ಇಶಾಂತ್, ಅಶ್ವಿನ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ – ಟೀಂ ಇಂಡಿಯಾಗೆ 194 ರನ್ ಟಾರ್ಗೆಟ್

Public TV
2 Min Read

ಬರ್ಮಿಂಗ್‍ಹ್ಯಾಮ್: ಟೀಂ ಇಂಡಿಯಾ ಪ್ರಮುಖ ವೇಗಿ ಇಶಾಂತ್ ಶರ್ಮಾ, ಸ್ಪಿನ್ನರ್ ಆರ್ ಅಶ್ವಿನ್ ಬೌಲಿಗ್ ದಾಳಿಗೆ ಇಂಗ್ಲೆಂಡ್ ಬ್ಯಾಟ್ಸ್‍ಮನ್‍ಗಳು ಪೆವಿಲಿಯನ್ ಪರೇಡ್ ನಡೆಸಿದರು.

ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಆಟಗಾರರನ್ನು 180 ರನ್ ಗಳಿಗೆ ಕಟ್ಟಿಹಾಕಿದ ಟೀಂ ಇಂಡಿಯಾ ಗೆಲುವಿಗೆ 194 ರನ್ ಗಳ ಗುರಿಪಡೆದಿದೆ.

ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ಆರಂಭದಲ್ಲಿ ಅಶ್ವಿನ್ ದಾಳಿಗೆ ಕುಕ್ (0), ಜೋ ರೂಟ್ (14) ಹಾಗೂ ಕೇಟನ್ ಜಿನಿಂಗ್ಸ್ (8) ವಿಕೆಟ್ ಪಡೆದು ಎದುರಾಳಿ ತಂಡಕ್ಕೆ ಆಘಾತ ನೀಡಿದರು. ಮಧ್ಯಮ ಕ್ರಮಾಂಕದ ಮೇಲೆ ತಮ್ಮ ಸ್ಪೀಡ್ ಬೌಲಿಂಗ್ ಮೂಲಕ ದಾಳಿ ನಡೆಸಿದ ಇಶಾಂತ್ ಶರ್ಮಾ 8 ರನ್ ಅಂತರದಲ್ಲಿ ಮಲಾನ್ (20), ಬೆನ್ ಸ್ಟೋಕ್ಸ್ (6), ಜಾನಿ ಬೇಸ್ಟೊ (28) ವಿಕೆಟ್ ಪಡೆದು ಮಿಂಚಿದರು. ಊಟದ ವಿರಾಮದ ವೇಳೆಗೆ ಇಂಗ್ಲೆಂಡ್ 86 ರನ್‍ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿತ್ತು.

ವಿರಾಮದ ಬಳಿಕವೂ ತಮ್ಮ ಮಿಂಚಿನ ಬೌಲಿಂಗ್ ದಾಳಿ ಮುಂದುವರಿಸಿದ ಇಶಾಂತ್ ಶರ್ಮಾ ಅನುಭವಿ ಆಟಗಾರ ಜೋಸ್ ಬಟ್ಲರ್(1) ವಿಕೆಟ್ ಪಡೆದರು. ಬಳಿಕ ಬಂದ ಸ್ಯಾಮ್ ಕರ್ರನ್ ಹಾಗೂ ಆದಿಲ್ ರಶೀದ್ ಉತ್ತಮ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ಮೊದಲ ಇನ್ನಿಂಗ್ಸ್ ನಲ್ಲಿ ಬೌಲಿಂಗ್ ನಲ್ಲಿ ಟೀಂ ಇಂಡಿಯಾವನ್ನು ಕಾಡಿದ ಕಾರನ್ 2ನೇ ಇನ್ನಿಗ್ಸ್ ನಲ್ಲಿ ಬ್ಯಾಟ್ ಮೂಲಕ ತಲೆನೋವಾದರು. ಈ ಜೋಡಿ 8 ನೇ ವಿಕೆಟ್ ಗೆ 48 ರನ್ ಗಳ ಉತ್ತಮ ಜೊತೆಯಾಟ ನೀಡಿತು.

ಈ ವೇಳೆ ಯಾದವ್, 16 ರನ್ ಗಳಿಸಿದ್ದ ರಶೀದ್ ವಿಕೆಟ್ ಪಡೆದು ಇಬ್ಬರ ಜೊತೆಯಾಟವನ್ನು ಮುರಿದರು. ಬಳಿಕ ಬಂದ ಬೋರ್ಡ್ ರೊಂದಿಗೆ ಕೂಡಿಕೊಂಡ ಕರ್ರನ್ 41 ರನ್ ಜೊತೆಯಾಟವಾಡಿ ಭಾರತೀಯ ಬೌಲರ್ ಗಳನ್ನು ಕಾಡಿದರು. ಅಂತಿಮವಾಗಿ 63 ರನ್ ಕರ್ರನ್ ಉಮೇಶ್ ಯಾದವ್ ಬೌಲಿಂಗ್ ನಲ್ಲಿ ದಿನೇಶ್ ಕಾರ್ತಿಕ್‍ಗೆ ಕ್ಯಾಚ್ ನೀಡಿ ಔಟಾದರು. ಇದರೊಂದಿಗೆ ಇಂಗ್ಲೆಂಡ್ 180 ರನ್ ಗಳಿಗೆ ಅಲೌಟ್ ಆಯಿತು.

ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ 13 ಓವರ್ ಎಸೆದು 5 ವಿಕೆಟ್ ಪಡೆದರೆ, ಅಶ್ವಿನ್ 3, ಮಹಮ್ಮದ್ ಶಮಿ 2 ಹಾಗೂ ಯಾದವ್ 1 ವಿಕೆಟ್ ಪಡೆದರು. ಗೆಲ್ಲು 193 ರನ್ ಗುರಿ ಪಡೆದಿರುವ ಟೀಂ ಇಂಡಿಯಾ 27 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಅಘಾತ ಎದುರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *