ಕಪಿಲ್ ದೇವ್ ದಾಖಲೆ ಮುರಿದ ಇಶಾಂತ್

Public TV
1 Min Read

ನವದೆಹಲಿ: ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತದ ಮಾಜಿ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರ ದಾಖಲೆಯನ್ನು ವೇಗಿ ಇಶಾಂತ್ ಶರ್ಮಾ ಹಿಂದಿಕ್ಕಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಆಟಗಾರರು ಹಲವಾರು ದಾಖಲೆಯನ್ನು ನಿರ್ಮಿಸುತ್ತಿದ್ದಾರೆ. ವಿಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಅವರು ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು. ಈ ಮೂಲಕ ಭಾರತ ಪರ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೂರನೇ ಆಟಗಾರ ಎಂದು ಖ್ಯಾತಿ ಪಡೆದಿದ್ದರು.

ಇದೇ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‍ನ ಮೊದಲ ಅರ್ಧಶತಕ ಬಾರಿಸಿದ್ದ ಇಶಾಂತ್ ಶರ್ಮಾ ಈಗ ಮೊತ್ತೊಂದು ದಾಖಲೆ ಮಾಡಿದ್ದಾರೆ. ಏಷ್ಯಾದಿಂದ ಆಚೆಗೆ 45 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಕಪಿಲ್ ದೇವ್ ಅವರು ಒಟ್ಟು 155 ವಿಕೆಟ್ ಕಿತ್ತಿದ್ದರು. ಪಸ್ತುತ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಆಟಗಾರ ಜಹಮರ್ ಹ್ಯಾಮಿಲ್ಟನ್ ಅವರನ್ನು ಔಟ್ ಮಾಡುವ ಮೂಲಕ ಇಶಾಂತ್ ಅವರು 156 ವಿಕೆಟ್ ಕಿತ್ತು ಕಪಿಲ್ ದೇವ್ ದಾಖಲೆಯನ್ನು ಮುರಿದು ಹಾಕಿದ್ದಾರೆ.

ಏಷ್ಯಾದಿಂದ ಆಚೆಗೆ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 50 ಪಂದ್ಯಗಳನ್ನು ಆಡಿ 200 ವಿಕೆಟ್ ಪಡೆದಿರುವ ಕನ್ನಡಿಗ ಅನಿಲ್ ಕುಂಬ್ಳೆ ಅವರು ಮೊದಲ ಸ್ಥಾನದಲ್ಲಿ ಇದ್ದಾರೆ. ಇವರನ್ನು ಬಿಟ್ಟರೆ ಇಶಾಂತ್ ಶರ್ಮಾ ನಂತರ ಕಪಿಲ್ ದೇವ್ ಇದ್ದಾರೆ. 38 ಪಂದ್ಯಗಳನ್ನು ಆಡಿ 147 ವಿಕೆಟ್ ಪಡೆದ ಮಾಜಿ ವೇಗಿ ಜಹೀರ್ ಖಾನ್ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಏಷ್ಯಾದಿಂದ ಹೊರಗೆ 28 ಪಂದ್ಯಗಳನ್ನು ಆಡಿ 101 ವಿಕೆಟ್ ಪಡೆದಿರುವ ಮೊಹಮ್ಮದ್ ಶಮಿ ಐದನೇ ಸ್ಥಾನದಲ್ಲಿ ಇದ್ದಾರೆ.

ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡಿರುವ 468 ರನ್‍ಗಳ ದೊಡ್ಡ ಮೊತ್ತವನ್ನು ಬೆನ್ನಟ್ಟಿರುವ ವೆಸ್ಟ್ ಇಂಡೀಸ್ ತಂಡ ಮೂರನೇ ದಿನದ ಅಂತ್ಯಕ್ಕೆ 45 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡಿದೆ. ವೆಸ್ಟ್ ಇಂಡೀಸ್‍ಗೆ ಪಂದ್ಯ ಗೆಲ್ಲಲು ಇನ್ನೂ 423 ರನ್‍ಗಳ ಅವಶ್ಯಕತೆ ಇದ್ದು, 2 ದಿನದ ಆಟ ಬಾಕಿಯಿದೆ.

Share This Article
Leave a Comment

Leave a Reply

Your email address will not be published. Required fields are marked *