2019ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಡೊನಾಲ್ಡ್ ಟ್ರಂಪ್ ಮುಖ್ಯ ಅತಿಥಿ?

Public TV
1 Min Read

ನವದೆಹಲಿ: ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತ ಸರ್ಕಾರ ಆಹ್ವಾನ ನೀಡಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಕಳೆದ ಏಪ್ರಿಲ್ ನಲ್ಲೇ ಭಾರತ ಅಮೆರಿಕ ಅಧ್ಯಕ್ಷರ ಶ್ವೇತಭವನಕ್ಕೆ ಆಹ್ವಾನವನ್ನು ಕಳುಹಿಸಿದೆ. ಇದಕ್ಕೆ ಶ್ವೇತಭವನದ ಆಡಳಿತ ಮಂಡಳಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಭಾರತದ ಆಹ್ವಾನವನ್ನು ಒಪ್ಪಿಕೊಂಡರೆ ಬರಾಕ್ ಒಬಾಮ ನಂತರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಳ್ಳುತ್ತಿರುವ ಎರಡನೆಯ ಅಮೆರಿಕದ ಅಧ್ಯಕ್ಷ ಎಂಬ ಗೌರವಕ್ಕೆ ಟ್ರಂಪ್ ಪಾತ್ರರಾಗಲಿದ್ದಾರೆ. 2015ರಲ್ಲಿ ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಂಡಿದ್ದರು.

ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕ ರಾಯಭಾರಿಯಾದ ನಿಕ್ಕಿ ಹ್ಯಾಲೆ ಇರಾನ್ ವಿರುದ್ಧದ ಹೋರಾಟದಲ್ಲಿ ಸಹಕರಿಸುವಂತೆ ಭಾರತವನ್ನು ಕೇಳಿಕೊಂಡಿತ್ತು. ಅಲ್ಲದೇ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವೆ ಇರುವ ಬಿಕ್ಕಟ್ಟಿನಿಂದಾಗಿ, ಇರಾನ್ ನಿಂದ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲಗಳನ್ನು ನಿಲ್ಲಿಸುವಂತೆ ತಿಳಿಸಿದ್ದರು.

ಇದಲ್ಲದೆ ಕೆಲ ದಿನಗಳ ಹಿಂದೆ ಭಾರತದ ವಸ್ತುಗಳ ಮೇಲೆ ಅಮೆರಿಕ ಅಮದು ಸುಂಕವನ್ನು ಹೆಚ್ಚಿಸಿದ್ದಕ್ಕೆ ಭಾರತವೂ ಅಮೆರಿಕದ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಿತ್ತು. ಎರಡು ದೇಶಗಳ ನಡುವೆ ವ್ಯಾಪಾರ ವಿಚಾರದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಭಾರತ ಡೊನಾಲ್ಡ್ ಟ್ರಂಪ್ ಅವರನ್ನು ಗಣರಾಜ್ಯೋತ್ಸವ ಪರೇಡ್ ಗೆ ಆಹ್ವಾನಿಸಿರುವುದು ಕುತೂಹಲ ಕೆರಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *