ಟೆಲ್ ಅವಿವ್: ಇರಾನ್ (Iran) ಬೆಂಬಲಿತ ಹೌತಿ ಬಂಡುಕೋರರನ್ನು (Houthi) ಗುರಿಯಾಗಿಸಿಕೊಂಡು ಯೆಮೆನ್ (Yemen) ರಾಜಧಾನಿ ಸನಾ ಸೇರಿದಂತೆ ಹಲವಾರು ಪ್ರದೇಶಗಳ ಮೇಲೆ ಇಸ್ರೇಲ್ (Israel) ವಾಯು ದಾಳಿ ನಡೆಸಿದೆ. ಇತ್ತೀಚೆಗೆ ಹೌತಿ ಬಂಡುಕೋರರು ಇಸ್ರೇಲ್‌ನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಈ ದಾಳಿ ನಡೆಸಿದೆ.
ವಿದ್ಯುತ್ ಕೇಂದ್ರ, ಅನಿಲ ಕೇಂದ್ರ ಸೇರಿದಂತೆ ಸನಾ ರಾಜಧಾನಿಯಾದ್ಯಂತ ಅನೇಕ ಪ್ರದೇಶಗಳ ಮೇಲೆ ದಾಳಿ ನಡೆದಿದೆ ಎಂದು ಹೌತಿ ಮಾಧ್ಯಮ ಕಚೇರಿ ತಿಳಿಸಿದೆ. ಯೆಮನ್ ಅಧ್ಯಕ್ಷರ ನಿವಾಸದ ಹತ್ತಿರ ಹಲವಾರು ಪ್ರದೇಶಗಳಲ್ಲಿ ಭಾರೀ ಸ್ಫೋಟದ ಶಬ್ಧ ಕೇಳಿಬರುತ್ತಿವೆ ಎಂದು ವರದಿಯಾಗಿದೆ. ಈ ದಾಳಿಯನ್ನು ಇಸ್ರೇಲ್ ದೃಢಪಡಿಸಿಲ್ಲ. ಇದನ್ನೂ ಓದಿ: ಹೌತಿ ಬಂಡುಕೋರ ಮೇಲೆ ಸರಣಿ ದಾಳಿ ನಡೆಸಿ ಪೆಟ್ಟು ಕೊಡ್ತೇವೆ: ಬೆಂಜಮಿನ್ ನೆತನ್ಯಾಹು
ಹೌತಿಗಳು ಇತ್ತೀಚೆಗೆ ಇಸ್ರೇಲ್ ಕಡೆಗೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸಿದ್ದರು. ಅಲ್ಲದೇ ಕೆಂಪು ಸಮುದ್ರದಲ್ಲಿ ಹಲವಾರು ತಿಂಗಳುಗಳಿಂದ ಹಡಗುಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಗಾಜಾ ಯುದ್ಧದ ಮಧ್ಯೆ ಪ್ಯಾಲೆಸ್ಟೀನಿಯನ್ನರೊಂದಿಗೆ ಸೇರಿ ಅವರು ಈ ದಾಳಿಗಳನ್ನು ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ.
ಶುಕ್ರವಾರ ಇಸ್ರೇಲ್ ಅತಿದೊಡ್ಡ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಹೌತಿಗಳು ದಾಳಿ ನಡೆಸಿದ್ದರು. ಈ ಕ್ಷಿಪಣಿಗಳನ್ನು ಇಸ್ರೇಲ್ ಆಕಾಶದಲ್ಲೇ ಹೊಡೆದು ಹಾಕಿತ್ತು. ಇದರಿಂದಾಗಿ ಯಾವುದೇ ಹಾನಿಗಳಾಗಿರಲಿಲ್ಲ.
ಮೇ ತಿಂಗಳಲ್ಲಿ ಹೌತಿಗಳ ವಿರುದ್ಧ ಗುಡುಗಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹೌತಿ ಉಗ್ರರನ್ನು ಹತ್ತಿಕ್ಕಲು ಸರಣಿ ದಾಳಿ ನಡೆಸುವುದಾಗಿ ಎಚ್ಚರಿಸಿದ್ದರು. ಹೌತಿ ದಾಳಿಗೆ ಇಸ್ರೇಲ್‌ನ ಪ್ರತೀಕಾರವು ಒಂದು ಬಾರಿ ಮಾತ್ರ ಇರುವುದಿಲ್ಲ. ದಾಳಿಯ ಪೆಟ್ಟುಗಳು ಬೀಳುತ್ತಲೇ ಇರುತ್ತವೆ ಎಂದು ಅವರು ಹೇಳಿಕೊಂಡಿದ್ದರು. ಇದನ್ನೂ ಓದಿ: ಹೌತಿ ಉಗ್ರರ ದಾಳಿಗೆ ನಡೆದಿದ್ದ ಮಹಾ ಪ್ಲ್ಯಾನ್ ಲೀಕ್ ಆಗಿದ್ದು ಹೇಗೆ? – ಟ್ರಂಪ್ ಟೀಂ ಬಳಸಿದ್ದ ʻಸಿಗ್ನಲ್ʼ ಎಷ್ಟು ಸೇಫ್?