ಸರಿಯಾದ ನೆಟ್ ವರ್ಕ್ ಕೂಡಾ ಇಲ್ಲದ ಊರಿಂದ ಬಂದು ಕಾರ್ಪೊರೇಟ್ ಪ್ರಪಂಚದಲ್ಲಿ ದೊಡ್ಡ ಹೆಸರು ಮಾಡ ಹೊರಟ ಹುಡುಗಿಯ ಕತೆ ಇರುವುದೆಲ್ಲವ ಬಿಟ್ಟು. ಅಪಾರ ಸಂಬಳ, ಸಂಸ್ಥೆಗಳಲ್ಲಿನ ಪ್ರಮೋಷನ್ನು, ಕಾರು, ಮನೆಯಂಥಾ ವ್ಯವಸ್ಥೆಗಳಿಗೆ ಹೊಂದಿಕೊಳ್ಳುತ್ತಾ ಸಾಗಿದರೆ ಸಂಸ್ಕೃತಿಯನ್ನೂ ಮರೆತುಬಿಡುತ್ತಾರೆ. ಇವತ್ತು ಕಾರ್ಪೊರೇಟ್ ವಲಯಗಳಲ್ಲಿ ದುಡಿಯುವ ಎಷ್ಟೋ ಜನರ ಕಥೆಯನ್ನೇ ನಿರ್ದೇಶಕ ಕಾಂತ ಕನ್ನಲ್ಲಿ ಕಥೆಯ ರೂಪಕ್ಕಿಳಿಸಿ `ಇರುವುದೆಲ್ಲವ ಬಿಟ್ಟು’ ಸಿನಿಮಾವನ್ನು ರೂಪಿಸಿದ್ದಾರೆ.
ಸಿಟಿಲೈಫಿಗೆ ಹೊಂದಿಕೊಂಡವರು ಮನೆಯವರ ಅನುಮತಿಯನ್ನು ಧಿಕ್ಕರಿಸಿ, ವಿರೋಧಗಳ ನಡುವೆಯೂ, ಹಲವು ಸಲ ಗೌಪ್ಯವಾಗಿ ಲಿವ್ ಇನ್ ರಿಲೇಷನ್ನುಗಳಲ್ಲಿ ತೊಡಗಿಕೊಳ್ಳುತ್ತಾರೆ. ಆರಂಭದಲ್ಲಿ ಎಲ್ಲವೂ ಚೆಂದ. ಆದರೆ ಒಮ್ಮೆ ಇಬ್ಬರ ಸಮಾಗಮ ಮತ್ತೊಂದು ಜೀವದ ಹುಟ್ಟಿಗೆ ಕಾರಣವಾಗುತ್ತದೋ ಅಲ್ಲಿಗೆ ಎಲ್ಲವೂ ಅಯೋಮಯ.
ಸಂಗಾತಿಗಳ ನಡುವೆ ಎದುರಾಗುವ ಸಮಯದ ಸಮಸ್ಯೆ, ಈಗೋಗಳು ಸಂಬಂಧಗಳು ಮುರಿದುಬೀಳುವಂತೆ ಮಾಡುತ್ತದೆ. ಜನ್ಮೇಪಿ ಬಿಟ್ಟೂ ಬಿಡಲಾರದಂಥವರು ಒಬ್ಬರ ಮುಖ ಒಬ್ಬರು ನೋಡದಂತೆ ದೂರಾಗಿಬಿಡುತ್ತಾರೆ. ‘ಇರುವುದೆಲ್ಲವ ಬಿಟ್ಟು’ ಸಿನಿಮಾದಲ್ಲಿ ಘಟಿಸುವುದು ಕೂಡಾ ಇಂಥದ್ದೇ ಪ್ರಸಂಗ.
ಇತ್ತ ಪ್ರೀತಿಯ ಕಾರಣಕ್ಕೆ ಹೆತ್ತವರನ್ನೂ ದೂರ ಮಾಡಿಕೊಂಡು, ಜೊತೆಗಾರನೊಟ್ಟಿಗೂ ಮುನಿಸಿಕೊಂಡ ಗರ್ಭಿಣಿ ಹೆಣ್ಣುಮಗಳು ಪಡುವ ಪಡಿಪಾಟಲುಗಳನ್ನು ಕಣ್ಣಿಗೆ ಕಟ್ಟಿದಂತೆ ತೋರಿಸಲಾಗಿದೆ. ಈ ನಡುವೆ ಎಂಟ್ರಿಯಾಗುವ ಮತ್ತೊಬ್ಬ ಹುಡುಗ, ಆತನ ಉದಾರ ಮನೋಭಾವ, ಜೀವನ ಪ್ರೀತಿ, ಒಂಟಿತನಗಳು… ಇರುವುದೆಲ್ಲವ ಬಿಟ್ಟವಳಿಗೆ ಈತ ಆಸರೆಯಾಗುತ್ತಾನಾ ಅನ್ನುವಷ್ಟರಲ್ಲಿ ಒಂದಷ್ಟು ತಿರುವುಗಳು, ಭಾವುಕ ಸನ್ನಿವೇಶಗಳು.. ಇದು ಇರುವೆ ಬಿಟ್ಟುಕೊಂಡವರ ಕಥೆಯ ಸಾರ.
ಬಿಲ್ವ ಕ್ರಿಯೇಷನ್ಸ್ ಲಾಂಛನದಲ್ಲಿ ದಾವಣಗೆರೆ ದೇವರಾಜ್ ನಿರ್ಮಾಣದ ‘ಇರುವುದೆಲ್ಲವ ಬಿಟ್ಟು’ ಚಿತ್ರಕ್ಕೆ ಕಥೆ-ಚಿತ್ರಕಥೆ-ನಿರ್ದೇಶನ ಕಾಂತ ಕನ್ನಲ್ಲಿ, ಸಂಭಾಷಣೆ-ಮಹೇಶ್ ಮಳವಳ್ಳಿ, ಛಾಯಾಗ್ರಹಣ – ವಿಲಿಯಂ ಡೇವಿಡ್, ಸಂಗೀತ – ಶ್ರೀಧರ್ ವಿ ಸಂಭ್ರಮ್, ಕಲೆ-ಶ್ರೀನಿವಾಸ್, ನೃತ್ಯ-ಮುರಳಿ ಧನಕುಮಾತ್, ಸಂಕಲನ-ಕೆ.ಎಂ. ಪ್ರಕಾಶ್, ಸಾಹಿತ್ಯ – ಜಯಂತ್ ಕಾಯ್ಕಿಣಿ, ವಿ.ನಾಗೇಂದ್ರಪ್ರಸಾದ್, ಕವಿರಾಜ್, ಕಾಂತಕನ್ನಲ್ಲಿ ರಚಿಸಿದ್ದಾರೆ. ತಾರಾಗಣದಲ್ಲಿ ಮೇಘನರಾಜ್, ತಿಲಕ್, ಶ್ರೀಮಹದೇವ್, ಅಚ್ಯುತ್ ಕುಮಾರ್, ಅರುಣ ಬಾಲರಾಜ್, ಅಭಿಷೇಕ್ ರಾಯಣ್ಣ, ರಿಚರ್ಡ್ ಲೂಯಿಸ್ ಮುಂತಾದವರಿದ್ದಾರೆ.
https://youtu.be/NVpC5vBcLLM
ಮೇಘನಾ ರಾಜ್ ತೀರಾ ಮಾಗಿದ ನಟನೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ತಿಲಕ್ ಶೇಖರ್ ಮತ್ತು ಶ್ರೀ ಮಹದೇವ್ ಕೂಡಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬಾಲ ಕಲಾವಿದ ಅಭಿಷೇಕ್ ರಾಯಣ್ಣ ಎಂಥವರನ್ನೂ ಮೋಡಿ ಮಾಡುವಂತೆ ನಟಿಸಿದ್ದಾನೆ.
ಇಡೀ ಸಿನಿಮಾದ ದೊಡ್ಡ ಶಕ್ತಿ ಛಾಯಾಗ್ರಾಹಕ ವಿಲಿಯಂ ಡೇವಿಡ್. ಅದ್ಭುತವೆನಿಸುವ ಲೊಕೇಷನ್ನುಗಳನ್ನು ಅಷ್ಟೇ ಕ್ರಿಯಾಶೀಲವಾಗಿ ಸೆರೆ ಹಿಡಿದಿರುವ ವಿಲಿಯಂ ಎಲ್ಲ ಪಾತ್ರಧಾರಿಗಳನ್ನೂ ಸುಂದರವಾಗಿಸುವುದರ ಜೊತೆಗೆ ಇಡೀ ಸಿನಿಮಾದ ಅಂದವನ್ನು ಹೆಚ್ಚಿಸಿದ್ದಾರೆ.
ರೇಟಿಂಗ್: 4/5