ಮುರಿದ ಸೀಟ್‌ ನೀಡಿ ಮೋಸ ಮಾಡಿದ್ದೀರಿ: ಏರ್‌ ಇಂಡಿಯಾ ವಿರುದ್ಧ ಶಿವರಾಜ್‌ ಸಿಂಗ್‌ ಚೌಹಾಣ್‌ ಕೆಂಡಾಮಂಡಲ

Public TV
3 Min Read

ನವದೆಹಲಿ: ಏರ್‌ ಇಂಡಿಯಾದ (Air India) ಕೆಟ್ಟ ಸೇವೆಗೆ ಕೇಂದ್ರ ಕೃಷಿ ಸಚಿವ, ಮಾಜಿ ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ (Shivraj Singh Chouhan) ಕೆಂಡಾಮಂಡಲವಾಗಿದ್ದಾರೆ.

ಮುರಿದ ಸೀಟನ್ನು ನೀಡಿದ್ದಕ್ಕೆ ಸಿಟ್ಟಾದ ಚೌಹಾಣ್‌ ಗ್ರಾಹಕರಿಗೆ ನೀವು ಮೋಸ ಮಾಡುತ್ತಿದ್ದೀರಿ. ಟಿಕೆಟ್‌ಗೆ ಪೂರ್ಣ ಶುಲ್ಕ ವಿಧಿಸಿದ ನಂತರ ಕೆಟ್ಟು ಹೋದ ಸೀಟ್‌ ಮೇಲೆ ಕುಳಿತುಕೊಳ್ಳುವಂತೆ ಹೇಳುವುದು ಅನೈತಿಕ. ಇದು ಪ್ರಯಾಣಿಕರಿಗೆ ಮಾಡುತ್ತಿರುವ ಮೋಸ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಟ್ಟ ಸೇವೆಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್‌ ಮಾಡಿ ಏರ್‌ ಇಂಡಿಯಾವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಶಿವರಾಜ್‌ ಸಿಂಗ್‌ ಅವರ ಪೋಸ್ಟ್‌ ಪ್ರಕಟವಾದ ನಂತರ ಏರ್‌ ಇಂಡಿಯಾ ಕ್ಷಮೆಯಾಚನೆ ಮಾಡಿದೆ. ಭವಿಷ್ಯದಲ್ಲಿ ಇಂತಹ ಯಾವುದೇ ಘಟನೆಗಳು ಸಂಭವಿಸದಂತೆ ನಾವು ಈ ವಿಷಯವನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಿದ್ದೇವೆ. ದಯವಿಟ್ಟು ನಿಮ್ಮನ್ನು ಸಂಪರ್ಕಿಸಲು ಅನುಕೂಲಕರ ಸಮಯದ ಬಗ್ಗೆ ನಮಗೆ ಡೈರೆಕ್ಟ್‌ ಮೆಸೇಜ್‌ ಮಾಡಿ ಎಂದು ಕೇಳಿಕೊಂಡಿದೆ. ಇದನ್ನೂ ಓದಿ: ಅಪರಿಚಿತ ಮಹಿಳೆಗೆ `ನೀನು ತೆಳ್ಳಗೆ, ಬೆಳ್ಳಗೆ ಇದ್ದೀಯʼ ಅಂತ ಮೆಸೇಜ್‌ ಕಳಿಸೋದು ಅಶ್ಲೀಲತೆ: ಮುಂಬೈ ಕೋರ್ಟ್‌

ಪೋಸ್ಟ್‌ನಲ್ಲಿ ಏನಿದೆ?
ಇಂದು ನಾನು ಭೋಪಾಲ್‌ನಿಂದ ದೆಹಲಿಗೆ ಬಂದು ಪುಸಾದಲ್ಲಿ ಕಿಸಾನ್ ಮೇಳವನ್ನು ಉದ್ಘಾಟಿಸಿ, ಕುರುಕ್ಷೇತ್ರದಲ್ಲಿ ನೈಸರ್ಗಿಕ ಕೃಷಿ ಮಿಷನ್‌ನ ಸಭೆಯನ್ನು ನಡೆಸಿ, ಚಂಡೀಗಢದಲ್ಲಿ ಕಿಸಾನ್ ಸಂಘಟನೆಯ ಗೌರವಾನ್ವಿತ ಪ್ರತಿನಿಧಿಗಳೊಂದಿಗೆ ಚರ್ಚಿಸಬೇಕಿತ್ತು.

ದೆಹಲಿಗೆ ಬರುವ ಉದ್ದೇಶದಿಂದ ಏರ್ ಇಂಡಿಯಾ ವಿಮಾನ ಸಂಖ್ಯೆ AI436 ರಲ್ಲಿ ಟಿಕೆಟ್ ಬುಕ್ ಮಾಡಿದ್ದೆ, ನನಗೆ ಸೀಟ್ ಸಂಖ್ಯೆ 8C ನೀಡಲಾಗಿತ್ತು. ನಾನು ಹೋಗಿ ಸೀಟಿನಲ್ಲಿ ಕುಳಿತೆ. ಆದರೆ ಆ ಸೀಟು ಮುರಿದು ಹೋಗಿತ್ತು.

ಮುರಿದು ಹೋದ ಸೀಟನ್ನು ಯಾಕೆ ಹಂಚಿಕೆ ಮಾಡಲಾಗಿದೆ ಎಂದು ನಾನು ವಿಮಾನಯಾನ ಸಿಬ್ಬಂದಿಯನ್ನು ಕೇಳಿದ್ದೆ. ಅದಕ್ಕೆ ಅವರು, ಈ ಸೀಟು ಚೆನ್ನಾಗಿಲ್ಲ ಮತ್ತು ಅದರ ಟಿಕೆಟ್ ಮಾರಾಟ ಮಾಡಬಾರದು ಎಂದು ಆಡಳಿತ ಮಂಡಳಿಗೆ ಮೊದಲೇ ತಿಳಿಸಲಾಗಿತ್ತು ಎಂದು ಅವರು ನನಗೆ ಹೇಳಿದರು. ಆದರೆ ಈ ಒಂದು ಸೀಟು ಮಾತ್ರವಲ್ಲ ಇನ್ನು ಹಲವು ಸೀಟುಗಳು ಮುರಿದು ಹೋಗಿತ್ತು.

ನನ್ನ ಸಹ ಪ್ರಯಾಣಿಕರು ನನ್ನ ಸೀಟನ್ನು ಬದಲಾಯಿಸಿ ಉತ್ತಮ ಸೀಟಿನಲ್ಲಿ ಕುಳಿತುಕೊಳ್ಳಲು ನನ್ನನ್ನು ಕೇಳಿದರು. ಆದರೆ ನನಗಾಗಿ ನಾನು ಇನ್ನೊಬ್ಬ ಸ್ನೇಹಿತನಿಗೆ ಯಾಕೆ ತೊಂದರೆ ಕೊಡಬೇಕು ಎಂದು ಭಾವಿಸಿ ನಾನು ಸೀಟಿನಲ್ಲೇ ಕುಳಿತು ಪ್ರಯಾಣವನ್ನು ಪೂರ್ಣಗೊಳಿಸಲು ನಿರ್ಧರಿಸಿದೆ.

ಟಾಟಾ (TATA) ಆಡಳಿತವನ್ನು ವಹಿಸಿಕೊಂಡ ನಂತರ ಏರ್ ಇಂಡಿಯಾದ ಸೇವೆ ಸುಧಾರಣೆಯಾಗಲಿದೆ ಎಂದು ನನ್ನ ಅನಿಸಿಕೆಯಾಗಿತ್ತು. ಆದರೆ ಅದು ನನ್ನ ತಪ್ಪು ಕಲ್ಪನೆ ಎನ್ನುವುದು ಈಗ ನನಗೆ ಅರಿವಾಗಿದೆ. ಪ್ರಯಾಣಿಕರಿಂದ ಪೂರ್ಣ ಟಿಕೆಟ್‌ ದರವನ್ನು ಪಡೆದ ನಂತರ ಕೆಟ್ಟ ಮತ್ತು ಅನಾನುಕೂಲಕರವಾದ ಆಸನಗಳ ಮೇಲೆ ಕುಳಿತುಕೊಳ್ಳುವಂತೆ ಮಾಡುವುದು ಅನೈತಿಕ. ಇದು ಪ್ರಯಾಣಿಕರನ್ನು ಮೋಸಗೊಳಿಸುವುದಿಲ್ಲವೇ?

ಭವಿಷ್ಯದಲ್ಲಿ ಯಾವುದೇ ಪ್ರಯಾಣಿಕರು ಇಂತಹ ಅನಾನುಕೂಲತೆಯನ್ನು ಎದುರಿಸದಂತೆ ಏರ್ ಇಂಡಿಯಾ ಆಡಳಿತ ಮಂಡಳಿ ಕ್ರಮ ಕೈಗೊಳ್ಳುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

 

Share This Article