ಕೌಲಾಲಂಪುರ: ಇರಾನ್ ಯುದ್ಧದ (Iran War) ಪರಿಣಾಮವಾಗಿ ಜಾಗತಿಕ ಪೂರೈಕೆ ಸರಪಳಿಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಕಾಂಡೋಮ್ (Condom) ದರಗಳು ಭಾರೀ ಏರಿಕೆಯಾಗುವ ಸಾಧ್ಯತೆಯಿದೆ.
ಕಾಂಡೋಮ್ ದರಗಳು ಶೇ.20 ರಿಂದ 30 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವಿಶ್ವದ ಅತಿದೊಡ್ಡ ಕಾಂಡೋಮ್ ತಯಾರಕ ಸಂಸ್ಥೆಯಾದ ಮಲೇಷ್ಯಾ ಮೂಲದ ಕಾರೆಕ್ಸ್ (Karex) ತಿಳಿಸಿದೆ. ಈ ಹೆಚ್ಚುವರಿ ವೆಚ್ಚದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ ಎಂದು ಕಂಪನಿ ಹೇಳಿದೆ.
ಬೆಲೆ ಏರಿಕೆ ಯಾಕೆ?
ವಿಶ್ವದ ಕಾಂಡೋಮ್ ಮಾರುಕಟ್ಟೆಯ ಬಹುಪಾಲು ಪೂರೈಕೆಯು ಮಲೇಷ್ಯಾದಂತಹ ಆಗ್ನೇಯ ಏಷ್ಯಾದ ದೇಶಗಳಿಂದ ಬರುತ್ತದೆ. ಇರಾನ್ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿ (Strait of Hormuz) ಮತ್ತು ಕೆಂಪು ಸಮುದ್ರದ ಮಾರ್ಗಗಳಲ್ಲಿ ಸರಕು ಸಾಗಣೆ ಹಡಗುಗಳಿಗೆ ಭದ್ರತೆಯ ಭೀತಿ ಎದುರಾಗಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ಸಂಚಾರಕ್ಕೆ ಅಡ್ಡಿಯಾಗಿರುವುದರಿಂದ ಹಡಗುಗಳು ದೀರ್ಘವಾದ ಪರ್ಯಾಯ ಮಾರ್ಗಗಳನ್ನು ಬಳಸಬೇಕಾಗಿದ್ದು, ಸಾಗಾಣಿಕಾ ವೆಚ್ಚ ಮತ್ತು ವಿಮಾ ವೆಚ್ಚ (Insurance cost) ವಿಪರೀತವಾಗಿ ಹೆಚ್ಚಾಗಿದೆ. ಇದರಿಂದಾಗಿ ಯುರೋಪ್ ಮತ್ತು ಅಮೆರಿಕದಂತಹ ದೇಶಗಳಿಗೆ ಉತ್ಪನ್ನಗಳು ತಲುಪಲು ಮೊದಲಿನ ಅವಧಿಗಿಂತ ದುಪ್ಪಟ್ಟು ಸಮಯ (ಸುಮಾರು 2 ತಿಂಗಳು) ಬೇಕಾಗುತ್ತಿದೆ. ಇದನ್ನೂ ಓದಿ: ಪಾಕಿಗೆ ಅರಾಗ್ಚಿ ಆಗಮನ – ಸಂಧಾನಕ್ಕೆ ಮೊದಲೇ ಅಮೆರಿಕ ಜೊತೆ ನೇರ ಮಾತುಕತೆ ಇಲ್ಲವೆಂದ ಇರಾನ್

ಕಾಂಡೋಮ್ ತಯಾರಿಕೆಗೆ ಅಗತ್ಯವಾದ ಸಿಲಿಕೋನ್ ಆಯಿಲ್, ಅಮೋನಿಯಾ, ಮತ್ತು ಸಿಂಥೆಟಿಕ್ ರಬ್ಬರ್ ನಂತಹ ಪೆಟ್ರೋಕೆಮಿಕಲ್ ಆಧಾರಿತ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ತೈಲ ಬೆಲೆ ಏರಿಕೆಯಾದಾಗ ಈ ದ್ರವಗಳ ಬೆಲೆಯೂ ಏರುತ್ತದೆ. ಕೆಲವು ಕಚ್ಚಾ ವಸ್ತುಗಳ ಬೆಲೆ ಶೇ.100 ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.
ಕಾಂಡೋಮ್ ಪ್ಯಾಕ್ ಮಾಡಲು ಬಳಸುವ ಅಲ್ಯೂಮಿನಿಯಂ ಫಾಯಿಲ್ ಮತ್ತು ಪಿವಿಸಿ (PVC) ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಬೆಲೆ ಏರಿದೆ.
ಪೂರೈಕೆಯಲ್ಲಿನ ಕೊರತೆಯಿಂದ ಜಾಗತಿಕವಾಗಿ ಕಾಂಡೋಮ್ಗಳ ಬೇಡಿಕೆಯು ಶೇ.30 ರಷ್ಟು ಹೆಚ್ಚಾಗಿದೆ. ಮೊದಲು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ತಲುಪಲು ಕೇವಲ 3-4 ವಾರಗಳು ಬೇಕಾಗುತ್ತಿದ್ದ ಜಾಗದಲ್ಲಿ, ಈಗ ಯುದ್ಧದ ಆತಂಕದಿಂದಾಗಿ 6 ರಿಂದ 8 ವಾರಗಳ ಕಾಲ ಬೇಕಾಗುತ್ತಿದೆ. ಈ ವಿಳಂಬವು ಮಾರುಕಟ್ಟೆಯಲ್ಲಿ ಕೃತಕ ಅಭಾವವನ್ನು ಸೃಷ್ಟಿಸಿ ಬೆಲೆ ಏರಿಕೆಗೆ ದಾರಿ ಮಾಡಿಕೊಡುತ್ತದೆ.
ಕಾಂಡೋಮ್ಗಳನ್ನು ಸುರಕ್ಷಿತವಾಗಿಡಲು ಬಳಸುವ ಅಲ್ಯೂಮಿನಿಯಂ ಫಾಯಿಲ್ ಮತ್ತು ಪೇಪರ್ ಬಾಕ್ಸ್ಗಳ ಬೆಲೆ ಕೂಡ ಯುದ್ಧದ ಪರಿಣಾಮವಾಗಿ ಹೆಚ್ಚಾಗಿದೆ. ಜೊತೆಗೆ ಹಣದುಬ್ಬರದಿಂದಾಗಿ ಉತ್ಪಾದನಾ ಕಾರ್ಮಿಕರ ಕೂಲಿಯೂ ಹೆಚ್ಚಾಗಿರುವುದು ಅಂತಿಮ ಉತ್ಪನ್ನದ ಬೆಲೆಯ ಮೇಲೆ ಪರಿಣಾಮ ಬೀರಿದೆ.
ವಿಶ್ವದ ಪ್ರತಿ 5 ಕಾಂಡೋಮ್ಗಳಲ್ಲಿ ಒಂದನ್ನು ತಯಾರಿಸುವ ಕಾರೆಕ್ಸ್ ಸಂಸ್ಥೆಯು ಬೆಲೆ ಏರಿಕೆಯನ್ನು ಘೋಷಿಸಿದೆ. ಇದರ ನೇರ ಪರಿಣಾಮವಾಗಿ ಭಾರತದಲ್ಲಿ ದೊರೆಯುವ ಡ್ಯುರೆಕ್ಸ್ (Durex), ಟ್ರೋಜನ್ (Trojan) ಮತ್ತು ಇತರ ಅಂತರಾಷ್ಟ್ರೀಯ ಬ್ರ್ಯಾಂಡ್ಗಳ ಬೆಲೆ ಶೀಘ್ರದಲ್ಲೇ ಹೆಚ್ಚಾಗುವ ಸಾಧ್ಯತೆಯಿದೆ.

