ವೈಯಕ್ತಿಕ ಹಗೆತನಕ್ಕೆ ಬಲಿಯಾಗ್ತಿದೆಯೇ ಟೀಂ ಇಂಡಿಯಾ – ಇನ್ನೂ ಮುಗಿದಿಲ್ವಾ ಕೊಹ್ಲಿ-ಗಂಭೀರ್‌ ಮುನಿಸು?

Public TV
5 Min Read

ಇತ್ತೀಚೆಗೆ ಭಾರತೀಯ ಪುರುಷರ ಕ್ರಿಕೆಟ್‌ ತಂಡ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನ 2-0 ಅಂತರದಲ್ಲಿ ಸೋಲನುಭವಿಸಿತು. ಈ ಸರಣಿಯೊಂದಿಗೆ ನಿವೃತ್ತಿಯ ಅಂಚಿನಲ್ಲಿರುವ ಸ್ಟಾರ್‌ ಕ್ರಿಕೆಟಿಗರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾ ಮಣ್ಣಿಗೆ ವಿದಾಯ ಹೇಳಿದರು. ಸರಣಿ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ಕೋಚ್‌ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರ ವಿರುದ್ಧ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ತಂಡದ ಆಯ್ಕೆ ಮತ್ತು ತಂತ್ರಗಾರಿಕೆಯಲ್ಲಿ ಲೋಪಗಳಾಗಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹಿರಿಯ ಆಟಗಾರರ ಅನುಭವವನ್ನು ಬಳಸಿಕೊಳ್ಳದಿರುವುದು ಕೂಡ ಟೀಕೆಗೆ ಗುರಿಯಾಗಿದೆ. ಇಬ್ಬರೂ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡರೆ ತಂಡದ ಭವಿಷ್ಯ ಸುಗಮವಾಗಲಿದೆ ಎಂಬುದು ಕೂಡ ಕ್ರಿಕೆಟ್‌ ತಜ್ಞರ ಅಭಿಪ್ರಾಯವಾಗಿದೆ.

ಅಷ್ಟಕ್ಕೂ ಟೀಂ ಇಂಡಿಯಾದಲ್ಲಿ ಏನಾಗ್ತಿದೆ? ವಿರಾಟ್‌ ಕೊಹ್ಲಿ, ಗೌತಮ್‌ ಗಂಭೀರ್‌, ರೋಹಿತ್‌ ಶರ್ಮಾ ನಡುವಿನ ಮುನಿಸು ಇನ್ನೂ ಬಗೆಹರಿದಿಲ್ಲವೇ? ಆಯ್ಕೆಯಲ್ಲಿ ಅನುಭವಿಗಳನ್ನೇ ಕಡೆಗಣಿಸುತ್ತಿರುವುದು ಏಕೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…

ಗಂಭಿರ್‌ ಕೋಚ್‌ ಆದ ಆರಂಭದಲ್ಲೇ ವಿಘ್ನ!
ಹೌದು.. 2024ರ ವರ್ಷ ಟೀಂ ಇಂಡಿಯಾಕ್ಕೆ ಅವಿಸ್ಮರಣೀಯ ಕ್ಷಣಗಳನ್ನ ತಂದುಕೊಟ್ಟಿತ್ತು. ಟೀಂ ಇಂಡಿಯಾ ಮಾಜಿ ಮುಖ್ಯಕೋಚ್‌ ರಾಹುಲ್‌ ದ್ರಾವಿಡ್‌ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಟಿ20 ವಿಶ್ವಕಪ್‌ ಗೆದ್ದು ಬೀಗಿತ್ತು. ಈ ವಿಶ್ವಕಪ್‌ನೊಂದಿಗೆ ರಾಹುಲ್‌ ದ್ರಾವಿಡ್‌ ಕೋಚ್‌ ಹುದ್ದೆಗೆ ಗುಡ್‌ಬೈ ಹೇಳಿದ್ರು. ಹಾಗೆಯೇ ಲೆಜೆಂಡ್‌ ಆಟಗಾರರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದರು. 2024ರ ಜುಲೈ ಅಂತ್ಯದಿಂದ ಗೌತಮ್‌ ಗಂಭೀರ್‌ ಟೀಂ ಇಂಡಿಯಾ ಮುಖ್ಯಕೋಚ್‌ ಆಗಿ ಆಯ್ಕೆಯಾದರು. ಗಂಭೀರ್‌ ಸಾರಥ್ಯ ವಹಿಸಿಕೊಂಡ ನಂತರ ಟಿ20 ಸರಣಿಯಲ್ಲಿ ಸಾಲು ಸಾಲು ಗೆಲುವು ಸಾಧಿಸಿಸುತ್ತಿದ್ದ ಭಾರತ ನಿರ್ಣಾಯಕ ಏಕದಿನ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೀನಾಯ ಸೋಲು ಅನುಭವಿಸುತ್ತಲೇ ಬಂದಿತು.

ಕೋಚ್‌ ಆದ ಆರಂಭದಲ್ಲೇ ಶ್ರೀಲಂಕಾ ವಿರುದ್ಧ ಏಕದಿನ ಸರಣಿ, ಬಳಿಕ ನ್ಯೂಜಿಲೆಂಡ್‌ ವಿರುದ್ಧ 3 ಪಂದ್ಯಗಳ ಟೆಸ್ಟ್‌ ಸರಣಿ ಸೋತಿತು. ಆ ಬಳಿಕ ಭಾರತಕ್ಕೆ ಪ್ರತಿಷ್ಠೆಯ ಸರಣಿಯಾಗಿದ್ದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲೂ ಭಾರತ 1-4 ಅಂತರದಲ್ಲಿ ಹೀನಾಯ ಸೋಲು ಕಂಡಿತು.

ಗಂಭೀರ್‌ಗೆ ಬಲ ತುಂಬಿದ ʻಚಾಂಪಿಯನ್ಸ್‌ ಟ್ರೋಫಿʼ
ಯೆಸ್‌. ಸಾಲು ಸಾಲು ಸರಣಿಗಳನ್ನ ಸೋತು ಭಾರೀ ಟೀಕೆಗೆ ಗುರಿಯಾಗಿದ್ದ ಗಂಭೀರ್‌ ಅವರ ನಾಯಕತ್ವಕ್ಕೆ ಬಲ ತುಂಬಿದ್ದು 2025ರ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ. ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಈ ಟೂರ್ನಿಯಲ್ಲಿ ಭಾರತ ಒಂದೇ ಒಂದು ಪಂದ್ಯವನ್ನೂ ಸೋಲದೇ ಟ್ರೋಫಿ ಎತ್ತಿ ಹಿಡಿಯಿತು. ಇದು ಗಂಭೀರ್‌ ನಾಯಕತ್ವದಲ್ಲಿ ಭಾರತ ಗೆದ್ದ ಮೊದಲ ಐಸಿಸಿ ಟ್ರೋಫಿ. ಅಲ್ಲದೇ ಕಳೆದ ತಿಂಗಳಷ್ಟೇ ನಡೆದ ಟಿ20 ಏಷ್ಯಾಕಪ್‌ ಟ್ರೋಫಿಯನ್ನು ಭಾರತ ತನ್ನದಾಗಿಸಿಕೊಂಡಿತು. ಇದ್ರ ಹೊರತಾಗಿಯೂ ಇತ್ತೀಚಿನ ಟೂರ್ನಿಗಳಲ್ಲಿ ಗೌತಮ್‌ ಗಂಭಿರ್‌ ಹಾಗೂ ಆಯ್ಕೆಯ ಸಮಿತಿ ನಿರ್ಧಾರಗಳು ಟೀಂ ಇಂಡಿಯಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿವೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಎರಡು ಸ್ಥಾನಗಳಲ್ಲೇ ಇರುತ್ತಿದ್ದ ಟೀಂ ಇಂಡಿಯಾ ಈಗ ಐಸಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ. ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ. ಟಿ20 ಕ್ರಿಕೆಟ್‌ನಲ್ಲಿ ನಂ.1 ರ‍್ಯಾಂಕಿಗ್‌ ಇದ್ದರೂ, ರೇಟಿಂಗ್ಸ್‌ ಕಡಿಮೆ ಅಂತರದಲ್ಲೇ ಇದೆ. ಇದಕ್ಕೆ ಅನುಭವಿಗಳನ್ನ ಕಡೆಗಣಿಸುತ್ತಿರುವುದೇ ಕಾರಣ ಅಂತ ಗಂಭೀರ್‌ ಹಾಗೂ ಆಯ್ಕೆ ಸಮಿತಿ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ.

ಇನ್ನೂ ಕೊನೆಯಾಗಿಲ್ವಾ ಕೊಹ್ಲಿ-ಗಂಭೀರ್‌ ಮುನಿಸು?
ಒಂದು ಕಾಲದಲ್ಲಿ ದೋಸ್ತಿಗಳಾಗಿದ್ದ ಗೌತಮ್‌ ಗಂಭೀರ್‌, ಕೊಹ್ಲಿ ನಡುವೆ ಈಗಲೂ ಮುಸುಕಿನ ಗುದ್ದಾಟ ನಡೆಯುತ್ತಿದೆ ಅನ್ನೋದು ಕೆಲವರ ಅಭಿಪ್ರಾಯ. 2009ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಗೌತಮ್‌ ಗಂಭೀರ್‌ ತಮ್ಮ ಮ್ಯಾನ್‌ ಆಫ್‌ದಿ ಮ್ಯಾಚ್‌ (ಪಂದ್ಯಶ್ರೇಷ್ಠ) ಪ್ರಶಸ್ತಿಯನ್ನ ಕೊಹ್ಲಿಗೆ ಬಿಟ್ಟುಕೊಟ್ಟಿದ್ದರು. ಆದ್ರೆ 2013ರ ಐಪಿಎಲ್‌ ಟೂರ್ನಿವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವ ವೇಳೆ ವಿರಾಟ್‌ ಹಾಗೂ ಗಂಭೀರ್‌ ನಡುವೆ ಫಸ್ಟ್‌ ಟೈಂ ವಾಗ್ವಾದ ಏರ್ಪಟ್ಟಿತು. ಬಳಿಕ ಇದು ದೊಡ್ಡಾಗುತ್ತಲೇ ಸಾಗಿತು. ಗಂಭೀರ್‌, ಕೊಹ್ಲಿ ಇರುವ ತಂಡಗಳು ಪರಸ್ಪರ ಮುಖಾಮುಖಿಯಾದಾಗೆಲ್ಲ ಪರಸ್ಪರ ಕೌಂಟರ್‌ಗಳು ಮುಂದುವರಿಯಿತು. 2023ರ ಐಪಿಎಲ್‌ನಲ್ಲಿ ಗಂಭೀರ್‌ ಲಕ್ನೋ ಸೂಪರ್‌ ಜೈಂಟ್ಸ್‌ ಮೆಂಟರ್‌ ಆಗಿದ್ದಾಗ ಕೊಹ್ಲಿ ಅಭಿಮಾನಿಗಳಿಗೆ ಟಾಂಗ್‌ ಕೊಟ್ಟಿದ್ದರು, ಇದಕ್ಕೆ ಕೊಹ್ಲಿಗೆ ನೀಡಿದ ಕೌಂಟರ್‌ ಕೊಟ್ಟಾಗ ವಿವಾದ ದೊಡ್ಡಾಗಿತ್ತು. ಇದು ಈ ಇಬ್ಬರ ವೈಮನಸ್ಯ ಮುಂದುವರಿಯಲು ಕಾರಣವಾಗಿದೆ ಎನ್ನಲಾಗ್ತಿದೆ. ಮೇಲ್ನೋಟಕ್ಕೆ ಕೊಹ್ಲಿ-ರೋಹಿತ್‌-ಗಂಭೀರ್‌ ನಡುವೆ ಹೊಂದಾಣಿಕೆ ಇದ್ದಂತೆ ಕಂಡುಬಂದರೂ ಮುಸುಕಿನ ಗುದ್ದಾಟ ನಿಂತಿಲ್ಲ ಎನ್ನುತ್ತಿವೆ ಆಪ್ತ ಮೂಲಗಳು. ಮತ್ತೊಂದೆಡೆ ಈಗಾಗಲೇ 38 ವರ್ಷ ವಯಸ್ಸಿನ ರೋಹಿತ್‌, 37 ವರ್ಷದ ಕೊಹ್ಲಿಗೆ 2027ರ ವಿಶ್ವಕಪ್‌ಗೆ ಅವಕಾಶ ಸಿಗಲಿದೆಯೇ ಎಂಬುದನ್ನ ಕಾದುನೋಡಬೇಕಿದೆ.

ರಾಹುಲ್‌, ಅಯ್ಯರ್‌ ಬಿಟ್ಟು ಗಿಲ್‌ಗೆ ಮಣೆಹಾಕಿದ್ದೇಕೆ?
ಯೆಸ್‌. ಮತ್ತೊಂದು ಕಡೆ ಶುಭಮನ್‌ ಗಿಲ್‌ ಅವರನ್ನ ಟೀಂ ಇಂಡಿಯಾ ಕ್ಯಾಪ್ಟನ್‌ ಆಗಿ ಮಾಡಿದ್ದು, ಕೆಲವರಲ್ಲಿ ಬೇಸರ ತರಿಸಿದೆ. ಏಕೆಂದ್ರೆ 33 ವರ್ಷದ ಕೆ.ಎಲ್‌ ರಾಹುಲ್‌, 30 ವರ್ಷದ ಶ್ರೇಯಸ್‌ ಅಯ್ಯರ್‌ ತಂಡದಲ್ಲಿ ಅನುಭವಿಗಳಿದ್ದಾರೆ. ಚಾಂಪಿಯನ್ಸ್‌ ಟ್ರೋಫಿಯಲ್ಲಿ ಶ್ರೇಯಸ್‌ ಅಯ್ಯರ್‌ ಟೀಂ ಇಂಡಿಯಾ ಪರ ಉತ್ತಮ ಪ್ರದರ್ಶನದೊಂದಿಗೆ ಗರಿಷ್ಠ ರನ್‌ ಗಳಿಸಿದ್ರು. ಇನ್ನೂ ಕೆ.ಎಲ್‌ ರಾಹುಲ್‌ ಮ್ಯಾಚ್‌ ಫಿನಿಷರ್‌ ಆಗಿ ಅದ್ಭುತ ಪ್ರದರ್ಶನ ನೀಡಿದ್ದರು. ಅಲ್ಲದೇ 2023ರಲ್ಲೂ ರಾಹುಲ್‌ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆಲ್ಲಿಸಿ ಸೈ ಎನಿಸಿಕೊಂಡಿದ್ದರು. ಹೀಗಾಗಿ ಕೆಲವರು ಕೆ.ಎಲ್‌ ರಾಹುಲ್‌ಗೆ ನಾಯಕತ್ವ ಸಿಗುತ್ತೇ ಎಂದೇ ಭಾವಿಸಿದ್ದರು. ಇನ್ನೂ ಕೆಲವರು ಶ್ರೇಯಸ್‌ ಅಯ್ಯರ್‌ ಅವರಿಗೆ ಅವಕಾಶ ಸಿಗಲಿದೆ ಅಂದುಕೊಂಡಿದ್ದರು. ಏಕೆಂದ್ರೆ 26 ವರ್ಷದ ಗಿಲ್‌ಗೆ ಇನ್ನೂ 8-10 ವರ್ಷ ಆಡುವ ಅವಕಾಶವಿದೆ. ಆದ್ರೆ ಗಂಭೀರ್‌ ಅವರ ಮಾಸ್ಟರ್‌ ಪ್ಲ್ಯಾನ್‌ ಬೇರೆಯೇ ಇತ್ತು. ಏಕಾಏಕಿ ಗಿಲ್‌ ಅವರಿಗೆ ನಾಯಕತ್ವದ ಹಣೆಪಟ್ಟಿ ಕಟ್ಟಿದರು. ಇದು ರಾಹುಲ್‌, ಅಯ್ಯರ್‌ ಅಭಿಮಾನಿಗಳಲ್ಲಿ ತೀರ ಬೇಸರ ಮೂಡಿಸಿದೆ.

ಆಸಿಸ್‌ ವಿರುದ್ಧ ಸರಣಿಯಲ್ಲಿ ಗಂಭೀರ್‌ ಮಾಡಿದ ತಪ್ಪುಗಳೇನು?
SENA ದೇಶಗಳಲ್ಲಿ ಅಂದ್ರೆ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ದೇಶಗಳಲ್ಲಿನ ಕ್ರಿಕೆಟ್ ಪಿಚ್‌ಗಳು ಒಂದೇ ರೀತಿಯ ಭೌಗೋಳಿಕ – ಪ್ರಾಕೃತಿಕ ಮೂಲಗುಣಗಳನ್ನ ಹೊಂದಿರುತ್ತವೆ. ಹಾಗಾಗಿ, ಆ ದೇಶಗಳಲ್ಲಿ ನಡೆಯುವ ಕ್ರಿಕೆಟ್ ಸರಣಿಗಳಿಗೆ ಹೋಗುವ ಭಾರತ ತಂಡವನ್ನು ಅತ್ಯಂತ ಜಾಣತನದಿಂದ ಆಯ್ಕೆ ಮಾಡಬೇಕಾಗುತ್ತದೆ. ಆದರೆ, ಇದೇ ವರ್ಷ ನಡೆದಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ ನಡೆದಿರುವ ಸರಣಿಗಳಿಗಾಗಿ ಆಯ್ಕೆ ಮಾಡಿರುವ ಭಾರತ ತಂಡಕ್ಕೆ ಸೂಕ್ತ ಆಟಗಾರರನ್ನ ಆಯ್ಕೆ ಮಾಡದಿರುವುದು ಗೌತಮ್ ಗಂಭೀರ್ ಮೇಲಿರುವ ಪ್ರಮುಖವಾದ ಆಪಾದನೆಯಾಗಿದೆ. ಅಂಥ ತಪ್ಪುಗಳನ್ನು ಹೀಗೆ ಪಟ್ಟಿ ಮಾಡಬಹುದು.

* ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸಿದ್ದು,
* ಇಂಗ್ಲೆಂಡ್ ವಿರುದ್ಧ ಕುಲ್‌ದೀಪ್‌ ಯಾದವ್ ಅವರ ಟ್ರ್ಯಾಕ್ ರೆಕಾರ್ಡ್ ಉತ್ತಮವಾಗಿದ್ದರೂ ಅವರನ್ನು ಇಂಗ್ಲೆಂಡ್ ವಿರುದ್ಧದ ಸರಣಿಯ‌ಲ್ಲಿ ಪ್ಲೇಯಿಂಗ್‌-11ನಿಂದ ಹೊರಗಿಟ್ಟಿದ್ದು,
* ಆಸ್ಟ್ರೇಲಿಯಾದಲ್ಲಿನ ಗ್ರೀನ್-ಟಾಪ್ ಪಿಚ್ ಗಳಲ್ಲಿ ಇಬ್ಬರು ಸ್ಪಿನ್ನರ್ ಗಳನ್ನು ತಂಡದಲ್ಲಿ ಆಡಿಸಿದ್ದು,
* ಆಸೀಸ್ ಪಿಚ್‌ಗಳಲ್ಲಿ ಇನ್ನೂ ನುರಿತಿರಲಾರದ ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ ಅವರನ್ನ ಕಣಕ್ಕಿಳಿಸಿದ್ದು.

AUS vs IND 2nd ODI

ಇದನ್ನು ಹೊರತುಪಡಿಸಿಯೂ, ಗಂಭೀರ್ ಅವರ ತಪ್ಪು ಆಯ್ಕೆಗಳಿಂದಾಗಿ ತಂಡದ ಪ್ರದರ್ಶನದ ಕಳಪೆಯಾದಾಗ ಯಾರಾದರೂ ಆ ಬಗ್ಗೆ ಮಾತನಾಡಿದರೆ ಅವರಿಗೆ ಧಿಮಾಕಿನ ಉತ್ತರ ಕೊಡುವುದು ಗಂಭೀರ್ ಅವರ ಮತ್ತೊಂದು ಗುಣ. ಕ್ರಿಸ್ ಶ್ರೀಕಾಂತ್ ಅವರು ಹಿಂದೆ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದಾಗ ಅವರು ಲೆಜೆಂಡ್ ಎಂಬುದನ್ನೂ ಕೇರ್ ಮಾಡದೇ ಒರಟಾಗಿ ಉತ್ತರ ಕೊಟ್ಟಿದ್ದರು ಗಂಭೀರ್. ಅದೂ ಅಲ್ಲದೆ, ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಗಳು, ಸರ್ಫರಾಜ್ ಖಾನ್ ಅವರ ವಿರುದ್ಧ ಧೋರಣೆ… ಇವೆಲ್ಲದರ ಬಗ್ಗೆಯೂ ಈಗ ಅಸಮಾಧಾನ ಭುಗಿಲೆದ್ದಿದೆ. ಇದಕ್ಕೆ ಬಿಸಿಸಿಐ ಯಾವ ರೀತಿ ಮದ್ದು ಅರೆಯುತ್ತದೆ ಎಂಬುದನ್ನ ಇನ್ನಷ್ಟೇ ಕಾದುನೋಡಬೇಕಿದೆ.

Share This Article