ಅಬುಧಾಬಿಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು – 2 ವಿಮಾನಗಳಲ್ಲಿ 500 ಕ್ಕೂ ಹೆಚ್ಚು ಮಂದಿ ಬೆಂಗಳೂರಿಗೆ

1 Min Read

– ದುಬೈನಿಂದ ಬಂದಿಳಿದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು

ಬೆಂಗಳೂರು: ಇಸ್ರೇಲ್‌-ಇರಾನ್‌ ಯುದ್ಧದಿಂದಾಗಿ (Iran Israel War) ರದ್ದಾಗಿದ್ದ ವಿಮಾನಯಾನ ಸೇವೆ ಸೋಮವಾರ (ಮಾ.3) ದಿಂದ ಆರಂಭವಾಗಿದ್ದು, ಸಾಕಷ್ಟು ಕನ್ನಡಿಗರು ತಾಯ್ನಾಡಿಗೆ ಮರಳಿದ್ದಾರೆ. ಅಬುಧಾಬಿಯಿಂದ ಬೆಂಗಳೂರಿಗೆ ಬಂದ 2 ವಿಮಾನಗಳಲ್ಲಿ ಹಂತ ಹಂತವಾಗಿ 500 ಕ್ಕೂ ಹೆಚ್ಚು ಕನ್ನಡಿಗರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru Airport) ಬಂದಿಳಿದಿದ್ದಾರೆ.

ಸೋಮವಾರ ರಾತ್ರಿ 10 ಗಂಟೆ ಹೊತ್ತಿಗೆ ಅಬುಧಾಬಿಯಿಂದ ಬಂದ ವಿಮಾನದಲ್ಲಿ 210 ಪ್ರಯಾಣಿಕರು (ಕನ್ನಡಿಗರು) ಸೇಫಾಗಿ ಲ್ಯಾಂಡ್‌ ಆಗಿದ್ದರು. ಮಂಗಳವಾರ (ಇಂದು) ಬೆಳಗ್ಗಿನ ಜಾವ 3:20 ಕ್ಕೆ ಅಬುಧಾಬಿಯಿಂದ ಬಂದ ವಿಮಾನದಲ್ಲಿ 300 ಕ್ಕೂ ಹೆಚ್ಚು ಕನ್ನಡಿಗರು ತಾಯ್ನಾಡಿಗೆ ಮರಳಿ, ನಿಟ್ಟುಸಿರು ಬಿಟ್ಟಿದ್ದಾರೆ.

ಅಲ್ಲದೇ ದುಬೈನಲ್ಲಿ ಸಿಲುಕಿದ್ದ ಒಲಿಂಪಿಕ್ಸ್‌ ಪದಕ ವಿಜೇತೆ, ಭಾರತೀಯ ಬ್ಯಾಡ್ಮಿಂಟನ್‌ ತಾರೆ ಪಿ.ವಿ ಸಿಂಧು ಕೂಡ ದುಬೈನಿಂದ ಬೆಂಗಳೂರಿಗೆ ಸೇಫಾಗಿ ಮರಳಿದ್ದಾರೆ.

ಯುದ್ಧದ ಪರಿಸ್ಥಿತಿಯಿಂದಾಗಿ ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ದುಬೈ, ಅಬುಧಾಬಿ, ರಿಯಾದ್‌, ಜೆಡ್ಡಾ, ದೋಹಾ ಮತ್ತಿತರ ನಗರಗಳ ವಾಯುಪ್ರದೇಶಗಳನ್ನ ನಿರ್ಬಂಧಿಸಲಾಗಿತ್ತು. ಈ ಕಾರಣದಿಂದಾಗಿ ಶನಿವಾರದಿಂದ ಮಧ್ಯಪ್ರಾಚ್ಯದಿಂದ ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳ ಹಾರಾಟವನ್ನ ಸ್ಥಗಿತಗೊಳಿಸಲಾಗಿತ್ತು. ಸೋಮವಾರ (ನಿನ್ನೆ) ಬೆಳಗ್ಗೆಯಿಂದ ಪರಿಸ್ಥಿತಿ ಆಧರಿಸಿ ವಿಮಾನ ಸೇವೆ ಮರುಸ್ಥಾಪಿಸಲು ನಿರ್ಧರಿಸಲಾಗಿದೆ.

Share This Article