ವಿಶ್ವದ ಅತಿ ದೊಡ್ಡ LNG ಸ್ಥಾವರದ ಮೇಲೆ ಇರಾನ್‌ ದಾಳಿ- ಭಾರತದ ಮೇಲೆ ಪರಿಣಾಮ ಏನು?

2 Min Read

ನವದೆಹಲಿ: ಕತಾರ್‌ನ(Qatar) ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ (LNG) ಸ್ಥಾವರವಾದ ರಾಸ್ ಲಫಾನ್(Ras Laffan) ಮೇಲೆ ಇರಾನ್ (Iran) ಕ್ಷಿಪಣಿ ದಾಳಿ ನಡೆಸಿದ ನಂತರ ಅಂತರರಾಷ್ಟ್ರೀಯ ತೈಲ ಮತ್ತು ಅನಿಲ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಎದ್ದಿದೆ.

ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪವಿರುವ ಇರಾನ್‌ನ ಸೌತ್ ಪಾರ್ಸ್ ಅನಿಲ ನಿಕ್ಷೇಪದ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್‌ ಈ ದಾಳಿ ನಡೆಸಿದೆ.

ತನ್ನ ನಾಯಕರನ್ನು ಹತ್ಯೆ ಮಾಡಿದ್ದಕ್ಕೆ ಸಿಟ್ಟಾಗಿರುವ ಇರಾನ್‌ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ನೆಲೆಗಳು ಮತ್ತು ಅಲ್ಲಿರುವ ತೈಲ, ಗ್ಯಾಸ್‌ ಸ್ಥಾವರದ ಮೇಲೆ ದಾಳಿ ನಡೆಸುತ್ತಿದೆ.

ಕತಾರ್‌ನಲ್ಲಿರುವ ವಿಶ್ವದ ಅತಿದೊಡ್ಡ ಎಲ್‌ಎನ್‌ಜಿ ಸೌಲಭ್ಯದ ಮೇಲಿನ ದಾಳಿಯ ನಂತರ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಅಮೆರಿಕ, ಆಸ್ಟ್ರೇಲಿಯಾ, ರಷ್ಯಾ ಜೊತೆಗೆ ವಿಶ್ವದ ಅಗ್ರ ಎಲ್‌ಎನ್‌ಜಿ ಉತ್ಪಾದಕ ದೇಶಗಳಲ್ಲಿ ಕತಾರ್‌ ಒಂದಾಗಿದೆ.


ಭಾರತದ ಮೇಲೆ ಪರಿಣಾಮ ಏನು?
ಅಂತರರಾಷ್ಟ್ರೀಯ ಮಾರುಕಟ್ಟೆಯಿಂದ ಸರಿಸುಮಾರು 50% ನೈಸರ್ಗಿಕ ಅನಿಲವನ್ನು ಭಾರತ ಖರೀದಿಸುತ್ತಿದೆ. ಅದರಲ್ಲೂ ಭಾರತ ತನ್ನ ನೈಸರ್ಗಿಕ ಅನಿಲ ಅಗತ್ಯಗಳಲ್ಲಿ ಸರಿಸುಮಾರು 20% ಅನ್ನು ಕತಾರ್‌ನಿಂದಲೇ ಆಮದು ಮಾಡಿಕೊಳ್ಳುತ್ತದೆ.

ಸರಿಯಾಗಿ ಪೊರೈಕೆ ಆಗದೇ ಇದ್ದಲ್ಲಿ ಕೈಗಾರಿಕಾ ವಲಯದಲ್ಲಿ, ವಿಶೇಷವಾಗಿ ವಿದ್ಯುತ್ ವಲಯದಲ್ಲಿ ಅನಿಲ ಬಳಕೆಯನ್ನು ಕಡಿಮೆ ಮಾಡಬೇಕಾಗುತ್ತದೆ ಎಂದು ಇಂಧನ ಅರ್ಥಶಾಸ್ತ್ರಜ್ಞ ಕಿರಿತ್ ಪಾರಿಖ್ ಹೇಳಿದ್ದಾರೆ.

ಭಾರತದ ದೈನಂದಿನ ನೈಸರ್ಗಿಕ ಅನಿಲ ಬಳಕೆ ದಿನಕ್ಕೆ 189 ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ (MMSCMD) ಆಗಿದ್ದು ಈ ಪೈಕಿ 97.5 MMSCMD ದೇಶೀಯವಾಗಿ ಉತ್ಪಾದಿಸಲ್ಪಡುತ್ತದೆ.

ಕಳೆದ ವಾರದ ಹೊತ್ತಿಗೆ ಭಾರತದ ಒಟ್ಟು ನೈಸರ್ಗಿಕ ಅನಿಲ ಆಮದಿನ ಒಂದು ಭಾಗವನ್ನು ಪ್ರತಿನಿಧಿಸುವ 47.4 MMSCMD ಮೊತ್ತದ ಎಲ್‌ಎನ್‌ಜಿ ಭಾರತಕ್ಕೆ ಬಂದಿರಲಿಲ್ಲ. ಸರಿಯಾದ ಸಮಯಕ್ಕೆ ಲಭ್ಯವಾಗದ ಕಾರಣ ಸರ್ಕಾರಿ ಸ್ವಾಮ್ಯದ ಅನಿಲ ಕಂಪನಿಗಳು ಪರ್ಯಾಯ ಹೊಸ ಮೂಲಗಳಿಂದ ಎಲ್‌ಎನ್‌ಜಿ ಖರೀದಿಸಲು ಆದೇಶ ನೀಡಿವೆ.

Share This Article