ನೆಹರು ಕುಟುಂಬ ಏನು ಮಾಡಿದ್ರೂ ಪ್ರಶ್ನಿಸುವಂತಿಲ್ಲ ಎಂದು ಸಂವಿಧಾನದಲ್ಲಿದ್ಯಾ?: ಸಿ.ಟಿ ರವಿ

Public TV
2 Min Read

ಚಿಕ್ಕಮಗಳೂರು: ಸಂವಿಧಾನದಲ್ಲಿ ನೆಹರು ಕುಟುಂಬ ಏನು ಮಾಡಿದರೂ ಪ್ರಶ್ನೆ ಮಾಡುವಂತಿಲ್ಲ ಎಂದು ಸಂವಿಧಾನದಲ್ಲಿ ಇದೆಯಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕ್ರಿಮಿನಲ್ ಆಫೆನ್ಸ್ ಮಾಡಿದವರನ್ನು ಕೂಡ ವಿಚಾರಣೆ ಮಾಡಬಾರದು ಎಂದರೆ ಏನರ್ಥ? ಮಹಾತ್ಮ ಗಾಂಧಿ ಹೆಸರನ್ನಿಟ್ಟುಕೊಂಡು ಅವರ ವ್ಯಕ್ತಿತ್ವಕ್ಕೆ ಅಪಚಾರ ಬರೆಯುತ್ತಿದ್ದಾರೆ. ನಿಜವಾಗಿಯೂ ಇವರು ಗಾಂಧಿ ಅಲ್ಲ. ಇವರು ಗ್ಯಾಂಡಿ ಎಂದು ಲೇವಡಿ ಮಾಡಿದರು.

ರಾಹುಲ್ ಗಾಂಧಿಯವರ ದಾದಾ ಫಿರೋಜ್ ಗ್ಯಾಂಡಿ. ಆದರೆ ಇವರು ಗಾಂಧಿ ಎಂದು ಹೆಸರನ್ನಿಟ್ಟುಕೊಂಡಿದ್ದಾರೆ. ನೋಡಿದ ಜನ ಏನೆಂದು ತಿಳಿದುಕೊಳ್ಳುತ್ತಾರೆ? ಇವರು ಮಹಾತ್ಮ ಗಾಂಧಿಯವರ ಕುಟುಂಬದವರು ಎಂದುಕೊಳ್ಳುತ್ತಾರೆ. ಗಾಂಧಿ ಸತ್ಯದ ಪರವಾಗಿ ಸತ್ಯಾಗ್ರಹ ಮಾಡಿದರೆ, ಇವರು ಅಕ್ರಮ, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬೀದಿಯಲ್ಲಿ ನಿಂತು ಚಳುವಳಿ ಮಾಡುತ್ತಾರೆ ಎಂದು ಕಿಡಿ ಕಾರಿದರು.

ಚಳುವಳಿ ಮೂಲಕ ಭ್ರಷ್ಟಾಚಾರ ತನಿಖೆ ಆಗಬಾರದು ಎಂದು ಬಯಸುತ್ತಾರಾ? ಇವರ ಹುನ್ನಾರ ಏನು? ಇದಕ್ಕೆ ಉತ್ತರ ನೀಡಲಿ. ಕನಿಷ್ಠ 2,000 ದಿಂದ 5,000 ಕೋಟಿ ರೂ. ವ್ಯಾಲ್ಯೂವೇಷನ್ ಇದೆ ಎಂದು ಮಾತನಾಡುತ್ತಾರೆ. ಅಷ್ಟು ಇರುವುದನ್ನು 50 ಲಕ್ಷ ರೂ. ಒಂದು ಯಂಗ್ ಇಂಡಿಯಾ ಎಂಬಂತಹ ಕಂಪನಿ ಸ್ಟಾರ್ಟ್ ಮಾಡಿ ಟ್ರಾನ್ಸ್‌ಫರ್ ಮಾಡಿದರೆ ಇದನ್ನು ಹಗಲು ದರೋಡೆ ಎನ್ನದೆ ಬೇರೇನು ಹೇಳಬೇಕು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರೇ, ಡಿಕೆ ಶಿವಕುಮಾರ್ ಅವರೇ ನಿಮ್ಮ ಲೆಕ್ಕದಲ್ಲಿ ಇದು ಹಗಲು ದರೋಡೆ ಅಲ್ಲವಾ? ಹಾಗಾದರೆ ನೀವು ಭ್ರಷ್ಟಾಚಾರವನ್ನು ಸಮರ್ಥನೆ ಮಾಡಲು ಚಳುವಳಿ ಮಾಡಿದ್ರಾ? ದೇಶದಲ್ಲಿ ಭ್ರಷ್ಟಾಚಾರವನ್ನು ನೀವು ಬೀದಿಯಲ್ಲಿ ಚಳುವಳಿ ಮಾಡುವ ಮೂಲಕ ಮುಚ್ಚಿಟ್ಟುಕೊಳ್ಳಲು ಆಗುತ್ತಾ ಎಂದು ವಾಗ್ವಾದ ನಡೆಸಿದರು. ಇದನ್ನೂ ಓದಿ: ಅಡ್ಡಮಾರ್ಗ ಹಿಡಿದ ಕಾಂಗ್ರೆಸ್ ನಾಪತ್ತೆಯಾಗುತ್ತೆ: ಆರಗ ಜ್ಞಾನೇಂದ್ರ

ಇದೇ ವೇಳೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ವಿರುದ್ಧವೂ ಮಾತನಾಡಿದ ಸಿ.ಟಿ ರವಿ, ಬಿವಿ ಶ್ರೀನಿವಾಸ್ ಅವರಿಗೆ ಉಜ್ವಲ ಭವಿಷ್ಯವಿದೆ. ರಾಜಕಾರಣದಲ್ಲಿ ಅಲ್ಲ, ರನ್ನಿಂಗ್ ರೇಸ್‌ನಲ್ಲಿ. ನಾನು ನೋಡಿದ ಕ್ಷಣಾರ್ಧದಲ್ಲಿ ಮಿಂಚಿನ ಓಟ. ಯಾವುದಾದರೂ ಅಥ್ಲೆಟಿಕ್ಸ್‌ಗೆ ಹೋದರೆ ಫ್ರೈಜ್-ಗೀಜ್ ಸಿಗಬಹುದು. ಅವರು ಭವಿಷ್ಯವನ್ನು ಅಲ್ಲಿ ಹುಡುಕಬಹುದು. ಓಡುವುದರಲ್ಲೂ ಹೇಗೆ ಭವಿಷ್ಯ ಎಂಬುದನ್ನು ಅಲ್ಲಿ ಹುಡುಕಾಡಬಹುದು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕುವೆಂಪು ಸಾಕಷ್ಟು ಜನರ ಸಹಕಾರದಿಂದ ಉನ್ನತ ಸ್ಥಾನಕ್ಕೇರಿದರು ಎಂದವನು ಅಯೋಗ್ಯ: ಎಂಎಲ್‍ಸಿ

ನಾವು ಚಳುವಳಿ ಮೂಲಕ ಬಂದವರು. ಹತ್ತಾರು ಪೊಲೀಸ್ ಸ್ಟೇಷನ್‌ನಲ್ಲಿ ಒದೆ ತಿಂದಿದ್ದೇವೆ. ನನಗೇನು ಸಂಕೋಚ ಇಲ್ಲ. ಚಳುವಳಿ ಮಾಡಿ, ಕೇಸ್ ಹಾಕಿಸಿಕೊಂಡಿದ್ದೇವೆ. ವರ್ಷಕ್ಕೆ 2-3 ಬಾರಿ ಜೈಲಿಗೆ ಹೋಗಿದ್ದೇವೆ. ಯಾವತ್ತೂ ಬೆನ್ನು ತೋರಿಸಿ ಓಡಿ ಹೋಗಿಲ್ಲ. ಅವರಿಗೆ ಭವಿಷ್ಯವಿದೆ. ಮಿಂಚಿನ ಓಟ ಎಷ್ಟು ಬೇಗ ಅಂದ್ರೆ, ಇದೇ ಸ್ಪೀಡಲ್ಲಿ ಒಲಂಪಿಕ್ಸ್‌ನಲ್ಲಿ ಓಡಿದ್ರೆ ಗ್ಯಾರಂಟಿ ಪ್ಲೇಸ್ ಮಾಡುವವರು. ಅವರಿಗೆ ಎಷ್ಟು ವಯಸ್ಸು ಗೊತ್ತಿಲ್ಲ. ರಾಜಕೀಯದಲ್ಲಿ ಭವಿಷ್ಯ ಹುಡುಕಿಕೊಳ್ಳಲು ಆಗುತ್ತೋ ಇಲ್ವೋ ಆದರೆ ಓಟದಲ್ಲಿ ಭವಿಷ್ಯ ಕಂಡುಕೊಳ್ಳಬಹುದು. ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುವ ಕಳ್ಳರಿಗೆ ಇವರು ಮಾದರಿ ಎಂದು ಟಾಂಗ್ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *