– ಎಲ್‌ಪಿಜಿ ತುಂಬಿಕೊಂಡು ಯುಎಇಯಿಂದ ಹೊರಟ್ಟಿದ್ದ ಹಡಗು
– ತಲೆ ಮೇಲೆಯೇ ಕ್ಷಿಪಣಿ, ಡ್ರೋನ್‌ಗಳ ಹಾರಾಟ
– ಯಾವುದೇ ಶುಲ್ಕ ಪಾವತಿಸಿದೇ ಹಡಗು ಸಂಚಾರ
ನವದೆಹಲಿ: ಅಮೆರಿಕ ಇರಾನ್ ಸಂಘರ್ಷದ (US-Iran War) ಸಮಯದಲ್ಲಿ ಅಪಾಯಕಾರಿ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಸಿಲುಕಿದ್ದ ಭಾರತದ ಪೈನ್ ಗ್ಯಾಸ್ (Pine Gas) ಹೆಸರಿನ ಎಲ್‌ಪಿಜಿ ಟ್ಯಾಂಕರ್ ಸುರಕ್ಷಿತವಾಗಿ ಭಾರತವನ್ನು ತಲುಪಿದ್ದೇ ರೋಚಕ ಕಥೆ.
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿತ್ತು. ಈ ದಾಳಿಗೂ ಒಂದು ದಿನದ ಮೊದಲು ಅಂದರೆ ಫೆ.27 ರಂದು ಯುಎಇ (UAE) ರುವೈಸ್ ಬಂದರಿನಲ್ಲಿ ಟ್ಯಾಂಕರ್‌ಗೆ 45 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ (LPG) ಲೋಡ್ ಆಗಿತ್ತು. ಎಲ್ಲವೂ ನಿಗದಿ ಪ್ರಕಾರ ನಡೆದಿದ್ದರೆ ಒಂದು ವಾರದೊಳಗೆ ಹಡಗು ಭಾರತಕ್ಕೆ ಬರಬೇಕಿತ್ತು.
ಯುದ್ಧ ತೀವ್ರಗೊಂಡ ನಂತರ ಏಕಾಏಕಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿತು. ದಿಢೀರ್ ಬಂದ್ ಮಾಡಿದ್ದರಿಂದ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಇರಲಿಲ್ಲ. ಒಂದಲ್ಲ ಎರರಡಲ್ಲ 25 ದಿನಗಳ ಕಾಲ ಸಮುದ್ರದಲ್ಲೇ 27 ಸಿಬ್ಬಂದಿಯಿದ್ದ ಹಡಗು ನಿಂತಿತ್ತು. ಹಡಗು ನಿಂತ ಸಮಯದಲ್ಲಿ ಸಿಬ್ಬಂದಿ ತಲೆ ಮೇಲೆಯೇ ಪ್ರತಿದಿನ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಹಾರುತ್ತಿದ್ದವು. ಹಾರುವುದು ಮಾತ್ರವಲ್ಲ ಆಕಾಶದಲ್ಲೇ ಇವುಗಳು ಛಿದ್ರಗೊಳ್ಳುವುದನ್ನು ಕಣ್ಣಾರೇ ನೋಡುತ್ತಿದ್ದರು. ಇದನ್ನೂ ಓದಿ: ಟ್ರಂಪ್‌ಗೆ ಮೆಲೋನಿ ಶಾಕ್ – ಲ್ಯಾಂಡಿಂಗ್‌ಗೆ ಅನುಮತಿ ನೀಡದ್ದಕ್ಕೆ ಅಮೆರಿಕ ಕೆಂಡಾಮಂಡಲ
ಅನುಮತಿ ಸಿಕ್ಕಿದರೂ ಹಾರ್ಮುಜ್‌ನಲ್ಲಿ ಸಾಮಾನ್ಯವಾಗಿ ಸಂಚರಿಸುವ ಮಾರ್ಗಗಳಲ್ಲಿ ಹಡಗು ಸಂಚರಿಸಿಲ್ಲ. ಸಾಮಾನ್ಯ ಮಾರ್ಗದ ಬದಲಾಗಿ ಇರಾನ್ ಕರಾವಳಿಯ ಸಮೀಪವಿರುವ ಲಾರಕ್ ದ್ವೀಪದ ಉತ್ತರದಲ್ಲಿರುವ ಅತ್ಯಂತ ಕಿರಿದಾದ ಕಾಲುವೆಯ ಮೂಲಕ ಸಂಚರಿಸುವಂತೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸೂಚಿಸಿತ್ತು.
ಹಡಗಿನಲ್ಲಿದ್ದ ಮುಖ್ಯ ಅಧಿಕಾರಿ ಸೋಹನ್ ಲಾಲ್ ಪ್ರತಿಕ್ರಿಯಿಸಿ, ಐಆರ್‌ಜಿಸಿ ಅವರಿಗೆ ನಮ್ಮ ಸಿಬ್ಬಂದಿಯಿಂದ ಹೌದು ಅಥವಾ ಇಲ್ಲ ಎಂಬ ಉತ್ತರ ಮಾತ್ರ ಬೇಕಿತ್ತು. ಅವರ ಬೇಡಿಕೆಗಳಿಗೆ ಎಲ್ಲಾ ಸಿಬ್ಬಂದಿ ಒಪ್ಪಿದರು. ಹಾರ್ಮುಜ್ ಜಲಸಂಧಿಯ ಸಾಮಾನ್ಯ ಹಡಗು ಸಂಚಾರದ ಮಾರ್ಗದಲ್ಲಿ ಸಮುದ್ರದ ಒಳಗೆ ಸಮುದ್ರ ಬಾಂಬ್ (Mines) ಹಾಕಿದ್ದರಿಂದ ಆ ಮಾರ್ಗದಲ್ಲಿ ಚಲಿಸುವುದು ಅಸಾಧ್ಯವಾಗಿತ್ತು. ಹೀಗಾಗಿ ಹಡಗು ಸಂಚರಿಸಲು ಸಾಮಾನ್ಯವಾಗಿ ಬಳಸದೇ ಇರುವ ಲಾರಾಕ್ ಮಾರ್ಗವನ್ನು ಬಳಸುವಂತೆ ನಿರ್ದೇಶಿಸಿತು ಎಂದು ಹೇಳಿದರು.
ಇರಾನ್ ಕಿರಿದಾದ ಜಲಮಾರ್ಗದ ಮೂಲಕ ಸ್ನೇಹಿತ ರಾಷ್ಟ್ರವಾದ ಭಾರತದ ಹಡಗುಗಳ ಸಂಚಾರಕ್ಕೆ ಅನುಮತಿ ನೀಡಿದ್ದರೂ ಇನ್ನೂ ಸುಮಾರು 485 ಭಾರತೀಯ ನಾವಿಕರು ಇರುವ 18 ಭಾರತೀಯ ಧ್ವಜ ಹೊಂದಿರುವ ಹಡಗುಗಳು ಪರ್ಷಿಯನ್ ಕೊಲ್ಲಿಯಲ್ಲಿ ಉಳಿದಿವೆ. ಇದನ್ನೂ ಓದಿ: Explainer | ಹಾರ್ಮುಜ್ ಜಲಸಂಧಿಯಲ್ಲಿ ಸ್ಫೋಟಕ ಇರಿಸಿದ ಇರಾನ್ – ತೆಗೆದುಹಾಕಲು ಸಿದ್ಧ ಎಂದ ಜಪಾನ್; ಹೇಗೆ ಸಾಧ್ಯ?
ಜಲಸಂಧಿಯನ್ನು ದಾಟುವಾಗ ಭದ್ರತೆಯ ದೃಷ್ಟಿಯಿಂದ ಹಡಗಿನ AIS (Automatic Identification System) ಅನ್ನು ಆಫ್ ಮಾಡಲಾಗಿತ್ತು. ಇರಾನ್ ಈಗ ಅನುಮತಿ ನೀಡಿರುವ ಮಾರ್ಗವು ಅತ್ಯಂತ ಅಪಾಯಕಾರಿಯಾಗಿರುವುದರಿಂದ ಹಡಗಿನ ಮಾಲೀಕರು ಮತ್ತು ಪ್ರತಿಯೊಬ್ಬ ಸಿಬ್ಬಂದಿಯ ಒಪ್ಪಿಗೆ ಪಡೆದ ನಂತರವೇ ಪ್ರಯಾಣಕ್ಕೆ ಭಾರತ ಸರ್ಕಾರ ಅನುಮತಿ ನೀಡುತ್ತಿದೆ.
ಆರಂಭದಲ್ಲಿ 45,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಪೈನ್ ಗ್ಯಾಸ್ ಟ್ಯಾಂಕರ್‌ನಲ್ಲಿದ್ದ ಎಲ್‌ಪಿಜಿಯನ್ನು ಮಂಗಳೂರು ಬಂದರಿನಲ್ಲಿ ಅನ್‌ಲೋಡ್ ಮಾಡಲು ತೀರ್ಮಾನಿಸಲಾಗಿತ್ತು. ನಂತರ ಈ ಟ್ಯಾಂಕರ್ ಅನ್ನು ವಿಶಾಖಪಟ್ಟಣ ಮತ್ತು ಹಲ್ಡಿಯಾದ ಪೂರ್ವ ಬಂದರುಗಳಲ್ಲಿ ಸಮಾನ ಪ್ರಮಾಣದಲ್ಲಿ ಬಿಡುಗಡೆ ಮಾಡುವಂತೆ ಭಾರತೀಯ ಅಧಿಕಾರಿಗಳು ಸೂಚಿಸಿದ್ದರು.

