ಅಮೆರಿಕ, ಇಸ್ರೇಲ್‌, ಯುರೋಪ್‌ ಹಡಗುಗಳಿಗೆ ಮಾತ್ರ ಹಾರ್ಮುಜ್ ಜಲಸಂಧಿ ಬಂದ್‌: ಇರಾನ್‌

1 Min Read

ನವದೆಹಲಿ: ಅಮೆರಿಕ, ಇಸ್ರೇಲ್, ಯುರೋಪ್ ಮತ್ತು ಅವುಗಳ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಹಡಗುಗಳಿಗೆ ಮಾತ್ರ ಹಾರ್ಮುಜ್ ಜಲಸಂಧಿಯನ್ನು(Strait of Hormuz) ಮುಚ್ಚಲಾಗಿದೆ ಎಂದು ಇರಾನ್‌ (Iran) ಹೇಳಿದೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ (IRGC) ಈ ನಿರ್ಧಾರವನ್ನು ಇರಾನಿನ ಸರ್ಕಾರಿ ಮಾಧ್ಯಮ IRIB ವರದಿ ಮಾಡಿದೆ.

ಅಂತರರಾಷ್ಟ್ರೀಯ ಕಾನೂನು ಮತ್ತು ಸಂಬಂಧಿತ ನಿರ್ಣಯಗಳಿಗೆ ಅನುಗುಣವಾಗಿ, ಯುದ್ಧದ ಸಮಯದಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಕ್ಕನ್ನು ಇರಾನ್ ಕಾಯ್ದಿರಿಸಿದೆ. ಜಲಮಾರ್ಗದಲ್ಲಿ ಸಂಚರಿಸುವ ಅಮೆರಿಕ, ಇಸ್ರೇಲ್, ಯುರೋಪ್ ಮತ್ತು ಅವರನ್ನು ಬೆಂಬಲಿಸುವ ಯಾವುದೇ ಹಡಗುಗಳು ಹೊಡೆದು ಹಾಕುತ್ತೇವೆ ಎಂದು IRGC ಹೇಳಿದೆ.

ಫೆ. 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ಬಳಿಕ ಈ ಜಲಸಂಧಿಯನ್ನು ಮುಚ್ಚಲಾಗಿದೆ.

 

ಮಂಗಳವಾರ ಚೀನಾ ಧ್ವಜ ಹೊಂದಿರುವ ಹಡಗುಗಳಿಗೆ ಮಾತ್ರ ಜಲಸಂಧಿಯನ್ನು ಬಳಸಲು ಅವಕಾಶ ನೀಡುವುದಾಗಿ ಇರಾನ್‌ ಹೇಳಿತ್ತು. ಇದನ್ನೂ ಓದಿ: ಇರಾನ್‌ಗೆ ನಾಯಕರಾಗಲು ಬಯಸುವ ಪ್ರತಿಯೊಬ್ಬರೂ ಸಾಯ್ತಾರೆ – ಟ್ರಂಪ್‌ ಮಾರ್ಮಿಕ ಸಂದೇಶ

ಹಾರ್ಮುಜ್ ಜಲಸಂಧಿಯನ್ನು ವಾಣಿಜ್ಯ ಸಾಗಣೆಗೆ ಇಲ್ಲಿಯವರೆಗೆ ಯಾರು ಮುಚ್ಚುವ ಸಾಹಸಕ್ಕೆ ಕೈ ಹಾಕಿರಲಿಲ್ಲ. 1980 ರಿಂದ 1988 ರ ಇರಾನ್-ಇರಾಕ್ ಯುದ್ಧದ ಸಮಯದಲ್ಲಿಯೂ ಸಹ, ತೈಲ ಟ್ಯಾಂಕರ್‌ಗಳ ಮೇಲೆ ಪದೇ ಪದೇ ದಾಳಿ ನಡೆದಿದ್ದರೂ ಸಂಚಾರಕ್ಕೆ ಯಾವುದೇ ಸಮಸ್ಯೆಯಾಗಿರಲಿಲ್ಲ.

ಇರಾನಿನ ಈ ನಿರ್ಧಾರದಿಂದ ಭಾರತಕ್ಕೆ (India) ಸಿಹಿ ಸುದ್ದಿ ಸಿಗುತ್ತಾ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಭಾರತ ಇಲ್ಲಿಯವರೆಗೆ ಇರಾನ್‌ ಪರ, ವಿರುದ್ಧವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಭಾರತ ಇರಾನ್‌ನಿಂದ ಕಚ್ಚಾ ತೈಲವನ್ನು ಖರೀದಿಸದೇ ಇದ್ದರೂ ಸೌದಿ ಅರೇಬಿಯಾ, ಯುಎಇಯಿಂದ ಕಚ್ಚಾ ತೈಲ, ಕತಾರ್‌ನಿಂದ ನೈಸರ್ಗಿಕ ಅನಿಲವನ್ನು ಖರೀದಿಸುತ್ತಿದೆ. ಯುಎಇ, ಸೌದಿ ಅರೇಬಿಯಾ, ಕತಾರ್‌ ಮೇಲೆ ಇರಾನ್‌ ದಾಳಿ ನಡೆಸುತ್ತಿದೆ. ಇವುಗಳು ಅಮೆರಿಕ ಮಿತ್ರಪಕ್ಷದಲ್ಲಿರುವ ಕಾರಣ ಈ ದೇಶಗಳಿಂದ ಬರುವ ಹಡಗುಗಳ ಕಥೆ ಏನು ಎನ್ನುವುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.

Share This Article