ಹೋಲ್‍ಸೇಲ್ ಗೋಡಾನ್‍ನಲ್ಲಿ ಅವಘಡ – ಕಾರ್ಮಿಕರ ಮೇಲೆ ಕುಸಿದ ರ‍್ಯಾಕ್

Public TV
1 Min Read

– ಕಾಡುಗೊಡಿಯಲ್ಲಿ ರಕ್ಷಣಾ ಕಾರ್ಯಾಚರಣೆ

ಬೆಂಗಳೂರು: ನಗರದ ಹೊರವಲಯದ ಕಾಡುಗೋಡಿಯ ಶೀಗೆಹಳ್ಳಿ ಗೇಟ್‍ನಲ್ಲಿರುವ ಮಾರ್ಕೆಟಿಂಗ್ ಕಂಪನಿಯೊಂದರ ಹೋಲ್ ಸೇಲ್ ಗೋಡಾನ್‍ನಲ್ಲಿ ಅವಘಡ ಸಂಭವಿಸಿದೆ.

ಗೋಡಾನ್ ನಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕರ ಮೇಲೆ ಕಬ್ಬಿಣದ ರ‍್ಯಾಕ್ ಗಳು ಕುಸಿದಿವೆ. ಹಲವರು ಕಾರ್ಮಿಕರು, ಕಬ್ಬಿಣದ ರ‍್ಯಾಕ್ ಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ. ಇದೂವರೆಗೆ ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಸ್ಥಳಕ್ಕೆ ಎನ್‍ಡಿಆರ್‍ಎಫ್ ತಂಡ, ಶ್ವಾನ ಪಡೆ ಆಗಮಿಸಿದೆ. ನಾಲ್ಕು ಅಂಬುಲೆನ್ಸ್ ಸ್ಥಳದಲ್ಲಿ ಬೀಡುಬಿಟ್ಟಿವೆ. ಕಾರ್ಮಿಕರಲ್ಲಿ ಆತಂಕ ಮನೆ ಮಾಡಿದೆ. ರ‍್ಯಾಕ್ ನಡಿ ಸಿಲುಕಿರುವ ಕಾರ್ಮಿಕರ ಬಂಧುಗಳ ಆಕ್ರಂದನ ಮುಗಿಲುಮುಟ್ಟಿದೆ.

ಈ ಬಗ್ಗೆ ಪ್ರತ್ಯಕ್ಷದರ್ಶಿ ಬಾಬು ಪಬ್ಲಿಕ್ ಟಿವಿ ಜೊತೆ ಮಾತನಾಡಿ, 12 ಗಂಟೆ ಸಮಯಕ್ಕೆ ನಾವು ಬಂದಾಗ ಕಬ್ಬಿಣದ ರ‍್ಯಾಕ್ ಗಳ ಮಧ್ಯೆ ಕಾರ್ಮಿಕರು ಸಿಲುಕಿಕೊಂಡಿದ್ದರು. ರ‍್ಯಾಕ್ ಗಳು ಪ್ಲಾಸ್ಟಿಕ್ ನಿಂದ ಕವರ್ ಆಗಿದ್ದರಿಂದ ಒಂದಕ್ಕೊಂದು ಕಚ್ಚಿಕೊಂಡಿದ್ದವು. ಈ ಮಧ್ಯೆ ಕಾರ್ಮಿಕರು ಸಿಲುಕಿದ್ದರು. ಕೂಡಲೇ 4 ಮಂದಿಯನ್ನು ಅಂಬುಲೆನ್ಸ್ ನಲ್ಲಿ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. 3, 4 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದೆ. ಇಬ್ಬರು ಅವಶೇಷಗಳಡಿಯಿಂದ ಮಾತನಾಡುತ್ತಿರುವುದು ಕೇಳಿಸಿತ್ತು. ಹೀಗಾಗಿ ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ಓರ್ವನನ್ನು ರಕ್ಷಣೆ ಮಾಡಿದ್ದಾರೆ. ಇನ್ನೂ ಮೂವರು ಸಿಲುಕಿರುವ ಸಾಧ್ಯತೆಗಳಿವೆ. ರ‍್ಯಾಕ್ ಗಳ ಮಧ್ಯೆ ಗ್ಯಾಪ್ ಇದ್ರೂ ಅದನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ. ಬಟ್ಟೆ ಹಾಗೂ ಶೂಗಳಿರುವುದರಿಂದ ರ‍್ಯಾಕ್ ಗಳನ್ನು ಕಟ್ ಮಾಡಲು ಹೊರಟ್ರೆ ಬೆಂಕಿ ಹೊತ್ತಿಕೊಂಡರೆ ಕಷ್ಟ ಅಂತ ಅವರು ವಿವರಿಸಿದ್ರು.

ಸುಮಾರು 50ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ಗೋಡೌನ್ ನಲ್ಲಿ ಕಳಪೆ ಗುಣಮಟ್ಟದ ರ‍್ಯಾಕ್ ಗಳನ್ನು ಬಳಸಿರುವುದೇ ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *