದೃಢಪಟ್ಟಿದ್ದು ಚಂದ್ರಯಾನ 1 ಯೋಜನೆಯಿಂದ.

ಒಂದು ಕಾಲದಲ್ಲಿ ಚಂದ್ರನಲ್ಲಿ ದ್ರವರೂಪದ ನೀರು ಇತ್ತು ಎಂದು ಸಂಶೋಧನೆ ತಿಳಿಸಿತ್ತು. ಯೋಜನೆ ಅವಧಿಯಲ್ಲಿ ಸುಮಾರು 25 ಸೌರಜ್ವಾಲೆಗಳನ್ನು ಪತ್ತೆಹಚ್ಚಲಾಗಿತ್ತು. ಟೈಟಾನಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಅಲ್ಯುಮಿನಿಯಂ ಮತ್ತು ಕಬ್ಬಿಣದ ಅಂಶಗಳನ್ನು ಗುರುತಿಸಿತ್ತು. ಸಾಕಷ್ಟು ಅಚ್ಚರಿಯ ದತ್ತಾಂಶಗಳನ್ನು ಸಂಗ್ರಹಿಸಿಲಾಗಿದೆ ಎಂದು ಇಸ್ರೊ ತಿಳಿಸಿತ್ತು. 2ನೇ ಬಾರಿ ಚಂದ್ರಯಾನ ಕೈಗೊಳ್ಳಲು ಆಗಲೇ ಭಾರತ ನಿರ್ಧರಿಸಿತ್ತು. ಇದಕ್ಕಾಗಿ ರಷ್ಯಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ (ರೋಸ್ ಕಾಸ್ಮೋಸ್) ಜತೆ ಒಪ್ಪಂದಕ್ಕೆ ಇಸ್ರೋ ಸಹಿ ಹಾಕಿತ್ತು.

ಸುಮಾರು 978 ಕೋಟಿ ವೆಚ್ಚವಾಗಿದೆ. ಇದರಲ್ಲಿ ಉಪಗ್ರಹದ ವೆಚ್ಚ 603 ಕೋಟಿ, ರಾಕೆಟ್‍ಗೆ 375 ಕೋಟಿ ಖರ್ಚು. ಚಂದ್ರಯಾನ 2 ಉಪಗ್ರಹದ ಒಟ್ಟು ತೂಕ 3,850 ಕೆಜಿ. ಇದೆ. 3 ಲಕ್ಷದ 82 ಸಾವಿರ ಕಿ.ಮೀ. ಸಾಗಲಿದೆ. 54 ದಿನಗಳ ಬಳಿಕ ಅಂದ್ರೆ ಸೆ.6ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಆಗಲಿದೆ.

ಯಾವ ಸಾಧನದ ಕೆಲಸ ಏನು?
ಲಾಂಚರ್
* ಪೇಲೋಡ್ ಫೈರಿಂಗ್
* ಚಂದ್ರಯಾನ್ 2 ಕಂಪೋಸಿಟ್ ಮಾಡ್ಯುಲ್
* ಸಿ25 ಕ್ರಯೋಜೆನಿಕ್ ಸ್ಟೇಜ್
* ಎಸ್2000 ಸಾಲಿಡ್ ರಾಕೆಟ್ ಬೂಸ್ಟರ್
* ಎಲ್110 ಲಿಕ್ವಿಡ್ ಸ್ಟೇಜ್
* 43.43 ಮೀಟರ್ ಎತ್ತರ
* 640 ಟನ್ ಭಾರ

ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್:
* ಭಾರತದ ಈಗಿನ ಅತ್ಯಂತ ಶಕ್ತಿಶಾಲಿ ರಾಕೆಟ್
* ಶಕ್ತಿ ಶಾಲಿ ಎಂಬ ಕಾರಣಕ್ಕೆ ಬಾಹುಬಲಿ ಅಂತ ಹೆಸರು
* 4 ಟನ್ ತೂಕದ ಉಪಗ್ರಹ ಹೊತ್ತೊಯ್ಯುವ ಸಾಮಥ್ರ್ಯ
* ಭೂಸ್ಥಿರ ಕಕ್ಷೆಗೆ ಉಪಕರಣಗಳನ್ನು ಸೇರಿಸುವ ಹೊಣೆ
* ಎಸ್2000 ಸಾಲಿಡ್ ರಾಕೆಟ್ ಬೂಸ್ಟರ್, ಎಲ್ 110 ಲಿಕ್ವಿಡ್ ಹಾಗೂ ಸಿ25 ಲಿಫ್ಟರ್ ಎಂಬ 3 ಸ್ಟೇಜ್‍ಗಳಿವೆ

ಆರ್ಬಿಟರ್(ಚಂದ್ರನನ್ನು ಸುತ್ತುವ ನೌಕೆ)
* ಭೂಸ್ಥಿರ ಕಕ್ಷೆಯಿಂದ ಚಂದ್ರನ ಕಕ್ಷೆ ಸಮೀಪಿಸಲು 1 ತಿಂಗಳ ಸಮಯ ಬೇಕು
* ಚಂದ್ರನ ಧ್ರುವೀಯ ಕಕ್ಷೆಯಿಂದ 100 ಕಿ.ಮೀ. ದೂರದ ಪರಿಧಿಯಲ್ಲಿ ಪರಿಭ್ರಮಿಸುತ್ತದೆ
* ಚಂದ್ರನ ಮೇಲೆ ಕೈಗೊಳ್ಳುವ ಎಲ್ಲಾ ಮಾಹಿತಿಯನ್ನು ಭೂಮಿಗೆ ರವಾನಿಸುತ್ತದೆ
* ಬೆಂಗಳೂರು ಸಮೀಪದ ಬ್ಯಾಲಾಳುನಲ್ಲಿರುವ ಐಡಿಎಸ್‍ಎನ್ ಕೇಂದ್ರದಿಂದ ನಿರ್ವಹಣೆ
* ಕಕ್ಷೆಗಾಮಿಯು ವಿಕ್ರಮ್ ಲ್ಯಾಂಡರ್ ಹಾಗೂ ಭೂಮಿ ನಡುವಣ ಸಂವಹನಕ್ಕೆ ನೆರವಾಗುತ್ತದೆ
* 2,379 ಕೆ.ಜಿ. ತೂಕ, 365 ದಿನ ಕಾರ್ಯಾಚರಣೆ ಅವಧಿ
* 1000 ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮಥ್ರ್ಯ

ವಿಕ್ರಂ ಲ್ಯಾಂಡರ್:
* ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳ ಪಿತಾಮಹ ಡಾ. ವಿಕ್ರಂ ಸಾರಾಭಾಯ್ ಹೆಸರನ್ನು ಲ್ಯಾಂಡರ್‍ಗೆ ಇಡಲಾಗಿದೆ
* ಚಂದ್ರನ ಮೇಲೆ ಉಪಕರಣಗಳನ್ನು `ಸುರಕ್ಷಿತ ಇಳಿಸುವ’ ಕಾರ್ಯವನ್ನು ಲ್ಯಾಂಡರ್ ನಿರ್ವಹಿಸುತ್ತದೆ
* ಲ್ಯಾಂಡರ್‍ಗೆ ಅಂಟಿಕೊಂಡಿರುವ ರೋವರ್, ಅಲ್ಲಿಂದ ಬೇರ್ಪಟ್ಟು ಚಂದ್ರನ ಮೇಲೆ ಸಂಚಾರ ಮಾಡುತ್ತದೆ
* ಇದು ಆರ್ಬಿಟರ್, ರೋವರ್ ಹಾಗೂ ಬ್ಯಾಲಾಳು ಸಂಪರ್ಕ ಕೇಂದ್ರದ ಜೊತೆ ಸಂವಹನ ಸಾಧಿಸುತ್ತದೆ
* 1470 ಕೆ.ಜಿ. ತೂಕ, 1 ವರ್ಷ ಕಾರ್ಯಾಚರಣೆ ಅವಧಿ
* 650 ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮಥ್ರ್ಯ
* ಚಂದ್ರನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆದ 20 ನಿಮಿಷದಲ್ಲಿ ಮೊದಲ ಫೋಟೋ ರವಾನಿಸುತ್ತೆ
* ಆದರೆ, ಲ್ಯಾಂಡರ್ ಸುರಕ್ಷಿತವಾಗಿ ಇಳಿದ ಬಳಿಕ ಅದು ಓಡಾಡಲು 4 ಗಂಟೆ ಬೇಕು
* ವಿಕ್ರಂ ಲ್ಯಾಂಡರ್‍ನಲ್ಲಿ ತ್ರಿವರ್ಣ ಧ್ವಜ ಇರುತ್ತದೆ.

ಪ್ರಜ್ಞಾನ್ ರೋವರ್
* ಚಂದ್ರನ ಮೇಲ್ಮೈ ಮೇಲೆ ಚಲಿಸಲು ತಯಾರಿಸಿರುವ 6 ಚಕ್ರಗಳ ರೋಬೋಟಿಕ್ ವಾಹನ
* ಒಮ್ಮೆ ಚಲನೆ ಆರಂಭಿಸಿದರೆ 500 ಮೀಟರ್ ಅಂದರೆ ಅರ್ಧ ಕಿ.ಮೀ. ಚಲಿಸುವ ಸಾಮರ್ಥ್ಯವಿದೆ
* ತನ್ನ ಕಾರ್ಯಾಚರಣೆಗೆ ಸೌರಶಕ್ತಿ ಬಳಸಿಕೊಳ್ಳುತ್ತದೆ
* ಚಂದ್ರನ ಮೇಲೆ ತಾನು ಕಂಡುಕೊಂಡ ಎಲ್ಲಾ ಮಾಹಿತಿಯನ್ನು ಲ್ಯಾಂಡರ್‍ಗೆ ರವಾನಿಸುತ್ತೆ
* ಆ ಮಾಹಿತಿ ಲ್ಯಾಂಡರ್‍ನಿಂದ ಆರ್ಬಿಟರ್‍ಗೆ ರವಾನೆಯಾಗಿ ನಂತರ ಇಸ್ರೋಗೆ ತಲುಪುತ್ತೆ
* ತೂಕ: 27 ಕೆ.ಜಿ., 50 ವಾಟ್ ವಿದ್ಯುತ್ ಉತ್ಪಾದನೆ ಸಾಮಥ್ರ್ಯ
* ರೋವರ್‍ನ ಎರಡೂ ಬದಿಯ ಚಕ್ರಗಳಲ್ಲಿ ಅಶೋಕ ಚಕ್ರ, ಇಸ್ರೋ ಲಾಂಛನ (ಲಾಂಡರ್, ರೋವರ್ ಕಾರ್ಯಾಚರಣೆ ಅವಧಿ 1 ಚಂದ್ರನ ದಿನ. ಭೂಮಿಯಲ್ಲಿ 14 ದಿನ)

ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸುರಕ್ಷಿತವಾಗಿ ಇಳಿಸುತ್ತಿರುವ ಭಾರತದ ಮೊದಲ ಬಾಹ್ಯಾಕಾಶ ಯೋಜನೆ. ದೇಶೀಯ ತಂತ್ರಜ್ಞಾನ ಬಳಸಿ ಚಂದ್ರನ ಮೇಲ್ಮೈನಲ್ಲಿ ಸುರಕ್ಷಿತವಾಗಿ ಇಳಿಸುತ್ತಿರುವ, ಅನ್ವೇಷಿಸುತ್ತಿರುವ ಮೊದಲ ಯೋಜನೆ.. ಭಾರತವು ಚಂದ್ರನ ಮೇಲ್ಮೈ ಮೇಲೆ ನೌಕೆಯನ್ನು ಸುರಕ್ಷಿತವಾಗಿ ಇಳಿಸುತ್ತಿರುವ ನಾಲ್ಕನೇ ದೇಶವಾಗಲಿದೆ. ಈ ಹಿಂದೆ ಯುಎಸ್‍ಎಸ್‍ಆರ್, ಅಮೆರಿಕ, ಚೀನಾ ನೌಕೆ ಇಳಿಸಿತ್ತು.

ಪ್ರಮುಖ ಉಪಕರಣಗಳು & ಕೆಲಸ ಏನು?
* ಲಾರ್ಜ್ ಏರಿಯಾ ಸಾಫ್ಟ್ ಎಕ್ಸ್‍ರೇ ಸ್ಪೆಕ್ಟ್ರೋಮೀಟರ್ – ಚಂದ್ರನಲ್ಲಿರುವ ಧಾತುಗಳ ಸಂಯೋಜನೆಯ ಮೌಲ್ಯಮಾಪನ
* ಇಮೇಜಿಂಗ್ ಐಆರ್ ಸ್ಪೆಕ್ಟ್ರೋಮೀಟರ್ – ಖನಿಜಗಳ ಮಾಹಿತಿ ಸಂಗ್ರಹ ಮತ್ತು ನೀರು ಮಂಜುಗಡ್ಡೆ ಅಸ್ತಿತ್ವ ದೃಢೀಕರಣ
* ಸಿಂಥೆಟಿಕ್ ಅಪಾರ್ಚರ್ ರೇಡಾರ್ ಎಲ್ & ಎಸ್ ಬ್ಯಾಂಡ್ – ಧ್ರುವ ಪ್ರದೇಶಗಳ ಮಾಹಿತಿ ಸಂಗ್ರಹ ಮತ್ತು ಮೇಲ್ಮೈಗಿಂತ ಕೆಳಗಿನ ಸ್ತರದ ನೀರುಮಂಜುಗಡ್ಡೆ ಅಸ್ತಿತ್ವದ ದೃಢೀಕರಣ
* ಆರ್ಬಿಟರ್ ಹೈ ರೆಸಲ್ಯೂಷನ್ ಕ್ಯಾಮೆರಾ – ಸ್ಥಳಗಳ ಉನ್ನತ ಗುಣಮಟ್ಟದ ಚಿತ್ರ ಸಂಗ್ರಹ
* ಆಲ್ಫಾ ಪಾರ್ಟಿಕಲ್ ಎಕ್ಸ್‍ರೇ ಸ್ಪೆಕ್ಟ್ರೋಮೀಟರ್ & ಲೇಸರ್ ಇಂಡ್ಯೂಸ್ಡ್ ಬ್ರೇಕ್‍ಡೌನ್ ಸ್ಪೆಕ್ಟ್ರೋಮೀಟರ್ – ನಿರ್ದಿಷ್ಟ ಸ್ಥಳದ ಧಾತುಗಳ ವಿಶ್ಲೇಷಣೆ

ಬಾಹುಬಲಿ ಉಪಗ್ರಹವನ್ನು ಸಾಗಿಸಿದ್ದು ಹೇಗೆ?
ಲಾಂಚ್‍ಗೆ 20 ಗಂಟೆಗಳ ಮುನ್ನ ಶಿಫ್ಟಿಂಗ್ ಆರಂಭವಾಯಿತು. ಇವತ್ತು ಬೆಳಗ್ಗೆ 6.51ಕ್ಕೆ ಕೌಂಟ್ ಡೌನ್ ಶುರುವಾಯ್ತು. 43.43 ಮೀಟರ್ ಎತ್ತರ, 640 ಟನ್ ಭಾರತದ ಈ ಫ್ಯಾಟ್‍ಬಾಯ್‍ಯನ್ನು ಸತೀಶ್ ಧವನ್ ಉಡಾವಣಾ ಕೇಂದ್ರಕ್ಕೆ ಸಾಗಿಸೋಕೆ ಸುಮಾರು 11 ಕಿ.ಮೀ. ದೂರದವರೆಗೆ ಇದ್ದ ಎಲ್ಲಾ ಚೆಕ್‍ಪೋಸ್ಟ್‍ಗಳನ್ನು ಆಂಧ್ರ ಪ್ರದೇಶದ ಪೊಲೀಸರು ಕ್ಲಿಯರ್ ಮಾಡಿಕೊಟ್ಟಿದ್ದರು. ಇವತ್ತು ಇದರ ಉಡಾವಣೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೇ ಉಡಾವಣಾ ಕೇಂದ್ರಕ್ಕೆ ಬರ್ತಿದ್ದಾರೆ. ಭದ್ರತಾ ದೃಷ್ಟಿಯಿಂದ ಲಾಂಚಿಂಗ್ ಬಳಿಗೆ ಯಾರನ್ನೂ ಬಿಡಲ್ಲ. ಇಸ್ರೋ ಅಧ್ಯಕ್ಷರೂ ಕೇವಲ ಸಹ 6 ಕಿ.ಮೀ. ದೂರದಲ್ಲೇ ನಿಲ್ಲಬೇಕು. ಆದರೆ, 8 ಕಿ.ಮೀ. ದೂರದ ಗ್ಯಾಲರಿಯಲ್ಲಿ ಈ ಕ್ಷಣ ತುಂಬಿಕೊಳ್ಳಲು ಅವಕಾಶ ಇದೆ. ಇದಕ್ಕಾಗಿ ಈಗಾಗಲೇ ಆನ್‍ಲೈನ್ ಬುಕ್ಕಿಂಗ್ ಕೂಡ ನಡೆದಿತ್ತು.

ಚಂದ್ರನ ಆಯ್ಕೆ ಏಕೆ..?
ಚಂದ್ರ ನಮಗೆ ಅತಿ ಹತ್ತಿರದ ಆಕಾಶಕಾಯವಾಗಿದ್ದು ಸಂಶೋಧನೆ ಮತ್ತು ದಾಖಲೀಕರಣ ಸುಲಭ. ಬಾಹ್ಯಾಕಾಶ ತಂತ್ರಜ್ಞಾನ ಪರೀಕ್ಷೆಯ ಭರವಸೆಯ ಪ್ರಯೋಗಾಲಯ. ಹಲವು ಪ್ರಯೋಗಗಳಿಗೆ ಚಂದ್ರಯಾನ ವೇದಿಕೆಯಾಗಲಿದೆ.

ಚಂದ್ರಯಾನ 2 ಯೋಜನೆ ಏಕೆ..?
ಚಂದ್ರನ ಬಗ್ಗೆ ಸಾಧ್ಯವಾದಷ್ಟು ತಿಳಿದುಕೊಳ್ಳಲು ಎಲ್ಲ ದೇಶಗಳೂ ಪ್ರಯತ್ನಿಸುತ್ತಿವೆ. ಬೇರಾವ ದೇಶಗಳೂ ಸಮೀಪಿಸದ `ಚಂದ್ರನ ದಕ್ಷಿಣ ಧ್ರುವ ಪ್ರದೇಶ’ವನ್ನು ತಲುಪಲಾಗುತ್ತಿದೆ. ಈ ಸಂಶೋಧನೆಗಳು ಭಾರತ ಹಾಗೆಯೇ ಮನುಕುಲಕ್ಕೆ ನೆರವಾಗಲಿವೆ. ಇದು ಇನ್ನಷ್ಟು ಯಾನಗಳಿಗೆ ಪ್ರೇರಣೆಯೂ ಆಗಬಲ್ಲದು.

ವೈಜ್ಞಾನಿಕ ಸಂಶೋಧನೆ
ಭೂಗ್ರಹದ ಹುಟ್ಟಿನ ಚರಿತ್ರೆ ಕುರಿತು ಚಂದ್ರ ಅತ್ಯುತ್ತಮ ಮಾಹಿತಿ ಒದಗಿಸುತ್ತದೆ. ಚಂದ್ರನ ಹುಟ್ಟು ಹಾಗೂ ವಿಕಾಸ ಪ್ರಕ್ರಿಯೆ ಅರಿಯಬೇಕಾದರೆ ವ್ಯತ್ಯಾಸ ಅರಿಯುವುದು ಅತಿಮುಖ್ಯ. ಮೇಲ್ಮೈಯ ವಿಸ್ತೃತ ಅಧ್ಯಯನ, ಸಮಗ್ರ ಖನಿಜಾಂಶಗಳ ವಿಶ್ಲೇಷಣೆ. ಚಂದ್ರಯಾನ 1 ಯೋಜನೆ ಮಾಡಿದ್ದ ಸಂಶೋಧನೆಗಳ ಮುಂದುವರಿಕೆ. ಚಂದ್ರನ ಮೇಲ್ಮೈನ ರಾಸಾಯನಿಕ ಸಂಯೋಜನೆ, ಉಷ್ಣಭೌತಿಕ ಗುಣಲಕ್ಷಣಗಳ ಅಧ್ಯಯನ. ಚಂದ್ರನ ವಾತಾವರಣದ ಸೂಕ್ಷ್ಮ ಸಂಯೋಜನೆ ಅರಿಯುವುದು. ಭಾರತದ ಬಾಹ್ಯಾಕಾಶ ಹೆಜ್ಜೆಗಳನ್ನು ವಿಸ್ತರಿಸುವುದು.

ಚಂದ್ರನ ದಕ್ಷಿಣ ಧ್ರುವ ಆಯ್ಕೆ ಏಕೆ..?
ಚಂದ್ರನ ದಕ್ಷಿಣ ಧ್ರುವ ವಿಶಿಷ್ಟವಷ್ಟೇ ಅಲ್ಲದೆ ಕುತೂಹಲಕಾರಿ. ಈ ಭಾಗ ಕತ್ತಲಿನಿಂದ ಕೂಡಿದ್ದು ಉತ್ತರ ಭಾಗಕ್ಕೆ ಹೋಲಿಸಿದರೆ ಇಲ್ಲಿನ ಮೇಲ್ಮೈ ಪ್ರದೇಶದ ವ್ಯಾಪ್ತಿ ದೊಡ್ಡದು. ಶಾಶ್ವತವಾಗಿ ಕತ್ತಲಿನಿಂದ ಕೂಡಿರುವ ಈ ಪ್ರದೇಶದಲ್ಲಿ ನೀರಿನ ಅಸ್ತಿತ್ವ ಇರುವ ಸಾಧ್ಯತೆಯಿದೆ. ದಕ್ಷಿಣ ಧ್ರುವದಲ್ಲಿರುವ ಕುಳಿಗಳು ಬಹಳ ತಂಪಾಗಿವೆ. ಸೌರಮಂಡಲ ವ್ಯವಸ್ಥೆ ಸೃಷ್ಟಿಯ ಹಂತದ ದಾಖಲೆಗಳನ್ನೂ ಹೊಂದಿರುವ ಸಾಧ್ಯತೆ.

ಚಂದ್ರಯಾನ 2ಗೆ ಮಾನಿನಿಯರ ಮುಂದಾಳತ್ವ:
ಯೋಜನಾ ತಂಡದಲ್ಲಿ ಶೇ.30ರಷ್ಟು ಮಹಿಳೆಯರು ಕಾರ್ಯನಿರ್ವಹಿಸಿದ್ದು ಇಬ್ಬರು ಮಹಿಳೆಯರು ನೇತೃತ್ವ ವಹಿಸಿಕೊಂಡಿದ್ದಾರೆ. ಯೋಜನಾ ನಿರ್ದೇಶಕಿ ಎಂ. ವನಿತಾ, ಅಭಿಯಾನ ನಿರ್ದೇಶಕಿ ರಿತು ಕರಿಧಾಲ್ ಇಸ್ರೋದಲ್ಲಿ 20 ವರ್ಷ ಸೇವೆಗಳ ಅನುಭವವಿದೆ. ಮಂಗಳಯಾನ ಸೇರಿ ಪ್ರಮುಖ ಯೋಜನೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಚಂದ್ರಯಾನ-2 ಗೆ 620 ಸರ್ಕಾರಿ, ಖಾಸಗಿ ಕಂಪನಿಗಳು, ಐಐಎಸ್ಸಿ, ಐಐಟಿ ಸೇರಿದಂತೆ ದೇಶದ ಪ್ರಮುಖ 15 ಶಿಕ್ಷಣಗಳ ಕೇಂದ್ರಗಳು ನಾನಾ ರೀತಿಯಲ್ಲಿ ಕೆಲಸ ಮಾಡಿವೆ.

ಚಂದ್ರನಲ್ಲಿ ವಿದೇಶಿ ಸ್ಯಾಟಲೈಟ್‍ಗಳು
ಯುಎಸ್‍ಎಸ್‍ಆರ್
* ಲೂನಾ 2 – 1959
* ಲೂನಾ 9 – 1966
* ಲೂನಾ 13 – 1966
* ಲೂನಾ 16 – 1979
* ಲೂನಾ 17 – 1970
* ಲೂನಾ 20 – 1972
* ಲೂನಾ 21 – 1973
* ಲೂನಾ 24 – 1976

ಅಮೆರಿಕ
* ಅಪೋಲೋ 11 – 1959
* ಅಪೋಲೋ 12 – 1969
* ಅಪೋಲೋ 14 – 1971
* ಅಪೋಲೋ 15 – 1971
* ಅಪೋಲೋ 16 – 1972
* ಅಪೋಲೋ 17 – 1972
* ಸರ್ವೇಯರ್ 1 – 1966
* ಸರ್ವೇಯರ್ 3 – 1967
* ಸರ್ವೇಯರ್ 5 – 1967
* ಸರ್ವೇಯರ್ 6 – 1967
* ಸರ್ವೇಯರ್ 7 – 1968

ಚೀನಾ
* ಚೀನಾ 3 – 2013

Share This Article
Leave a Comment

Leave a Reply

Your email address will not be published. Required fields are marked *