ಇರಾನ್-ಇಸ್ರೇಲ್ ಯುದ್ಧ; ಕರ್ನಾಟಕದ ಅಲೀಪುರದಲ್ಲಿ ಮನೆ ಮಾಡಿದ ಆತಂಕ

Public TV
2 Min Read

– ಇರಾನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡ್ತಿರುವ ವಿದ್ಯಾರ್ಥಿಗಳು

ಚಿಕ್ಕಬಳ್ಳಾಪುರ: ದೂರದ ಇರಾನ್ ಹಾಗೂ ಇಸ್ರೇಲ್ (Israel Iran Conflict) ನಡುವೆ ದಿನದಿಂದ ದಿನಕ್ಕೆ ಯುದ್ಧ ತಾರಕಕ್ಕೇರುತ್ತಿದೆ. ಕ್ಷಣದಿಂದ ಕ್ಷಣಕ್ಕೂ ಆತಂಕ ಹೆಚ್ಚಾಗುವಂತೆ ಮಾಡಿದೆ. ಇಡೀ ವಿಶ್ವವೇ ಈಗ ಇರಾನ್ ಮತ್ತು ಇಸ್ರೇಲ್ ಯುದ್ಧದತ್ತ ಚಿತ್ತ ನೆಟ್ಟಿವೆ. ಇಂತಹ ಸನ್ನಿವೇಶದಲ್ಲಿ ನಮ್ಮ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ (Alipur) ಗ್ರಾಮದಲ್ಲೂ ಸಹ ಆತಂಕ ಮನೆ ಮಾಡಿದೆ.

ಆತಂಕ ಯಾಕೆ?
ಹೌದು… ಎತ್ತಣ ಮಾಮರ ಎತ್ತಣ ಕೋಗಿಲೆ ಅನ್ನೋ ಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಮಕ್ಕೂ ದೂರದ ಯುದ್ಧಪೀಡಿತ ಇರಾನ್‌ಗೂ ಒಂಥರಾ ಅವಿನಾಭಾವ ನಂಟಿದೆ. ಸರಿಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಶಿಯಾ ಮುಸ್ಲಿಂ ಸಮುದಾಯದವರೇ ಇರುವ ಅಲೀಪುರ ಗ್ರಾಮಕ್ಕೂ ದೂರದ ಇರಾನ್ ದೇಶದ ಜೊತೆಗೆ ಬಹಳಷ್ಟು ನಂಟಿದ್ದು, ಬಾಂಧವ್ಯದ ಕೊಂಡಿ ಬೆಸೆದುಕೊಂಡಿದೆ. ಈ ಗ್ರಾಮದ 10 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಇರಾನ್ ದೇಶದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡ್ತಿದ್ದಾರೆ. 50 ಕ್ಕೂ ಹೆಚ್ಚು ಮಂದಿ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಪಡೆಯಲು ಇರಾನ್‌ನಲ್ಲೇ ನೆಲೆಸಿದ್ದಾರೆ. ಪ್ರಮುಖವಾಗಿ ಇರಾನ್‍ನ ಮಶದ್‌ನ ಪ್ರಮುಖ ಧಾರ್ಮಿಕ ಕೇಂದ್ರ ಪವಿತ್ರ ಸ್ಥಳ. ಹಾಗಾಗಿಯೇ ಪ್ರತಿ ವರ್ಷವೂ ನೂರಾರು ಮಂದಿ ಇರಾನ್‌ನ ಮಶದ್‌ಗೆ ಭೇಟಿ ಮಾಡಿ ಪ್ರಾರ್ಥನೆ ಸಲ್ಲಿಸಿ ಬರುತ್ತಾರೆ. ಇಂತಹ ಇರಾನ್ ಮೇಲೆ ಯುದ್ಧ ಸಾರಲಾಗಿದೆ ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತೀಯರ ರಕ್ಷಣೆಗಾಗಿ ತನ್ನ ವಾಯುನೆಲೆ ತೆರೆದ ಇರಾನ್‌

ಇರಾನ್‌ನಲ್ಲಿರುವ ವಿದ್ಯಾರ್ಥಿಗಳು; ಅಲಿಪುರದ ಪೋಷಕರಲ್ಲಿ ಆತಂಕ
ಹೌದು.. ಇರಾನ್‌ನಲ್ಲಿ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ದರಕ್ಕಿಂತ ಲಕ್ಷಗಟ್ಟಲೇ ಕಡಿಮೆ ದರಕ್ಕೆ ಎಂಬಿಬಿಎಸ್ ವ್ಯಾಸಂಗ ಮಾಡಬಹುದು. ಹಾಗಾಗಿ ಇಲ್ಲಿನ ಜನರು ತಮ್ಮ ಮಕ್ಕಳನ್ನ ವೈದ್ಯಕೀಯ ಶಿಕ್ಷಣ ಪಡೆಯುವ ಸಲುವಾಗಿ ಇರಾನ್‌ನಲ್ಲಿ ನೆಲೆಸಿದ್ದಾರೆ. ಈ ಬಗ್ಗೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ವಿದ್ಯಾರ್ಥಿಗಳಾದ ಜೈನಭಿ ಹಾಗೂ ಮಹಮದ್ ಅನ್ಸಾರಿಯ ಕುಟುಂಬದ ಸದಸ್ಯ ಮಹಮದ್ ತಕೀ, 2 ವರ್ಷಗಳಿಂದ ಇರಾನ್‌ನ ತೆಹರಾನ್ ಯೂನಿವರ್ಸಿಟಿಯಲ್ಲಿ ನಮ್ಮ ಮಕ್ಕಳು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ ನಮ್ಮ ಮಕ್ಕಳು ಮಶದ್‌ನಲ್ಲಿ ಸುರಕ್ಷಿತವಾಗಿರುವ ಬಗ್ಗೆ ಫೋನ್ ಮಾಡಿ ತಿಳಿಸಿದ್ದಾರೆ. ಮೂರ್ನಾಲ್ಕು ದಿನಗಳ ಒಳಗಾಗಿ ಭಾರತಕ್ಕೆ ವಾಪಸ್ ಬರುವುದಾಗಿ ಮಾಹಿತಿ ಸಿಗುತ್ತಿದೆ. ನಮ್ಮ ಮಕ್ಕಳು ಇರುವ ಜಾಗದ ಅಕ್ಕಪಕ್ಕದಲ್ಲೇ ಬಾಂಬ್ ದಾಳಿಗಳಾಗಿವೆ. ಇದರಿಂದ ಸಹಜವಾಗಿ ನಮಗೂ ಆತಂಕ ಮನೆ ಮಾಡಿದೆ. ಆದರೆ, ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಸುರಕ್ಷಿತವಾಗಿ ನಮ್ಮ ಮಕ್ಕಳನ್ನ ವಾಪಸ್ ಕರೆತರಲಿದ್ದಾರೆ ಎಂಬ ವಿಶ್ವಾಸದ ಮಾತಗಳನ್ನಾಡಿದರು.

Share This Article