ಮಧ್ಯಪ್ರಾಚ್ಯ ದೇಶಗಳ ರಕ್ಷಣೆಗೆ ಯುದ್ಧ ಅನಿವಾರ್ಯ – ಈ ಪರಿಸ್ಥಿತಿಗೆ ಒಬಾಮಾ ನೀತಿಯೇ ಕಾರಣ: ಟ್ರಂಪ್‌ ಕಿಡಿ

3 Min Read

– ಅಮೆರಿಕದ ಪ್ರಜೆಗಳನ್ನು ಉದ್ದೇಶಿಸಿ ಟ್ರಂಪ್‌ ಭಾಷಣ
– 2 ಅಥವಾ 3 ವಾರಗಳಲ್ಲಿ ಯುದ್ಧ ಅಂತ್ಯ

ವಾಷಿಂಗ್ಟನ್‌: ಇರಾನ್‌ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ (Iran War) ಅಮೆರಿಕ ಮತ್ತು ಇಸ್ರೇಲ್‌ ನಿರ್ಣಾಯಕ ವಿಜಯಗಳನ್ನು ಸಾಧಿಸಿವೆ. ಇರಾನ್‌ನ ನೌಕಾಪಡೆ ಮತ್ತು ವಾಯುಪಡೆ ಬಹುತೇಕ ನಾಶವಾಗಿದ್ದು, ಅದರ ಪ್ರಮುಖ ನಾಯಕರು ಹತರಾಗಿದ್ದಾರೆ ಎಂದು ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ್ದಾರೆ.

ಯುದ್ಧ ಆರಂಭಗೊಂಡ ಬಳಿಕ ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡಿ, ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಮತ್ತೆ ಆರಂಭಿಸಲು ಪ್ರಯತ್ನಿಸಿದ್ದರಿಂದ ನಾವು ದಾಳಿ ನಡೆಸುವುದು ಅನಿವಾರ್ಯವಾಯಿತು ಎಂದು ಅಮೆರಿಕದ ಎಪಿಕ್‌ ಫ್ಯೂರಿ ಕಾರ್ಯಾಚರಣೆಯನ್ನು (Operation Epic Fury) ಸಮರ್ಥಿಸಿಕೊಂಡಿದ್ದಾರೆ.

ಸುಮಾರು 18 ನಿಮಿಷಗಳ ಭಾಷಣದಲ್ಲಿ ಯುದ್ಧದ ಅನಿವಾರ್ಯತೆ, ಅಮೆರಿಕ ಮಿಲಿಟರಿಯ ಶಕ್ತಿ, ಪ್ರಾದೇಶಿಕ ಮಿತ್ರರು ಮತ್ತು ಇಸ್ರೇಲ್‌ ರಕ್ಷಣೆಯ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ಬರಾಕ್‌ ಒಬಾಮಾ ಅವರ ವಿರುದ್ಧ ವಾಗ್ದಾಳಿ ನಡೆಸಿ ತಾನೊಬ್ಬ ಯಶಸ್ವಿ ನಾಯಕ ಎಂದು ತನ್ನನ್ನು ತಾನೇ ಹೊಗಳಿದ್ದಾರೆ.

ಇರಾನ್ ವಿರುದ್ಧದ ಈ ಹೋರಾಟದಲ್ಲಿ ಅಮೆರಿಕಕ್ಕೆ ಸಾಥ್‌ ನೀಡುತ್ತಿರುರುವ ಇಸ್ರೇಲ್ (Isreal) ಅನ್ನು ಟ್ರಂಪ್‌ ವಿಶೇಷವಾಗಿ ಶ್ಲಾಘಿಸಿದ್ದಾರೆ. ಇಸ್ರೇಲ್‌ನ ಸೈನಿಕರು ಮತ್ತು ನಾಯಕತ್ವದ ಧೈರ್ಯವನ್ನು ಅವರು ಕೊಂಡಾಡಿದ್ದಾರೆ.

ಇರಾನ್‌ನ ಪ್ರಭಾವವನ್ನು ತಡೆಯಲು ನೀಡುತ್ತಿರುವ ಬೆಂಬಲಕ್ಕಾಗಿ ಸೌದಿ ಅರೇಬಿಯಾ, ಕತಾರ್, ಯುಎಇ, ಕುವೈತ್ ಮತ್ತು ಬಹರೇನ್‌ ದೇಶಗಳಿಗೆ ಟ್ರಂಪ್‌ ಕೃತಜ್ಞತೆ ಸಲ್ಲಿಸಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕದ ನಿಲುವನ್ನು ಬೆಂಬಲಿಸಿದ ಕೆಲವು ಯುರೋಪಿಯನ್ ರಾಷ್ಟ್ರಗಳಿಗೆ ಅವರು ಧನ್ಯವಾದ ಸಲ್ಲಿಸಿದರು.

 

 

ಟ್ರಂಪ್‌ ಭಾಷಣದಲ್ಲಿ ಹೇಳಿದ್ದೇನು?
ಈ ಯುದ್ಧದಲ್ಲಿ ದಶಕಗಳ ಕಾಲ ಉಳಿಯಲು ಇಚ್ಛಿಸುವುದಿಲ್ಲ. ಬದಲಿಗೆ ಗುರಿ ಈಡೇರಿಸಿದ ಕೂಡಲೇ ಯುದ್ಧವನ್ನು ಕೊನೆಗೊಳಿಸುತ್ತೇವೆ. ಇರಾನ್ ಯುದ್ಧವು ಇನ್ನು ಎರಡು ಅಥವಾ ಮೂರು ವಾರಗಳಲ್ಲಿ ಅಂತ್ಯವಾಗಬಹುದು. ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ತಡೆಯುವುದು ನಮ್ಮ ಮುಖ್ಯ ಗುರಿಯಾಗಿದೆ. ಇರಾನ್ ತನ್ನ ಪರಮಾಣು ಸಾಮರ್ಥ್ಯವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿರುವುದು ಇಡೀ ಜಗತ್ತಿಗೆ ಅಪಾಯಕಾರಿ. ಹಾಗಾಗಿ ಅಮೆರಿಕದ ಭದ್ರತೆಗಾಗಿ ಈ ದಾಳಿ ಅನಿವಾರ್ಯವಾಗಿತ್ತು. ಇದನ್ನೂ ಓದಿ: ಹಾರ್ಮುಜ್‌ ಸಮುದ್ರ ಬಾಂಬ್‌ಗಳಿಂದ ತಪ್ಪಿಸಿ ಬದಲಿ ಮಾರ್ಗ ಬಳಸಿ ಭಾರತಕ್ಕೆ ಹಡಗು ಬಂದಿದ್ದೇಗೆ?

ಇರಾನ್ ತಕ್ಷಣವೇ ತನ್ನ ಪರಮಾಣು ಹಠವನ್ನು ಬಿಟ್ಟು ಶಾಂತಿ ಮಾತುಕತೆಗೆ ಬರಬೇಕು. ಮಾತುಕತೆ ಬಾರದೇ ಇದ್ದರೆ ಈವರೆಗೆ ಕಂಡದ್ದಕ್ಕಿಂತ ದೊಡ್ಡ ದುರಂತವನ್ನು ಎದುರಿಸಬೇಕಾಗುತ್ತದೆ ಮತ್ತು ಉಳಿದಿರುವ ಗುರಿಗಳ ಮೇಲೆ ನಿಖರ ದಾಳಿ ನಡೆಸಲಾಗುವುದು. ಈ ಯುದ್ಧವನ್ನು ದೀರ್ಘಕಾಲ ಎಳೆಯುವು ಉದ್ದೇಶವನ್ನು ನಾವು ಹೊಂದಿಲ್ಲ. ಬದಲಿಗೆ ಕೆಲವೇ ವಾರಗಳಲ್ಲಿ ಇರಾನ್ ಶರಣಾಗುವಂತೆ ಮಾಡುತ್ತೇವೆ.

ಅಮೆರಿಕ ಈಗ ಇಂಧನಕ್ಕಾಗಿ ಮಧ್ಯಪ್ರಾಚ್ಯದ ಮೇಲೆ ಅವಲಂಬಿತವಾಗಿಲ್ಲ ನಾವು ಇಂಧನ ಸ್ವತಂತ್ರ ರಾಷ್ಟ್ರವಾಗಿದ್ದು ಅಲ್ಲಿನ ತೈಲಕ್ಕಾಗಿ ನಾವು ಯುದ್ಧ ಮಾಡುತ್ತಿಲ್ಲ. ಬದಲಾಗಿ ಕೇವಲ ಜಾಗತಿಕ ಶಾಂತಿ ಮತ್ತು ಮಿತ್ರರಾಷ್ಟ್ರಗಳ ರಕ್ಷಣೆಗಾಗಿ ಈ ಯುದ್ಧಕ್ಕೆ ಇಳಿದಿದ್ದೇವೆ.

ಇಡೀ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಇರಾನ್ ತನ್ನ ಅಸ್ಥಿರತೆಯನ್ನು ಹರಡುತ್ತಿದೆ ಮತ್ತು ಪರಮಾಣು ಶಕ್ತಿಯಾಗಲು ಪ್ರಯತ್ನಿಸುತ್ತಿದೆ. ಈ ಸಂಘರ್ಷದಲ್ಲಿ ಅಮೆರಿಕದ ಮಿತ್ರರಾಷ್ಟ್ರಗಳ ಸುರಕ್ಷತೆಯನ್ನು ಖಚಿತಪಡಿಸುವುದು ಮತ್ತು ಇರಾನ್‌ನಿಂದ ಅವರಿಗೆ ಎದುರಾಗಿರುವ ಭೀತಿಯನ್ನು ಹೋಗಲಾಡಿಸುವುದು ನಮ್ಮ ಗುರಿ. ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಅತ್ಯಂತ ಆಪ್ತ ಮಿತ್ರ ರಾಷ್ಟ್ರವಾದ ಇಸ್ರೇಲ್ ಅನ್ನು ರಕ್ಷಿಸುವುದು ಮತ್ತು ಅದರೊಂದಿಗೆ ಸೇರಿ ಕಾರ್ಯಾಚರಣೆ ನಡೆಸುವುದು ತಮ್ಮ ಆದ್ಯತೆಯಾಗಿದೆ.

 

ಒಬಾಮಾ ವಿರುದ್ಧ ಕಿಡಿ
ಒಬಾಮಾ ಅವರ ವಿದೇಶಾಂಗ ನೀತಿಗಳು ಇಂದಿನ ಪರಿಸ್ಥಿತಿಗೆ ಕಾರಣ. ಒಬಾಮಾ ಅವರ ನೇತೃತ್ವದಲ್ಲಿ ನಡೆದ ಇರಾನ್ ಅಣು ಒಪ್ಪಂದವು ಒಂದು ದುರಂತ. ಈ ಒಪ್ಪಂದವನ್ನು ನಾನು ರದ್ದುಗೊಳಿಸದಿದ್ದರೆ ಇರಾನ್ ಈಗಾಗಲೇ ಅಣ್ವಸ್ತ್ರಗಳನ್ನು ತಯಾರಿಸಿರುತ್ತಿತ್ತು ಮತ್ತು ಅದು ಇಡೀ ಮಧ್ಯಪ್ರಾಚ್ಯದ ವಿನಾಶಕ್ಕೆ ಕಾರಣವಾಗುತ್ತಿತ್ತು. ಇದನ್ನೂ ಓದಿ: ಚಂದಿರನತ್ತ ಮಾನವ – ಐತಿಹಾಸಿಕ ಆರ್ಟೆಮಿಸ್-II ಮಿಷನ್‌ ಉಡಾವಣೆ ಯಶಸ್ವಿ

2016 ರಲ್ಲಿ ಒಬಾಮಾ ಆಡಳಿತವು ಇರಾನ್‌ಗೆ 1.7 ಬಿಲಿಯನ್ ಡಾಲರ್‌ ಮೊತ್ತವನ್ನು ನಗದು ರೂಪದಲ್ಲಿ ನೀಡಿತ್ತು.ಇರಾನ್ ವಿಚಾರವನ್ನು ಸರಿಯಾಗಿ ನಿಭಾಯಿಸದೇ ಎಸಗಿರುವ ತಪ್ಪನ್ನು ನಾನು ಈಗ ಸರಿಪಡಿಸುತ್ತಿದ್ದೇನೆ. ಒಬಾಮಾ ಅವರ ಅಣು ಒಪ್ಪಂದ ಜಾರಿಯಲ್ಲಿದ್ದಿದ್ದರೆ ಇಂದು ಇಸ್ರೇಲ್ ರಾಷ್ಟ್ರವಾಗಿಯೇ ಇರುತ್ತಿರಲಿಲ್ಲ ಎಂದು ಗಂಭೀರವಾದ ಆರೋಪವನ್ನು ಮಾಡಿದರು.
Share This Article