ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ, ವಿದೇಶಾಂಗ ಸಚಿವ ದುರ್ಮರಣ

Public TV
1 Min Read

ಟೆಹ್ರಾನ್: ಭಾನುವಾರ ಪತನಗೊಂಡಿದ್ದ ಹೆಲಿಕಾಪ್ಟರ್‌ನಲ್ಲಿದ್ದ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಸಹಿತ ಎಲ್ಲರೂ ಮೃತಪಟ್ಟಿರುವುದಾಗಿ ಇರಾನ್‌ (Iran) ಮಾಧ್ಯಮಗಳು ವರದಿ ಮಾಡಿವೆ.

ಈ ದುರ್ಘಟನೆಯಲ್ಲಿ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್, ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ, ತಬ್ರಿಜ್‌ನ ಇಮಾಮ್ ಮೊಹಮ್ಮದ್ ಅಲಿ ಅಲೆಹಶೆಮ್, ಪೈಲಟ್, ಕೋ ಪೈಲಟ್, ಸಿಬ್ಬಂದಿ ಮುಖ್ಯಸ್ಥ, ಭದ್ರತಾ ಮುಖ್ಯಸ್ಥ ಹಾಗೂ ಗನ್‌ಮ್ಯಾನ್‌ಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇರಾನ್‍ನ ವಾಯುವ್ಯ ಪರ್ವತ ಪ್ರದೇಶದ ಜೋಲ್ಫಾದಲ್ಲಿ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಪತನಗೊಂಡಿತ್ತು. ಈ ಸ್ಥಳವನ್ನು ಮಾನವರಹಿತ ವಿಮಾನ (ಯುಎವಿ) ಗುರುತಿಸಿದೆ ಎಂದು ಟರ್ಕಿಯ ಸರ್ಕಾರಿ ಸುದ್ದಿ ಸಂಸ್ಥೆ ಅನಾಡೊಲು ವರದಿ ಮಾಡಿದೆ.

ಪರ್ವತ ಶ್ರೇಣಿಗಳ ನಡುವೆ ಇಬ್ರಾಹಿಂ ರೈಸಿ ಹಾಗೂ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಹವಾಮಾನ ವೈಪ್ಯರಿತ್ಯದಿಂದ ಭಾನುವಾರ ಸಂಜೆ (ಮೆ 19) ಪತನಗೊಂಡಿತ್ತು. ಹೆಲಿಕಾಪ್ಟರ್ ಹಾರಾಟದ ಸುಮಾರು 30 ನಿಮಿಷಗಳ ನಂತರ ಸಂಪರ್ಕವನ್ನು ಕಳೆದುಕೊಂಡಿತ್ತು.

ಇಬ್ರಾಹಿಂ ರೈಸಿ ಮತ್ತು ಅಜೆರ್ಬೈಜಾನಿ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರು ಗಡಿಭಾಗದಲ್ಲಿ ಕ್ವಿಜ್ ಖಲಾಸಿ ಅಣೆಕಟ್ಟನ್ನು ಉದ್ಘಾಟಿಸಿ ಇರಾನಿನ ನಗರ ತಬ್ರಿಜ್‍ಗೆ ಹಿಂದಿರುಗುವ ಈ ಘಟನೆ ಸಂಭವಿಸಿತ್ತು.

Share This Article