ಅಮೆರಿಕದ ಫೈಟರ್‌ ಜೆಟ್‌ ಲ್ಯಾಂಡಿಂಗ್‌ ನಿರಾಕರಿಸಿ ನಮ್ಮದು ತಟಸ್ಥ ದೇಶ ಎಂದ ಶ್ರೀಲಂಕಾ

2 Min Read

– ಶ್ರೀಲಂಕಾ ಸಂಸತ್ತಿನಲ್ಲಿ ಅಧ್ಯಕ್ಷ ದಿಸಾನಾಯಕ ವಿವರಣೆ
– ಅಧ್ಯಕ್ಷರ ನಿರ್ಧಾರಕ್ಕೆ 225 ಸದಸ್ಯರ ಮೆಚ್ಚುಗೆಯ ಚಪ್ಪಾಳೆ

ಕೊಲಂಬೋ: ತನ್ನ ಎರಡು ಯುದ್ಧ ವಿಮಾನಗಳನ್ನು (Fighter Jets) ನಾಗರಿಕ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಮಾಡಲು ಶ್ರೀಲಂಕಾದ (Sri Lanka) ಬಳಿ ಅಮೆರಿಕ (USA) ಅನುಮತಿ ಕೇಳಿದ್ದ ವಿಚಾರ ಈಗ ತಡವಾಗಿ ಬೆಳಕಿಗೆ ಬಂದಿದೆ.

ಹೌದು. ಸಂಸತ್ತಿನಲ್ಲಿ ಈ ವಿಚಾರ ತಿಳಿಸಿದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ (Anura Kumara Dissanayake) ಅವರು, ಎರಡು ಯುದ್ಧ ವಿಮಾನಗಳನ್ನು ನಿಲ್ಲಿಸಲು ಅನುಮತಿ ನೀಡುವಂತೆ ಅಮೆರಿಕ ಮನವಿ ಮಾಡಿತ್ತು. ಆದರೆ ನಮ್ಮ ತಟಸ್ಥ ನೀತಿಯನ್ನು ಕಾಪಾಡಿಕೊಳ್ಳಲು ನಾವು ಅನುಮತಿ ನೀಡಲಿಲ್ಲ ಎಂದು ತಿಳಿಸಿದರು.

ಜಿಬೌಟಿಯ ನೆಲೆಯಿಂದ ಹೊರಟ ಎಂಟು ಹಡಗು ವಿರೋಧಿ ಕ್ಷಿಪಣಿಗಳಿದ್ದ ಎರಡು ಯುದ್ಧ ವಿಮಾನಗಳನ್ನು ಮಾರ್ಚ್ 4 ರಿಂದ 8 ರವರೆಗೆ ನಮ್ಮ ಮಟ್ಟಾಲಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲ್ಯಾಂಡ್‌ ಮಾಡಲು ಅಮೆರಿಕ ಕೇಳಿತ್ತು. ಆದರೆ ಮಿಲಿಟರಿ ಉದ್ದೇಶಕ್ಕಾಗಿ ವಿಮಾನಗಳ ಲ್ಯಾಂಡಿಂಗ್‌ಗೆ ನಾವು ಅನುಮತಿ ಕೊಡಲಿಲ್ಲ ಎಂದು ಮಾಹಿತಿ ನೀಡಿದರು.

ಹಲವು ಒತ್ತಡಗಳ ಹೊರತಾಗಿಯೂ ನಾವು ನಮ್ಮ ತಟಸ್ಥತೆಯನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ. ಮಧ್ಯಪ್ರಾಚ್ಯ ಯುದ್ಧ ಸವಾಲುಗಳನ್ನು ಒಡ್ಡಿದ್ದರೂ ನಾವು ಯಾರ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಇಸ್ರೇಲ್‌, ಅಮೆರಿಕಕ್ಕೆ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಇರಾನ್‌ ಟಾಪ್‌ ಕಮಾಂಡರ್‌ ಬಲಿ

ಫೆಬ್ರವರಿ 26 ರಂದು ಅಮೆರಿಕ ವಿನಂತಿ ಮಾಡಿತ್ತು. ಅದೇ ದಿನ ಇರಾನ್‌ (Iran) ಕರೆ ಮಾಡಿ, ನೌಕಾ ಕಸರತ್ತಿನ ನಂತರ ಭಾರತದಿಂದ ಮರಳುತ್ತಿದ್ದ ಮೂರು ಯುದ್ಧ ನೌಕೆಗಳಿಗೆ ನಿಮ್ಮ ಬಂದರಿನಲ್ಲಿ ಲಂಗರು ಹಾಕಲು ಅನುಮತಿ ನೀಡುವಂತೆ ಮನವಿ ಮಾಡಿತ್ತು ಎಂದು ತಿಳಿಸಿದರು.


ಮಾರ್ಚ್ 9 ರಿಂದ 13 ರವರೆಗೆ ಕೊಲಂಬೋದಲ್ಲಿ ಮೂರು ಹಡಗು ನಿಲ್ಲಿಸಲು ನಾವು ಅನುಮತಿ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೆವು. ಒಂದು ವೇಳೆ ನಾವು ಇರಾನ್‌ ಮನವಿಯನ್ನು ಸ್ವೀಕರಿಸಿದ್ದರೆ ಅಮೆರಿಕದ ಮನವಿಯನ್ನು ಸ್ವೀಕರಿಸಬೇಕಿತ್ತು ಎಂದು ವಿವರ ನೀಡಿದರು.

ಮುಂದುವರೆದು ಯಾರ ಮನವಿಗೂ ಒಪ್ಪಿಗೆ ನೀಡದೇ ನಾವು ತಟಸ್ಥವಾಗಿರುವ ಸ್ಥಾನವನ್ನು ದೃಢವಾಗಿ ಕಾಯ್ದುಕೊಳ್ಳುತ್ತಿದ್ದೇವೆ ಎಂದು ದಿಸಾನಾಯಕ ಹೇಳಿದಾಗ ಸಂಸತ್ತಿನಲ್ಲಿದ್ದ 225 ಸದಸ್ಯರು ಚಪ್ಪಾಳೆ ತಟ್ಟಿ ಸರ್ಕಾರದ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾರ್ಚ್ 4 ರಂದು ಶ್ರೀಲಂಕಾದ ದಕ್ಷಿಣ ಕರಾವಳಿಯಿಂದ ಸ್ವಲ್ಪ ದೂರದಲ್ಲಿರುವ ಇರಾನಿನ ಹಡಗುಗಳಲ್ಲಿ ಒಂದಾದ ಐರಿಸ್ ದೇನಾವನ್ನು ಅಮೆರಿಕ ತನ್ನ ಜಲಾಂತರ್ಗಾಮಿಯಿಂದ ಟಾರ್ಪಿಡೊ ಬಳಸಿ ಹೊಡೆದು ಹಾಕಿತ್ತು. ಈ ಘಟನೆಯಲ್ಲಿ 84 ನಾವಿಕರು ಸಾವನ್ನಪ್ಪಿದ್ದರು. ಶ್ರೀಲಂಕಾದ ನೌಕಾಪಡೆ 32 ಮಂದಿಯನ್ನು ರಕ್ಷಿಸಿತ್ತು. ಇದನ್ನೂ ಓದಿ: ದೇನಾ ಮುಳುಗುವ ಮೊದಲೇ ಇರಾನಿನ ಮತ್ತೊಂದು ನೌಕಾ ಹಡಗಿಗೆ ಆಶ್ರಯ ನೀಡಿತ್ತು ಭಾರತ

ಕೊಲ್ಲಿ ಯುದ್ಧದ ಸಮಯದಲ್ಲಿ ಇರಾನಿನ ಮೂರು ಹಡಗುಗಳು ಹಿಂದೂ ಮಹಾಸಗರದಲ್ಲಿ ಸಂಚರಿಸುತ್ತಿದ್ದವು. IRIS ದೇನಾವನ್ನು ಅಮೆರಿಕ ಮುಳುಗಿಸಿದರೆ IRIS Lavan ಕೊಚ್ಚಿಯಲ್ಲಿ ಲಂಗರು ಹಾಕಿದೆ. IRIS ಬುಶೆಹರ್ ಹಡಗಿನಲ್ಲಿ ಎಂಜಿನ್‌ನಲ್ಲಿ ದೋಷ ಕಂಡು ಬಂದಿದ್ದರಿಂದ ಶ್ರೀಲಂಕಾದ ಟ್ರಿಂಕೋಮಲಿಯಲ್ಲಿ ಈಗ ನಿಂತಿದೆ. ಬುಶೆಹರ್ ಸಿಬ್ಬಂದಿ ಈಗ ಕೊಲೊಂಬೊ ಸಮೀಪದ ನೌಕಾ ಸೌಲಭ್ಯ ಕೇಂದ್ರದಲ್ಲಿ ತಂಗಿದ್ದಾರೆ.

ಅಮೆರಿಕ ಶ್ರೀಲಂಕಾದ ಅತಿದೊಡ್ಡ ರಫ್ತು ದೇಶವಾಗಿದ್ದಾರೆ ಇರಾನ್‌ ಚಹಾದ ಪ್ರಮುಖ ಖರೀದಿ ದೇಶವಾಗಿದೆ. ಎರಡೂ ದೇಶಗಳ ಜೊತೆ ಶ್ರೀಲಂಕಾ ಉತ್ತಮ ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದೆ.

Share This Article