ಬ್ರ್ಯಾಂಡ್ ಬೆಂಗಳೂರು ಇದ್ಯಾ? ಸತ್ತು ಹೋಗಿದ್ಯಾ? ಅಭಿವೃದ್ಧಿಗೆ ಸರ್ಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ: ಅಶೋಕ್

Public TV
2 Min Read

ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ಬೆಂಗಳೂರು ಅಭಿವೃದ್ಧಿಗೆ ಒಂದು ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಅವರು ವಾಗ್ದಾಳಿ ನಡೆಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹೋಗಿ ಫೋಟೋ ಶೋ ಮಾಡುವುದು ಬಿಟ್ಟರೆ ಬೇರೇನೂ ಕೆಲಸ ಆಗುತ್ತಿಲ್ಲ. ಕಮಿಷನರ್ ಅವರು ಮಳೆಗೆ ಸಂಬಂಧಿಸಿ ಎಲ್ಲ ಮಾಡಿದ್ದಾಗಿ ಒಂದು ತಿಂಗಳ ಹಿಂದೆಯೇ ಹೇಳಿಕೆ ನೀಡಿದ್ದರು. ಪಾಲಿಕೆ ಎಲ್ಲ ಸಿದ್ಧತೆ ಮಾಡಿದ್ದರೆ ಸಿಎಂ ಸ್ಥಳ ಭೇಟಿ ಮಾಡುವ ಪ್ರಮೇಯ ಯಾಕೆ ಬಂತು ಎಂದು ಪ್ರಶ್ನಿಸಿದರು. ಇದನ್ನೂ ಓದಿ:  ಮತಗಟ್ಟೆ ದತ್ತಾಂಶ ಅಪ್ಲೋಡ್ ಮಾಡುವುದು ಕಷ್ಟ – ಸುಪ್ರೀಂ ಕೋರ್ಟ್‌

 

ರಾಜ್ಯ ಸರ್ಕಾರ ನಷ್ಟ ಆಗಿದ್ಯಾ? ಹಿಂದೆ ಯಡಿಯೂರಪ್ಪನವರು (Yediyurappa) ಒಂದು ವರ್ಷದಲ್ಲಿ 7 ಸಾವಿರ ಕೋಟಿ ರೂ. ವಿಶೇಷ ಅನುದಾನ ನೀಡಿದ್ದರು. ಬಸವರಾಜ ಬೊಮ್ಮಾಯಿಯವರು (Basavaraj Bommai) 6,700 ಕೋಟಿ ಬಿಡುಗಡೆ ಮಾಡಿದ್ದರು. ಕಾಂಗ್ರೆಸ್ಸಿನ ಯೋಗ್ಯತೆಗೆ ಎಷ್ಟು ಬಿಡುಗಡೆ ಮಾಡಿದ್ದಾರೆಂದು ಹೇಳಲಿ ಎಂದು ಸವಾಲೆಸೆದರು. ರಾಜಕಾಲುವೆ ಸರಿಪಡಿಸಲು, ಲಕ್ಷಾಂತರ ಹೊಂಡ ಗುಂಡಿ ಸರಿಪಡಿಸಲು ಎಷ್ಟು ಹಣ ನೀಡಿದ್ದೀರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮೇ 28 ರಂದು ಬೆಂಗಳೂರಿನ ಅವ್ಯವಸ್ಥೆಗಳ ವಿರುದ್ಧ ಬೃಹತ್ ಪ್ರತಿಭಟನೆ: ವಿಜಯೇಂದ್ರ

ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಹಣ ಇಲ್ಲದೆ ಗುತ್ತಿಗೆದಾರರು ಆತ್ಮಹತ್ಯೆಗೆ ಮುಂದಾಗಿದ್ದರು. ಕಮಿಷನ್ ಆಪಾದನೆ ಮಾಡಿದ್ದರು. ಈ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಪಾತ್ರ ಏನು ಎಂದು ಕೇಳಿದರು. ರಾಜ್ಯ ಸರಕಾರ ಎಷ್ಟು ಹಣ ಬಿಡುಗಡೆ ಮಾಡಲಿದೆ? ಯಾವಾಗ ಹೊಂಡದ ಗುಂಡಿ ಮುಚ್ಚುತ್ತೀರಿ ಎಂದ ಅವರು, ಕುಡಿಯುವ ನೀರಿಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಮರ್ಯಾದೆ ಹರಾಜಾಗಿದೆ ಎಂದು ವಾಗ್ದಾಳಿ ನಡೆಸಿದರು.

 

ಬ್ರ್ಯಾಂಡ್ ಬೆಂಗಳೂರು (Brand Bengaluru) ಹೆಸರಿನಲ್ಲಿ ಎಷ್ಟು ಹಣ ನೀಡಿದ್ದೀರಿ? ಲೆಕ್ಕ ಕೊಡಿ ಕಾಂಗ್ರೆಸ್ಸಿನವರೇ ಎಂದು ಕೇಳಿದರು. ಬಿಲ್ ಸಿಗದೆ ಕಸ ತೆಗೆಯುವವರು ಸಮಸ್ಯೆಯಲ್ಲಿದ್ದಾರೆ. ರಾಶಿ ರಾಶಿ ಕಸ ಬಿದ್ದಿದೆ. ಬೆಂಗಳೂರಿನ ತೆರಿಗೆ ನಮ್ಮ ಹಕ್ಕು ಎಂದು ಇಲ್ಲಿನ ಜನರೂ ಕೇಳುತ್ತಿದ್ದಾರೆ ಎಂದು ತಿಳಿಸಿದರು.

ಬ್ರ್ಯಾಂಡ್ ಬೆಂಗಳೂರು ಇದೆಯಾ ಸತ್ತು ಹೋಗಿದೆಯಾ ಎಂದು ಪ್ರಶ್ನೆ ಮುಂದಿಟ್ಟ ಅವರು, ಸರ್ಕಾರ ಸ್ಪಷ್ಟವಾಗಿ ಹೇಳಬೇಕು ಎಂದು ಆಗ್ರಹಿಸಿದರು. ಇದರ ವಿರುದ್ಧ ಇದೇ 28ರಂದು ಫ್ರೀಡಂ ಪಾರ್ಕಿನಲ್ಲಿ ಬಿಜೆಪಿ ದೊಡ್ಡ ಹೋರಾಟ ಮಾಡಲಿದೆ ಎಂದು ತಿಳಿಸಿದರು.

Share This Article