- ಹಮಾಸ್ ಕೊಲೆಗಾರರಿಗೆ ನರಕದ ದ್ವಾರ ತೆರೆಯಲಿದೆ ಎಂದ ರಕ್ಷಣಾ ಸಚಿವ
ಟೆಲ್ ಅವೀವ್: ಗಾಜಾ ನಗರದ (Gaza) ವಿನಾಶದ ಬಗ್ಗೆ ಇಸ್ರೇಲ್ (Israel) ಎಚ್ಚರಿಕೆ ನೀಡಿದೆ. ಹಮಾಸ್ (Hamas) ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳದಿದ್ದರೆ ವೈಮಾನಿಕ ದಾಳಿಗಳು ತೀವ್ರಗೊಳ್ಳುತ್ತವೆ ಎಂದು ಇಸ್ರೇಲ್ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ (Israel Katz), ಗಾಜಾದಲ್ಲಿ ಹಮಾಸ್‌ನ ಕೊಲೆಗಾರರು ಮತ್ತು ಅತ್ಯಾಚಾರಿಗಳಿಗೆ ನರಕದ ದ್ವಾರಗಳು ಶೀಘ್ರದಲ್ಲೇ ತೆರೆಯಲಿದೆ. ಅವರು ಯುದ್ಧವನ್ನು ಕೊನೆಗೊಳಿಸಲು ಇಸ್ರೇಲ್‌ನ ಷರತ್ತುಗಳಿಗೆ ಒಪ್ಪುವವರೆಗೆ ದಾಳಿ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಗಾಜಾ ಮೇಲೆ ಇಸ್ರೇಲ್ ದಾಳಿ – ನೀರು ತರಲು ತೆರಳಿದ್ದ 8 ಮಕ್ಕಳು ಸೇರಿ 43 ಮಂದಿ ಸಾವು
ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಮಾಡಬೇಕು. ಹಮಾಸ್ ಸಂಪೂರ್ಣ ನಿಶ್ಯಸ್ತ್ರೀಕರಣವಾಗಬೇಕು ಎಂದು ಇಸ್ರೇಲ್ ಹೇಳಿದೆ. ಇದಕ್ಕೆ ಪ್ರತಿಯಾಗಿ ನಿಶ್ಯಸ್ತ್ರೀಕರಣದ ಪ್ರಸ್ತಾಪವನ್ನು ತಿರಸ್ಕರಿಸುತ್ತೇವೆ. ಬಂಧಿತರನ್ನು ಬಿಡುಗಡೆ ಮಾಡುತ್ತೇವೆ. ಯುದ್ಧವನ್ನು ಕೊನೆಗೊಳಿಸುವುದಿಲ್ಲ ಎಂದು ಹಮಾಸ್ ಹೇಳಿದೆ.
ಗುರುವಾರ (ಆ.21) ಮಾತನಾಡಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಗಾಜಾ ನಗರವನ್ನು ವಶಪಡಿಸಿಕೊಳ್ಳಲು ಸೇನಾ ಕಾರ್ಯಾಚರಣೆಗಾಗಿ ಮಿಲಿಟರಿಗೆ ಅಧಿಕಾರ ನೀಡುವುದಾಗಿ ತಿಳಿಸಿದ್ದರು. ಅಲ್ಲದೇ, ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮತ್ತು ಷರತ್ತಿನ ಮೇಲೆ ಯುದ್ಧವನ್ನು ಕೊನೆಗೊಳಿಸಲು ಮಾತುಕತೆಗಳನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದರು. ಇದು ಇತ್ತೀಚಿನ ಕದನ ವಿರಾಮ ಪ್ರಸ್ತಾವನೆ ಬಗ್ಗೆ ಇಸ್ರೇಲ್‌ನ ಮೊದಲ ಬಹಿರಂಗ ಪ್ರತಿಕ್ರಿಯೆಯಾಗಿದೆ.
ಇತ್ತೀಚೆಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ನೆತನ್ಯಾಹು, ಹಮಾಸ್ ಉಗ್ರರನ್ನು ಸೋಲಿಸುವುದು ಮತ್ತು ನಮ್ಮ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಯೋಜನೆ ಒಟ್ಟಿಗೆ ಸಾಗುತ್ತವೆ ಎಂದಿದ್ದರು.
ಇನ್ನೂ ಕಳೆದ ವರ್ಷ (2024) ರಲ್ಲೂ ಇದೇ ವಿಚಾರ ಮಾತಾಡಿದ್ದ ಬೆಂಜಮಿನ್ ನೆತನ್ಯಾಹು ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಇಚ್ಚಿಸಿದ್ರೆ ಹಾಗೂ ಒತ್ತೆಯಾಳುಗಳನ್ನ ಬಿಡುಗಡೆ ಮಾಡಲು ಒಪ್ಪಿದರೆ ನಾಳೆಯೇ ಯುದ್ಧ ಕೊನೆಗೊಳ್ಳುತ್ತದೆ ಎಂದಿದ್ದರು.
ಗಾಜಾದಲ್ಲಿನ ಆರೋಗ್ಯ ಸಚಿವಾಲಯ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಲ್ಲಿಯವರೆಗೂ ಸುಮಾರು 62,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ.
ಗಾಜಾದಲ್ಲಿ ಸಂಘರ್ಷ ಆರಂಭವಾಗಿದ್ದೇಕೆ?
2023ರ ಅಕ್ಟೋಬರ್ 7 ರಂದು ಹಮಾಸ್ (Hamas) ಉಗ್ರರು ಇಸ್ರೇಲ್ ಮೇಲೆ ನಡೆಸಿದ ದಾಳಿ ಬಳಿಕ ಗಾಜಾದಲ್ಲಿ ಯುದ್ಧ ಪ್ರಾರಂಭವಾಯಿತು. ಇದು ಅಪಾರ ಸಾವುಗಳಿಗೆ ಕಾರಣವಾಯಿತು, ಅವರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದಾರೆ.
ಆ ದಿನ ಹಮಾಸ್ ಉಗ್ರರು ಅಪಹರಿಸಿದ್ದ 251 ಇಸ್ರೇಲಿನ ಜನರಲ್ಲಿ ಹಲವರು ಇನ್ನೂ ಗಾಜಾದಲ್ಲಿ ಬಂಧನದಲ್ಲೇ ಇದ್ದಾರೆ. ಇದರಲ್ಲಿ 27ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಇಸ್ರೇಲಿ ಸೇನೆ ಹೇಳಿಕೊಂಡಿತ್ತು. ಇದನ್ನೂ ಓದಿ: ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ; ಹಮಾಸ್ ಕಮಾಂಡರ್ ಸೇರಿ 60ಕ್ಕೂ ಹೆಚ್ಚು ಮಂದಿ ಬಲಿ