ಜನಾರ್ದನ ರೆಡ್ಡಿ ರೀ ಎಂಟ್ರಿ ಮಾಡದಿದ್ದರೆ ರಾಮುಲು ಏಕಾಂಗಿ ಹೋರಾಟನಾ..?

Public TV
2 Min Read

ಬಳ್ಳಾರಿ: ಒಂದು ಕಾಲದಲ್ಲಿ ರಾಜ್ಯದಲ್ಲಿ ಯಾವ ಸರ್ಕಾರ ಆಡಳಿತ ಮಾಡ್ಬೇಕು ಅನ್ನೋದು ಬಳ್ಳಾರಿಯಲ್ಲಿ ಡಿಸೈಡ್ ಆಗ್ತಿತ್ತು. ಇಲ್ಲಿನ ಘಟಾನುಘಟಿ ನಾಯಕರು ಜೈಲುಪಾಲಾದ ಬಳಿಕ ಬಳ್ಳಾರಿ ರಾಜಕೀಯ ನೆಲೆ ಕಳೆದುಕೊಂಡಿತ್ತು. ಆದ್ರೀಗ ರೆಡ್ಡಿ ಕಮ್‍ಬ್ಯಾಕ್ ಮಾಡಿದ್ದು, ಬಳ್ಳಾರಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ್ಲೇ ಬಳ್ಳಾರಿಯಲ್ಲಿ ಸ್ಪರ್ಧೆ ಮಾಡಲು ರಾಮುಲು ಸರ್ಕಸ್ ಮಾಡ್ತಿದ್ದಾರೆ. ಜನಾರ್ದನ ರೆಡ್ಡಿ ಕೂಡ ಕಮ್‍ಬ್ಯಾಕ್ ಮಾಡ್ತಿರೋದು ಬಿಜೆಪಿ ಬಲ ಹೆಚ್ಚಿಸಿದೆ. ಒಂದು ವೇಳೆ ರೆಡ್ಡಿ ರಾಜಕೀಯದಿಂದ ದೂರವುಳಿದ್ರೆ ಶ್ರೀರಾಮುಲು ಏಕಾಂಗಿ ಹೋರಾಟ ಮಾಡಲೇಬೇಕಾದ ಪರಿಸ್ಥಿತಿ ಎದುರಾಗಲಿದೆ. ರೆಡ್ಡಿ ಬಳಗವನ್ನು ಕಟ್ಟಿ ಹಾಕಲು ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊಂದು ರೆಡ್ಡಿ ಬಳಗ ರೆಡಿಯಾಗಿದೆ. ಇದನ್ನೂ ಓದಿ: ಮತ್ತೆ ರಾಜಕೀಯ ಪ್ರವೇಶದ ಸುಳಿವು ಕೊಟ್ಟ ಜನಾರ್ದನ ರೆಡ್ಡಿ

ಇನ್ನು ಕಳೆದ ಪಾಲಿಕೆ ಚುನಾವಣೆಯಲ್ಲಿ ಸೋಮಶೇಖರ್ ರೆಡ್ಡಿ ಪುತ್ರನ ಸೋಲು ಹಾಗೂ ಬಿಜೆಪಿಯ ಸೋಲು ಆತ್ಮಾವಲೋಕನ ಮಾಡಿಕೊಳ್ಳೋ ಪರಿಸ್ಥಿತಿಯನ್ನ ತಂದೊಡ್ಡಿದೆ. ರೆಡ್ಡಿ ರಾಜಕೀಯದಿಂದ ದೂರವುಳಿದ್ರೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಗೆಲ್ಲೋದು ರಾಮುಲುಗೆ ಅಷ್ಟು ಸುಲಭವಲ್ಲ. ಇಲ್ಲಿ ಕಾಂಗ್ರೆಸ್‍ನ ಪ್ರಭಾವಿ ನಾಯಕ ನಾಗೇಂದ್ರ ಒಳ್ಳೆಯ ಹಿಡಿತ ಹೊಂದಿದ್ದಾರೆ. ಆದ್ರೆ ಸಚಿವ ರಾಮುಲುಗೆ ಹಿಂದೆ ಇದ್ದಷ್ಟು ಹಿಡಿತವಿಲ್ಲ. ಹೀಗಾಗಿಯೇ ಕೇಳಿದ ಸಚಿವ ಸ್ಥಾನ ನೀಡಿಲ್ಲ. ಕೊಟ್ಟ ಆರೋಗ್ಯ ಇಲಾಖೆಯನ್ನು ಕಸಿದುಕೊಂಡ್ರು. ಡಿಸಿಎಂ ಕನಸು ಕೂಡ ನನಸಾಗಿಲ್ಲ. ಹೀಗಾಗಿ ರಾಮುಲು ತೀವ್ರ ಹತಾಶೆಯಲ್ಲಿದ್ದಾರೆ.

ರೆಡ್ಡಿ ಹಾಗೂ ರಾಮುಲುಗೆ ಟಕ್ಕರ್ ಕೊಡೋದು ಸುಲಭದ ವಿಷಯವಲ್ಲ. ಹಣ ಬಲ, ಜನ ಬಲದಲ್ಲಿ ಟಕ್ಕರ್ ಕೊಡೋ ತಾಕತ್ತು ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿಗಿದೆ. ಕಾಂಗ್ರೆಸ್‍ನಲ್ಲಿ ತಮ್ಮದೇ ರಾಜಕೀಯ ಚತುರತೆ, ಫ್ಯಾನ್ ಫಾಲೋವರ್ಸ್ ಇದ್ದಾರೆ. ಕಂಪ್ಲಿ, ಕುರಗೋಡು, ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ ಭಾಗದಲ್ಲಿ ಹಿಡಿತ ಹೊಂದಿದ್ದಾರೆ. ಹೀಗಾಗಿ ನಾರಾ ಸೂರ್ಯನಾರಾಯಣರೆಡ್ಡಿ ತಮ್ಮ ಪುತ್ರನಿಗೆ ಟಿಕೆಟ್ ಕೊಡಲು ಯತ್ನಿಸುತ್ತಿದ್ದಾರೆ. ಕಳೆದೆರಡು ದಿನಗಳಿಂದ ಭರತ್ ರೆಡ್ಡಿ ಪ್ರಚಾರವನ್ನೂ ಆರಂಭಿಸಿದ್ದಾರೆ. ಭರತ್ ರೆಡ್ಡಿ ಟಿಕೆಟ್ ನೀಡಿದ್ರೆ ಕಾಂಗ್ರೆಸ್‍ಗೆ ಶಕ್ತಿ ಬರಲಿದೆ ಎನ್ನಲಾಗ್ತಿದೆ.

ಒಟ್ಟಿನಲ್ಲಿ ರೆಡ್ಡಿ ರಾಜಕೀಯ ಮರುಪ್ರವೇಶದ ಮೇಲೆ ಬಳ್ಳಾರಿ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಒಂದು ವೇಳೆ ರೆಡ್ಡಿ ರಾಜಕೀಯ ಪ್ರವೇಶಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದ್ರೆ, ಶ್ರೀರಾಮುಲು ಏಕಾಂಗಿ ಹೋರಾಟ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *