ಭೂಮಿಯೊಳಗೊಂದು ರಹಸ್ಯ ʻಮಿಸೈಲ್‌ ಸಿಟಿʼ – ಬೆಚ್ಚಿಬಿದ್ದ ಇಸ್ರೇಲ್‌

Public TV
5 Min Read

ಧ್ಯಪ್ರಾಚ್ಯದಲ್ಲಿನ ಬೆಳವಣಿಗೆಗಳಿಂದ ಇಸ್ರೇಲ್‌ ಜೊತೆ ಕಣ್ಣು ಕೆಂಪಗೆ ಮಾಡಿಕೊಂಡಿರುವ ಇರಾನ್‌ ಈಗ ತನ್ನ ಭೂಗತ ಮಿಸೈಲ್‌ ನಗರವನ್ನ (Iran Missile City) ಜಗತ್ತಿಗೆ ಪರಿಚಯಿಸಿದೆ. ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌ ಹೊಸ ವಿಡಿಯೋವೊಂದನ್ನ ಹಂಚಿಕೊಂಡಿದೆ.

ಈ ವಿಡಿಯೋನಲ್ಲಿ ಇರಾನ್ ಭೂಗತ ಕ್ಷಿಪಣಿ (Missile)  ಸಂಗ್ರಹಣಾ ಸೌಲಭ್ಯವನ್ನು ಪರಿಚಯಿಸಿದೆ. ಇಲ್ಲಿಂದಲೇ ಹೊಸ ಕ್ಷಿಪಣಿಗಳನ್ನು ತಯಾರಿಸುತ್ತಿದ್ದೇವೆ ಎಂದು ಕೂಡ ಇರಾನ್‌ ತಿಳಿಸಿದೆ. ಇರಾನ್‌ನ ಸರ್ಕಾರಿ ಪ್ರಾಯೋಜಿತ ವಾಹಿನಿಯಲ್ಲಿ ವಿಡಿಯೋ ಬಿಡುಗಡೆಯಾಗಿದ್ದು, ಐಆರ್‌ಜಿಸಿ ಕಮಾಂಡರ್ ಮೇಜರ್ ಜನರಲ್ ಹುಸೇನ್ ಸಲಾಮಿ ಮತ್ತು ಬ್ರಿಗೇಡಿಯರ್ ಜನರಲ್ ಅಮೀರ್ ಅಲಿ ಹಾಜಿಜಾದೆ ಮಿಸೈಲ್‌ ಸಿಟಿಯನ್ನು ವೀಕ್ಷಿಸುತ್ತಿರುವುದು ಕಂಡುಬಂದಿದೆ. ಹಾಜಿಜಾದೆ ಈ ಸ್ಥಳವನ್ನು ಸುಪ್ತ ಜ್ವಾಲಾಮುಖಿ ಎಂದು ಕರೆದಿದ್ದಾರೆ ಎಂದು ಹೇಳಲಾಗಿದೆ. ಅಷ್ಟಕ್ಕೂ ಇರಾಜ್‌ ಈ ಭೂಗತ ನಗರ ಹೇಗಿದೆ? ಎಲ್ಲಿದೆ? ಇರಾನ್‌ ಹಾಗೂ ಇಸ್ರೇಲ್‌ ಸೇನೆಗಳ ಬಲಾಬಲ ಹೇಗಿದೆ ಎಂಬುದನ್ನು ತಿಳಿಯೋಣ…

ಇನ್ನು, ಕಳೆದ ವರ್ಷ ಏಪ್ರಿಲ್‌ ಹಾಗೂ ಅಕ್ಟೋಬರ್‌ನಲ್ಲಿ ಇಸ್ರೇಲ್‌ ವಿರುದ್ಧ ನಡೆದ ಕ್ಷಿಪಣಿ ಕಾರ್ಯಾಚರಣೆಗೆ ಈ ಮಿಸೈಲ್‌ ಸೌಲಭ್ಯವನ್ನು ಬಳಸಿಕೊಳ್ಳಲಾಗಿತ್ತು ಎಂಬುದು ಬಹಿರಂಗವಾಗಿದೆ. ಆದರೆ, ಈ ಸ್ಥಳ ಎಲ್ಲಿದೆ ಎಂಬುದು ಇರಾನ್‌ನ ಕೆಲವೇ ಕೆಲ ಮಂದಿಗೆ ಬಿಟ್ಟು ಬೇರೆಯವರಿಗೆ ಗೊತ್ತಿಲ್ಲ. ಅಂಡರ್‌ಗ್ರೌಂಡ್‌ನಲ್ಲಿ ಮಿಸೈಲ್‌ ಹಾಗೂ ಡ್ರೋನ್‌ ಸಿಟಿಗಳನ್ನು ಜಗತ್ತಿಗೆ ಪರಿಚಯಿಸುತ್ತೇವೆ ಎಂದು ಇರಾನ್‌ ಹೇಳಿದೆ. ಇರಾನ್‌ನ ಭೂಗತ ಸಿಟಿಯನ್ನು ನೋಡಿ ಇಸ್ರೇಲ್‌ ಬೆಚ್ಚಿಬಿದ್ದಿರುವುದಂತೂ ನಿಜ.

ಯುದ್ಧಕ್ಕೆ ಟ್ರಂಪ್‌ನಿಂದ ಬ್ರೇಕ್‌ – ಸೌದಿ ಹೇಳೋದೇನು?
ಇರಾನ್‌ನ ಈ ಭೂಗತ ನಗರಕ್ಕೆ ಅಮೆರಿಕ ಕೂಡ ಕಾರಣ ಎಂಬುದು ಸೌದಿ ಅರೇಬಿಯಾದ ಆರೋಪ. ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್‌ ಇರಾನ್‌ ಸೇನೆಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದರು. ಇದೀಗ ಟ್ರಂಪ್‌ (Donald Trump) ಅಧಿಕಾರಕ್ಕೇರುತ್ತಿದ್ದಂತೆ ಯುದ್ಧಗಳಿಗೆ ಬ್ರೇಕ್‌ ಹಾಕುವ ಮುನ್ಸೂಚನೆ ನೀಡಿದ್ದಾರೆ. ಅಮೆರಿಕದ ಸಹಾಯ ನಿರಾಕರಿಸಿದ್ರೆ ಇರಾನ್‌-ಇಸ್ರೇಲ್‌ ನಡುವಿನ ಯುದ್ಧ ಬಹುತೇಕ ಮುಕ್ತಾಯಗೊಂಡಂತೆ ಆಗುತ್ತದೆ. ಅಲ್ಲದೇ ಇದು ಇತರ ದೇಶಗಳ ಮೇಲೆ ಉಂಟಾಗುತ್ತಿರುವ ಆರ್ಥಿಕ ಹೊಡೆತವನ್ನೂ ಕಡಿಮೆ ಮಾಡಲಿದೆ ಎಂದು ಸೌದಿ ಅರೇಬಿಯಾ ಹೇಳಿದೆ.

ಇರಾನ್‌ ಯುದ್ಧಕ್ಕೆ ಎಂಟ್ರಿಯಾಗಿದ್ದು ಹೇಗೆ?
ಹಿಜ್ಬುಲ್ಲಾ ಸೇನೆಯ ಮುಖ್ಯಸ್ಥ ಹಸನ್‌ ನಸ್ರಲ್ಲಾನನ್ನೂ ಇಸ್ರೇಲ್‌ ಹತ್ಯೆಗೈದಾಗ ಪರೋಕ್ಷವಾಗಿ ಇವರನ್ನೆಲ್ಲ ಬೆಂಬಲಿಸುತ್ತಿದ್ದ ಇರಾನ್‌ ನೇರವಾಗಿ ಇಸ್ರೇಲ್‌ ವಿರುದ್ಧ ತೊಡೆ ತಟ್ಟಿತ್ತು. ಏಕಾಏಕಿ 180ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿ, ಇಸ್ರೇಲನ್ನು ಗಾಬರಿಗೊಳಿಸಲೂ ಇರಾನ್‌ ಯತ್ನಿಸಿದ್ದು ಸ್ವತಃ ಇಸ್ರೇಲನ್ನು ಮತ್ತಷ್ಟು ಕೆರಳಿಸಿದೆ. ಆದ್ರೆ ಇಸ್ರೇಲ್‌ ಕ್ಷಿಪಣಿ ಹಾರಿಸುವುದಕ್ಕೆ 2 ಗಂಟೆ ಮುಂಚಿತವಾಗಿಯೇ ಅಮೆರಿಕ ದಾಳಿಯ ಸುಳಿವು ಕೊಟ್ಟಿತ್ತು ಎಂಬುದು ಗಮನಾರ್ಹ.

ಸ್ನೇಹಿತರಾಗಿದ್ದವರೀಗ ಬದ್ಧ ವೈರಿಗಳು
ಹೌದು. 1948ರ ಮೇ 14. ಪ್ಯಾಲೆಸ್ತೀನ್‌ನಿಂದ ಇಸ್ರೇಲ್‌ ಬೇರ್ಪಟ್ಟು ಹೊಸ ಯಹೂದಿ ದೇಶ ಉದಯವಾಯಿತು. ಆ ಸಮಯದಲ್ಲಿ ಇಸ್ರೇಲ್‌ ಎಂಬ ಶಿಶುವಿನ ಜತೆಗೆ ನಿಂತ ಏಕೈಕ ಇಸ್ಲಾಮಿಕ್‌ ರಾಷ್ಟ್ರ ಇರಾನ್‌. 1948ರಲ್ಲಿ ಅರಬ್‌ ರಾಷ್ಟ್ರಗಳು ಇಸ್ರೇಲ್‌ ವಿರುದ್ಧ ಯುದ್ಧ ಆರಂಭಿಸಿದರೂ, ಆ ಯುದ್ಧದಲ್ಲಿ ಇರಾನ್‌ ಭಾಗವಹಿಸಲಿಲ್ಲ. ಇಸ್ರೇಲ್‌ ಗೆದ್ದ ಬಳಿಕ ಇರಾನ್‌ ಅದರೊಂದಿಗೆ ಸಂಬಂಧ ಬೆಸೆಯಿತು. ಇರಾನ್‌ನಲ್ಲಿ ಮೊಹಮ್ಮದ್‌ ರಜಾ ಶಾ ಪಹ್ಲವಿ ಆಳ್ವಿಕೆಯಲ್ಲಿ ಈ ಎರಡೂ ರಾಷ್ಟ್ರಗಳು ಮಿತ್ರರು. ಆ ವೇಳೆ, ಪಶ್ಚಿಮ ಏಷ್ಯಾದಲ್ಲಿ ಇರಾನ್‌ ಅತಿದೊಡ್ಡ ಯಹೂದಿ ಸಮುದಾಯಕ್ಕೆ ನೆಲೆ ಕಲ್ಪಿಸಿದ್ದ ರಾಷ್ಟ್ರ. ಉಭಯ ದೇಶಗಳ ನಡುವೆ ಆಮದು ಮತ್ತು ರಫ್ತು ವ್ಯವಹಾರ ಜೋರಾಗಿತ್ತು. ಇಸ್ರೇಲ್‌ ತನ್ನಲ್ಲಿನ ಶಸ್ತ್ರಾಸ್ತ್ರ ತಂತ್ರಜ್ಞಾನ ಮತ್ತು ಕೃಷಿ ಉತ್ಪನ್ನಗಳನ್ನು ಇರಾನ್‌ಗೆ ಕಳುಹಿಸುತ್ತಿದ್ದರೆ, ಅದಕ್ಕೆ ಪ್ರತಿಯಾಗಿ ಇರಾನ್‌ ಶೇ.40ರಷ್ಟು ತೈಲವನ್ನು ಇಸ್ರೇಲ್‌ಗೆ ನೀಡುತ್ತಿತ್ತು. ಇಷ್ಟೇ ಅಲ್ಲ, ಇರಾನ್‌ನ ಗುಪ್ತಚರ ಸಂಸ್ಥೆ SAVAK, ತರಬೇತಿ ಪಡೆದಿದ್ದೇ ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್‌ನ ಕೈಯಲ್ಲಿ ಅನ್ನೋದು ವಿಶೇಷ.

1960ರ ದಶಕದಲ್ಲಿ, ಇರಾನ್‌ನಲ್ಲಿ ಇಸ್ಲಾಮಿಕ್‌ ರಾಷ್ಟ್ರದ ಬೇಡಿಕೆ ತೀವ್ರವಾಯಿತು. ಧಾರ್ಮಿಕ ನಾಯಕ ಅಯಾತೊಲ್ಲಾ ರುಹೊಲ್ಲಾ ಖಮೇನಿ ಇರಾನ್‌ ಅನ್ನು ಮುಸ್ಲಿಂ ರಾಷ್ಟ್ರವನ್ನಾಗಿಸಲು ಹೋರಾಟ ತೀವ್ರಗೊಳಿಸಿದ. 1964ರಲ್ಲಿ ಈ ಧ್ವನಿಗೆ ಅಪಾರ ಜನಬೆಂಬಲ ವ್ಯಕ್ತವಾದಾಗ ರಜಾ ಶಾ ಪಹ್ಲವಿಗೆ ಇರಾನನ್ನು ತೊರೆಯುವಂತೆ ಖಮೇನಿ ಆದೇಶಿಸಿದ. ಕಡೆಗೂ 1969ರಲ್ಲಿ ಪಹ್ಲವಿಯನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. ಇದರೊಂದಿಗೆ ಇರಾನ್‌ನಲ್ಲಿ ಇಸ್ಲಾಮಿಕ್‌ ರಾಜ್ಯ ಸ್ಥಾಪನೆಯಾಯಿತು. ಷರಿಯಾ ಕಾನೂನೂ ಜಾರಿಗೆ ಬಂತು. ಇದರೊಂದಿಗೆ ಇರಾನ್‌ನ ಖಮೇನಿ ಸರ್ಕಾರವು ಯಹೂದಿ ರಾಜ್ಯವಾದ ಇಸ್ರೇಲ್‌ನೊಂದಿಗೆ ಎಲ್ಲನಂಟನ್ನೂ ಕಡಿದುಕೊಂಡಿತು. ಉಭಯ ದೇಶಗಳ ನಡುವಿನ ವಿಮಾನ ಮಾರ್ಗವನ್ನೇ ಸಂಪೂರ್ಣವಾಗಿ ಮುಚ್ಚಲಾಯಿತು.

ಇಸ್ರೇಲ್‌-ಇರಾನ್‌ ಸೇನಾಬಲ ಮೈ ನಡುಗಿಸುತ್ತೆ
ಇಸ್ರೇಲ್‌ ಶಕ್ತಿಶಾಲಿ ರಾಷ್ಟ್ರವೇ ಆದರೂ ಇರಾನ್‌ ಸಹ ಸರಿಸಮನಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಹಾಗಾಗಿ ಮಿಲಿಟರಿ ಶಕ್ತಿಯಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಕಡಿಮೆಯೇನಿಲ್ಲ ಅಂತಲೇ ಹೇಳಬಹುದು. ಇತ್ತೀಚಿನ ಗ್ಲೋಬಲ್‌ ಫೈರ್‌ ವರದಿ ಪ್ರಕಾರ, ವಾಯು ಸೇನೆ ಮತ್ತು ರಕ್ಷಣಾ ವ್ಯವಸ್ಥೆಯಲ್ಲಿ ಇರಾನ್‌ 14ನೇ ಸ್ಥಾನದಲ್ಲಿದ್ದರೆ, ಇಸ್ರೇಲ್‌ 17ನೇ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಲಾಗಿದೆ.

ಇರಾನ್‌ 1996 ಟ್ಯಾಂಕ್‌ಗಳನ್ನು ಹೊಂದಿದೆ, ಅವುಗಳಲ್ಲಿ 1397 ಪ್ರಸ್ತುತ ಯುದ್ಧಕ್ಕೆ ಸಿದ್ಧವಾಗಿವೆ. ಇಸ್ರೇಲ್ 1,370 ಟ್ಯಾಂಕ್‌ಗಳನ್ನು ಹೊಂದಿದೆ, ಅವುಗಳಲ್ಲಿ 1,096 ಯುದ್ಧಕ್ಕೆ ಸಿದ್ಧವಾಗಿವೆ. ಇರಾನ್ 65,765 ಮಿಲಿಟರಿ ವಾಹನಗಳನ್ನು ಹೊಂದಿದ್ದು, ಅದರಲ್ಲಿ 46 ಸಾವಿರಕ್ಕೂ ಹೆಚ್ಚು ಸಕ್ರಿಯವಾಗಿವೆ. ಇನ್ನೂ ಇಸ್ರೇಲ್ 43,407 ಮಿಲಿಟರಿ ವಾಹನಗಳನ್ನು ಹೊಂದಿದೆ, ಅದರಲ್ಲಿ 34,736 ಸಕ್ರಿಯವಾಗಿವೆ. ಸ್ವಯಂ ಚಾಲಿತ ಪಿರಂಗಿಗಳ ಬಗ್ಗೆ ನೋಡಿದ್ರೆ, ಇರಾನ್‌ 580 ಫಿರಂಗಿ ಹೊಂದಿದ್ದು, ಅದರಲ್ಲಿ 406 ಸಕ್ರಿಯ ಸೇವೆಯಲ್ಲಿವೆ. ಇಸ್ರೇಲ್ 650 ಸ್ವಯಂ ಚಾಲಿತ ಫಿರಂಗಿಗಳನ್ನು ಹೊಂದಿದ್ದು, ಅದರಲ್ಲಿ 540 ಯುದ್ಧಕ್ಕೆ ಸಿದ್ಧವಾಗಿದೆ. ಸ್ವಯಂಚಾಲಿತವಲ್ಲದ ಫಿರಂಗಿಗಳಲ್ಲಿ ಇರಾನ್ 2050, ಇಸ್ರೇಲ್ ಕೇವಲ 300 ಹೊಂದಿದೆ. ಇಲ್ಲದೇ ಮಲ್ಟಿ ರಾಕೆಟ್‌ ಲಾಂಚರ್‌ಗಳ ಪೈಕಿ ಇರಾನ್‌ ಬಳಿ 775 ಮಲ್ಟಿ ಲಾಂಚರ್‌ ಇದ್ದರೆ, ಇಸ್ರೇಲ್‌ ಬಳಿ ಕೇವಲ 150 ರಾಕೆಟ್‌ ಲಾಂಚರ್‌ಗಳಿವೆ.

ಸೈನಿಕರ ಬಲದಲ್ಲಿ ಇರಾನ್‌ 11.80 ಲಕ್ಷ ಸೈನಿಕರನ್ನು ಹೊಂದಿದೆ. ಈ ಪೈಕಿ 3.50 ಲಕ್ಷ ಮೀಸಲು ಸೇನಾ ಪಡೆ, 2.20 ಲಕ್ಷ ಸೈನಿಕರ ಪ್ಯಾರಾ ಮಿಲಿಟರಿ ಪಡೆಯನ್ನು ಹೊಂದಿದೆ. ಇಸ್ರೇಲ್‌ 6.70 ಲಕ್ಷ ಸೈನಿಕರ ಬಲ ಹೊಂದಿದೆ. ಈ ಪೈಕಿ ಇಸ್ರೇಲ್ 4.65 ಲಕ್ಷ ಮೀಸಲು ಪಡೆ, 35 ಸಾವಿರ ಪ್ಯಾರಾ ಮಿಲಿಟರಿ ಪಡೆ ಸೈನಿಕರನ್ನು ಹೊಂದಿದೆ. ಇದಲ್ಲದೇ ಇರಾನ್‌ ಬಳಿ 42 ಸಾವಿರ ಜೆಟ್‌ಮೆನ್‌ಗಳಿದ್ದರೆ, ಇಸ್ರೇಲ್‌ 89 ಸಾವಿರ ಜೆಟ್‌ಮೆನ್‌ ಬಲ ಹೊಂದಿದೆ. ಜೊತೆಗೆ ಇರಾನ್ ಒಟ್ಟು 18,500 ನೌಕಾ ಸಿಬ್ಬಂದಿ ಹೊಂದಿದ್ದರೆ, ಇಸ್ರೇಲ್ 19,500 ನೌಕಾದಳ ಸಿಬ್ಬಂದಿಯನ್ನು ಹೊಂದಿದೆ.

ಸದ್ಯ ಇದೇ ತಿಂಗಳಲ್ಲಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 2ನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಇರಾನ್‌-ಇಸ್ರೇಲ್‌, ಸಿರಿಯಾ ಆಂತಕ ರಿಕ ಕದನಗಳಿಗೆ ಬ್ರೇಕ್‌ ಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇದು ಯಾವ ಹಂತ ತಲುಪಲಿದೆ ಎಂಬುದು ಕಾದುನೋಡಬೇಕಿದೆ.

Share This Article