ಇಸ್ರೇಲ್‌ ಕೆಣಕಿ ತಪ್ಪು ಮಾಡಿತೇ ಇರಾನ್‌? – ಉಭಯ ರಾಷ್ಟ್ರಗಳ ಸೇನಾ ಸಾಮರ್ಥ್ಯ ನೋಡಿದ್ರೆ ಮೈ ನಡುಗುತ್ತೆ!

Public TV
6 Min Read

ಇಸ್ರೇಲ್‌ ಮೇಲಿನ ದಾಳಿಗೆ ಒಂದು ವರ್ಷ ಪೂರೈಸಿದೆ. ಗಾಜಾಪಟ್ಟಿಯಲ್ಲಿದ್ದ ಹಮಾಸ್‌ ಬಂಡುಕೋರರ ಗುಂಪು 2023ರ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ನಡೆಸಿದ ಅಪ್ರಚೋದಿತ ದಾಳಿ ಇಂದು ಲಕ್ಷಾಂತರ ಜನರ ನೆಮ್ಮದಿ ಕಸಿದಿದೆ. ಸಾವಿರಾರು ಜನರ ಜೀವ ತೆಗೆದಿದೆ. ಕಳೆದ ಒಂದು ವರ್ಷದಲ್ಲಿ ಇಸ್ರೇಲ್‌, ಹಮಾಸ್‌ ಹಾಗೂ ಹಿಜ್ಬುಲ್ಲಾ ನಡುವಿನ ಭೀಕರ ಯುದ್ಧದಲ್ಲಿ ಸುಮಾರು 50 ಸಾವಿರ ಮಂದಿ ಜೀವ ಕಳೆದುಕೊಂಡಿದ್ದಾರೆ.

ಆ ದಿನ ಕೇವಲ 20 ನಿಮಿಷದ ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ಪುಂಖಾನುಪುಂಖವಾಗಿ 5 ಸಾವಿರ ರಾಕೆಟ್‌ಗಳನ್ನು ಹಾರಿಸಿದ್ದರು. ಇಸ್ರೇಲ್‌ನ ಬಲಾಢ್ಯ ಕ್ಷಿಪಣಿ ವಿರೋಧಿ ವ್ಯವಸ್ಥೆ ಐರನ್‌ ಡೋಮ್‌ ಇಷ್ಟು ಅಗಾಧ ಪ್ರಮಾಣದ ರಾಕೆಟ್‌ ಮಳೆಗೆ ನಿಷ್ಪರಿಣಾಮಕಾರಿ ಎನ್ನಿಸಿಕೊಂಡಿತು. ಅಲ್ಲದೇ, ಹಮಾಸ್‌ 1,000ಕ್ಕೂ ಅಧಿಕ ಉಗ್ರರೊಂದಿಗೆ ದಕ್ಷಿಣ ಇಸ್ರೇಲ್‌ನ ಅನೇಕ ಪ್ರದೇಶಗಳಲ್ಲಿ ಭೂದಾಳಿ ನಡೆಸಿತು. ಬುಲ್ಡೋಜರ್‌ನಿಂದ ಇಸ್ರೇಲ್‌ನ ಗಡಿಯನ್ನು ಛಿದ್ರಗೊಳಿಸಿತು. ಇನ್ನೂ ಹಲವು ಉಗ್ರರು ಸಮುದ್ರ ಮಾರ್ಗದಲ್ಲಿ ಸ್ಪೀಡ್‌ ಬೋಟ್‌ಗಳ ಮೂಲಕ ಇಸ್ರೇಲನ್ನು ನುಸುಳಿದರು ಕೆಲವರು ಪ್ಯಾರಾಗ್ಲೈಡಿಂಗ್‌ ಮೂಲಕ ಇಸ್ರೇಲೊಳಗಿಳಿದು ರಂಪಾಟ ಎಬ್ಬಿಸಿದರು. ಈ ಏಕಕಾಲದ ಆಕ್ರಮಣ ನಿಲ್ಲಿಸಲು ಇಸ್ರೇಲ್‌ಗೆ ಆ ಕ್ಷಣಕ್ಕೆ ಸಾಧ್ಯವಾಗಲೇ ಇಲ್ಲ.

ಪರಿಣಾಮ, ಇಸ್ರೇಲ್‌ ತನ್ನ 1200 ಪ್ರಜೆಗಳನ್ನು ಕಳೆದುಕೊಂಡಿತು. ಹಮಾಸ್‌ನ ಜೀಪುಗಳಲ್ಲಿ ಕೈಕಾಲು ಕಟ್ಟಿ ಕರೆದೊಯ್ದ 250 ಇಸ್ರೇಲಿಗರನ್ನು ಬಿಡಿಸಿಕೊಳ್ಳಲು ಇಸ್ರೇಲ್‌ ಅಂದು ಶುರುಮಾಡಿದ ಯುದ್ಧ ಇಂದಿಗೂ ಮುಗಿದಿಲ್ಲ. ಸದ್ಯಕ್ಕೆ ಮುಗಿಯುವ ಲಕ್ಷಣವೂ ಕಾಣಿಸುತ್ತಿಲ್ಲ. ಹಮಾಸ್‌ ಒಬ್ಬರಲ್ಲ ಅದರ ಹಿಂದೆ ಪ್ಯಾಲೆಸ್ತೀನ್‌, ಹಿಜ್ಬುಲ್ಲಾ, ಲೆಬನಾನ್‌, ಇರಾಕ್‌ ಹಾಗೂ ಸಿರಿಯಾದ ಉಗ್ರ ಸಂಘಟನೆಗಳು, ಹೌತಿ ಬಂಡುಕೋರರು… ಇಸ್ರೇಲನ್ನು ಕಟ್ಟಿಹಾಕಲು ಶತ್ರುಗಳೆಲ್ಲ ಒಗ್ಗೂಡುತ್ತಲೇ ಇದ್ದಾರೆ. ಇರಾನ್‌ನ ಸುಪ್ರೀಂ ಲೀಡರ್‌ ಕೂಡ ಇಸ್ರೇಲ್‌ ಸೋಲಿಸಲು ಇತ್ತೀಚೆಗೆ ಕರೆ ಕೊಟ್ಟಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಈಗ ಇಸ್ರೇಲ್‌ ದಿನದಿಂದ ದಿನಕ್ಕೆ ತನ್ನ ಆಕ್ರಮಣದ ತೀವ್ರತೆಯನ್ನು ಹೆಚ್ಚಿಸುತ್ತಲೇ ಇದೆ. ಭಾನುವಾರ (ಅ.6) ಕೂಡ ಕೇವಲ ಒಂದು ಗಂಟೆ ಅವಧಿಯಲ್ಲಿ 120 ಹಿಜ್ಬುಲ್ಲಾ ಉಗ್ರ ನೆಲೆಗಳನ್ನು ಧ್ವಂಸಮಾಡಿದೆ.

ಇರಾನ್‌ ಯುದ್ಧಕ್ಕೆ ಎಂಟ್ರಿಯಾಗಿದ್ದು ಹೇಗೆ?

ಹಿಜ್ಬುಲ್ಲಾ ಸೇನೆಯ ಮುಖ್ಯಸ್ಥ ಹಸನ್‌ ನಸ್ರಲ್ಲಾನನ್ನೂ ಇಸ್ರೇಲ್‌ ಹತ್ಯೆಗೈದಾಗ ಪರೋಕ್ಷವಾಗಿ ಇವರನ್ನೆಲ್ಲ ಬೆಂಬಲಿಸುತ್ತಿದ್ದ ಇರಾನ್‌ ನೇರವಾಗಿ ಇಸ್ರೇಲ್‌ ವಿರುದ್ಧ ತೊಡೆ ತಟ್ಟಿತ್ತು. ಏಕಾಏಕಿ 180ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿ, ಇಸ್ರೇಲನ್ನು ಗಾಬರಿಗೊಳಿಸಲೂ ಇರಾನ್‌ ಯತ್ನಿಸಿದ್ದು ಸ್ವತಃ ಇಸ್ರೇಲನ್ನು ಮತ್ತಷ್ಟು ಕೆರಳಿಸಿದೆ. ಆದ್ರೆ ಇಸ್ರೇಲ್‌ ಕ್ಷಿಪಣಿ ಹಾರಿಸುವುದಕ್ಕೆ 2 ಗಂಟೆ ಮುಂಚಿತವಾಗಿಯೇ ಅಮೆರಿಕ ದಾಳಿಯ ಸುಳಿವು ಕೊಟ್ಟಿತ್ತು ಎಂಬುದು ಗಮನಾರ್ಹ. ಹಾಗಾಗಿ ಈ ಯುದ್ಧದ ಬೆಂಕಿಗೆ ತುಪ್ಪ ಸವರುವಂತೆ ಅತ್ತ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ʻಇರಾನ್‌ನ ಅಣ್ವಸ್ತ್ರ ಕೇಂದ್ರದ ದಾಳಿ ಮಾಡಿ,ʼ ಎಂಬ ಸಲಹೆಯನ್ನು ಇಸ್ರೇಲ್‌ಗೆ ಕೊಟ್ಟಿರುವುದು ಯುದ್ಧದ ತೀವ್ರತೆಯನ್ನು ತೆರೆದಿಟ್ಟಿದೆ.

ಸ್ನೇಹಿತರಾಗಿದ್ದವರೀಗ ಬದ್ಧ ವೈರಿಗಳು

ಹೌದು. 1948ರ ಮೇ 14. ಪ್ಯಾಲೆಸ್ತೀನ್‌ನಿಂದ ಇಸ್ರೇಲ್‌ ಬೇರ್ಪಟ್ಟು ಹೊಸ ಯಹೂದಿ ದೇಶ ಉದಯವಾಯಿತು. ಆ ಸಮಯದಲ್ಲಿ ಇಸ್ರೇಲ್‌ ಎಂಬ ಶಿಶುವಿನ ಜತೆಗೆ ನಿಂತ ಏಕೈಕ ಇಸ್ಲಾಮಿಕ್‌ ರಾಷ್ಟ್ರ ಇರಾನ್‌. 1948ರಲ್ಲಿ ಅರಬ್‌ ರಾಷ್ಟ್ರಗಳು ಇಸ್ರೇಲ್‌ ವಿರುದ್ಧ ಯುದ್ಧ ಆರಂಭಿಸಿದರೂ, ಆ ಯುದ್ಧದಲ್ಲಿ ಇರಾನ್‌ ಭಾಗವಹಿಸಲಿಲ್ಲ. ಇಸ್ರೇಲ್‌ ಗೆದ್ದ ಬಳಿಕ ಇರಾನ್‌ ಅದರೊಂದಿಗೆ ಸಂಬಂಧ ಬೆಸೆಯಿತು. ಇರಾನ್‌ನಲ್ಲಿ ಮೊಹಮ್ಮದ್‌ ರಜಾ ಶಾ ಪಹ್ಲವಿ ಆಳ್ವಿಕೆಯಲ್ಲಿ ಈ ಎರಡೂ ರಾಷ್ಟ್ರಗಳು ಮಿತ್ರರು. ಆ ವೇಳೆ, ಪಶ್ಚಿಮ ಏಷ್ಯಾದಲ್ಲಿ ಇರಾನ್‌ ಅತಿದೊಡ್ಡ ಯಹೂದಿ ಸಮುದಾಯಕ್ಕೆ ನೆಲೆ ಕಲ್ಪಿಸಿದ್ದ ರಾಷ್ಟ್ರ. ಉಭಯ ದೇಶಗಳ ನಡುವೆ ಆಮದು ಮತ್ತು ರಫ್ತು ವ್ಯವಹಾರ ಜೋರಾಗಿತ್ತು. ಇಸ್ರೇಲ್‌ ತನ್ನಲ್ಲಿನ ಶಸ್ತ್ರಾಸ್ತ್ರ ತಂತ್ರಜ್ಞಾನ ಮತ್ತು ಕೃಷಿ ಉತ್ಪನ್ನಗಳನ್ನು ಇರಾನ್‌ಗೆ ಕಳುಹಿಸುತ್ತಿದ್ದರೆ, ಅದಕ್ಕೆ ಪ್ರತಿಯಾಗಿ ಇರಾನ್‌ ಶೇ.40ರಷ್ಟು ತೈಲವನ್ನು ಇಸ್ರೇಲ್‌ಗೆ ನೀಡುತ್ತಿತ್ತು. ಇಷ್ಟೇ ಅಲ್ಲ, ಇರಾನ್‌ನ ಗುಪ್ತಚರ ಸಂಸ್ಥೆ SAVAK, ತರಬೇತಿ ಪಡೆದಿದ್ದೇ ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್‌ನ ಕೈಯಲ್ಲಿ ಅನ್ನೋದು ವಿಶೇಷ.

ಆದ್ರೆ 1960ರ ದಶಕದಲ್ಲಿ, ಇರಾನ್‌ನಲ್ಲಿ ಇಸ್ಲಾಮಿಕ್‌ ರಾಷ್ಟ್ರದ ಬೇಡಿಕೆ ತೀವ್ರವಾಯಿತು. ಧಾರ್ಮಿಕ ನಾಯಕ ಅಯಾತೊಲ್ಲಾ ರುಹೊಲ್ಲಾ ಖಮೇನಿ ಇರಾನ್‌ ಅನ್ನು ಮುಸ್ಲಿಂ ರಾಷ್ಟ್ರವನ್ನಾಗಿಸಲು ಹೋರಾಟ ತೀವ್ರಗೊಳಿಸಿದ. 1964ರಲ್ಲಿ ಈ ಧ್ವನಿಗೆ ಅಪಾರ ಜನಬೆಂಬಲ ವ್ಯಕ್ತವಾದಾಗ ರಜಾ ಶಾ ಪಹ್ಲವಿಗೆ ಇರಾನನ್ನು ತೊರೆಯುವಂತೆ ಖಮೇನಿ ಆದೇಶಿಸಿದ. ಕಡೆಗೂ 1969ರಲ್ಲಿ ಪಹ್ಲವಿಯನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. ಇದರೊಂದಿಗೆ ಇರಾನ್‌ನಲ್ಲಿ ಇಸ್ಲಾಮಿಕ್‌ ರಾಜ್ಯ ಸ್ಥಾಪನೆಯಾಯಿತು. ಷರಿಯಾ ಕಾನೂನೂ ಜಾರಿಗೆ ಬಂತು. ಇದರೊಂದಿಗೆ ಇರಾನ್‌ನ ಖಮೇನಿ ಸರ್ಕಾರವು ಯಹೂದಿ ರಾಜ್ಯವಾದ ಇಸ್ರೇಲ್‌ನೊಂದಿಗೆ ಎಲ್ಲನಂಟನ್ನೂ ಕಡಿದುಕೊಂಡಿತು. ಉಭಯ ದೇಶಗಳ ನಡುವಿನ ವಿಮಾನ ಮಾರ್ಗವನ್ನೇ ಸಂಪೂರ್ಣವಾಗಿ ಮುಚ್ಚಲಾಯಿತು.

ಇಸ್ರೇಲ್‌-ಇರಾನ್‌ ಸೇನಾಬಲ ಮೈ ನಡುಗಿಸುತ್ತೆ

ಇಸ್ರೇಲ್‌ ಶಕ್ತಿಶಾಲಿ ರಾಷ್ಟ್ರವೇ ಆದರೂ ಇರಾನ್‌ ಸಹ ಸರಿಸಮನಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಹಾಗಾಗಿ ಮಿಲಿಟರಿ ಶಕ್ತಿಯಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಕಡಿಮೆಯೇನಿಲ್ಲ ಅಂತಲೇ ಹೇಳಬಹುದು. ಇತ್ತೀಚಿನ ಗ್ಲೋಬಲ್‌ ಫೈರ್‌ ವರದಿ ಪ್ರಕಾರ, ವಾಯು ಸೇನೆ ಮತ್ತು ರಕ್ಷಣಾ ವ್ಯವಸ್ಥೆಯಲ್ಲಿ ಇರಾನ್‌ 14ನೇ ಸ್ಥಾನದಲ್ಲಿದ್ದರೆ, ಇಸ್ರೇಲ್‌ 17ನೇ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಲಾಗಿದೆ.

ರಕ್ಷಣಾ ಬಲ ಹೇಗಿದೆ ನೋಡಿ?

ಇರಾನ್‌ 1996 ಟ್ಯಾಂಕ್‌ಗಳನ್ನು ಹೊಂದಿದೆ, ಅವುಗಳಲ್ಲಿ 1397 ಪ್ರಸ್ತುತ ಯುದ್ಧಕ್ಕೆ ಸಿದ್ಧವಾಗಿವೆ. ಇಸ್ರೇಲ್ 1,370 ಟ್ಯಾಂಕ್‌ಗಳನ್ನು ಹೊಂದಿದೆ, ಅವುಗಳಲ್ಲಿ 1,096 ಯುದ್ಧಕ್ಕೆ ಸಿದ್ಧವಾಗಿವೆ. ಇರಾನ್ 65,765 ಮಿಲಿಟರಿ ವಾಹನಗಳನ್ನು ಹೊಂದಿದ್ದು, ಅದರಲ್ಲಿ 46 ಸಾವಿರಕ್ಕೂ ಹೆಚ್ಚು ಸಕ್ರಿಯವಾಗಿವೆ. ಇನ್ನೂ ಇಸ್ರೇಲ್ 43,407 ಮಿಲಿಟರಿ ವಾಹನಗಳನ್ನು ಹೊಂದಿದೆ, ಅದರಲ್ಲಿ 34,736 ಸಕ್ರಿಯವಾಗಿವೆ. ಸ್ವಯಂ ಚಾಲಿತ ಪಿರಂಗಿಗಳ ಬಗ್ಗೆ ನೋಡಿದ್ರೆ, ಇರಾನ್‌ 580 ಫಿರಂಗಿ ಹೊಂದಿದ್ದು, ಅದರಲ್ಲಿ 406 ಸಕ್ರಿಯ ಸೇವೆಯಲ್ಲಿವೆ. ಇಸ್ರೇಲ್ 650 ಸ್ವಯಂ ಚಾಲಿತ ಫಿರಂಗಿಗಳನ್ನು ಹೊಂದಿದ್ದು, ಅದರಲ್ಲಿ 540 ಯುದ್ಧಕ್ಕೆ ಸಿದ್ಧವಾಗಿದೆ. ಸ್ವಯಂಚಾಲಿತವಲ್ಲದ ಫಿರಂಗಿಗಳಲ್ಲಿ ಇರಾನ್ 2050, ಇಸ್ರೇಲ್ ಕೇವಲ 300 ಹೊಂದಿದೆ. ಇಲ್ಲದೇ ಮಲ್ಟಿ ರಾಕೆಟ್‌ ಲಾಂಚರ್‌ಗಳ ಪೈಕಿ ಇರಾನ್‌ ಬಳಿ 775 ಮಲ್ಟಿ ಲಾಂಚರ್‌ ಇದ್ದರೆ, ಇಸ್ರೇಲ್‌ ಬಳಿ ಕೇವಲ 150 ರಾಕೆಟ್‌ ಲಾಂಚರ್‌ಗಳಿವೆ.

ಸೈನಿಕರ ಬಲದಲ್ಲಿ ಇರಾನ್‌ 11.80 ಲಕ್ಷ ಸೈನಿಕರನ್ನು ಹೊಂದಿದೆ. ಈ ಪೈಕಿ 3.50 ಲಕ್ಷ ಮೀಸಲು ಸೇನಾ ಪಡೆ, 2.20 ಲಕ್ಷ ಸೈನಿಕರ ಪ್ಯಾರಾ ಮಿಲಿಟರಿ ಪಡೆಯನ್ನು ಹೊಂದಿದೆ. ಇಸ್ರೇಲ್‌ 6.70 ಲಕ್ಷ ಸೈನಿಕರ ಬಲ ಹೊಂದಿದೆ. ಈ ಪೈಕಿ ಇಸ್ರೇಲ್ 4.65 ಲಕ್ಷ ಮೀಸಲು ಪಡೆ, 35 ಸಾವಿರ ಪ್ಯಾರಾ ಮಿಲಿಟರಿ ಪಡೆ ಸೈನಿಕರನ್ನು ಹೊಂದಿದೆ. ಇದಲ್ಲದೇ ಇರಾನ್‌ ಬಳಿ 42 ಸಾವಿರ ಜೆಟ್‌ಮೆನ್‌ಗಳಿದ್ದರೆ, ಇಸ್ರೇಲ್‌ 89 ಸಾವಿರ ಜೆಟ್‌ಮೆನ್‌ ಬಲ ಹೊಂದಿದೆ. ಜೊತೆಗೆ ಇರಾನ್ ಒಟ್ಟು 18,500 ನೌಕಾ ಸಿಬ್ಬಂದಿ ಹೊಂದಿದ್ದರೆ, ಇಸ್ರೇಲ್ 19,500 ನೌಕಾದಳ ಸಿಬ್ಬಂದಿಯನ್ನು ಹೊಂದಿದೆ.

ವಾಯುಪಡೆಯಲ್ಲಿ ಆನೆ ಬಲ

ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಇಸ್ರೇಲ್‌ ಇರಾನ್‌ಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ. ಇರಾನ್‌ ಬಳಿ 551 ವಿಮಾನಗಳನ್ನು ಹೊಂದಿದ್ದು, ಅದರಲ್ಲಿ 358 ಸಕ್ರಿಯವಾಗಿವೆ. ಆದ್ರೆ ಇಸ್ರೇಲ್ 612 ಮೀಸಲು ಹೊಂದಿದ್ದು, 490 ವಿಮಾನ ಸಕ್ರಿಯವಾಗಿದೆ. ಇರಾನ್ 186 ಯುದ್ಧ ವಿಮಾನ ಹೊಂದಿದ್ದು, ಈ ಪೈಕಿ 121 ಮಂದಿ ಸದಾ ದಾಳಿಗೆ ಸಿದ್ಧರಾಗಿದ್ದಾರೆ. ಇಸ್ರೇಲ್ 241 ಯುದ್ಧವಿಮಾನಗಳನ್ನು ಹೊಂದಿದ್ದು, ಅದರಲ್ಲಿ 193 ದಾಳಿಗೆ ಸಿದ್ಧವಾಗಿವೆ.

ಇಸ್ರೇಲ್‌ನ ಸೈಬರ್‌ ಅಸ್ತ್ರಗಳೇ ಇರಾನ್‌ಗೆ ಸವಾಲು

* 2010ರ ಸುಮಾರಿಗೆ ಇರಾನ್‌ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿರುವುದನ್ನು ಗಮನಿಸಿದ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌, ಶತ್ರುರಾಷ್ಟ್ರದ ಒಂದೊಂದು ಹೆಜ್ಜೆಯನ್ನು ವಿಫಲಗೊಳಿಸತೊಡಗಿತು. ಮುಖ್ಯವಾಗಿ ಇಸ್ರೇಲ್‌ ನೀಡಿದ ಸೈಬರ್‌ ದಾಳಿಯ ಏಟುಗಳಿಗೆ ಇರಾನ್‌ ಹೈರಾಣಾಯಿತು.
* 2010, ಜೂನ್‌: ಬುಶೆಹರ್‌ ಪರಮಾಣು ಸ್ಥಾವರ ಕಂಪ್ಯೂಟರ್‌ಗಳು ಸ್ಟಕ್ಸ್ನೆಟ್ ವೈರಸ್‌ನ ದಾಳಿಗೆ ಗುರಿಯಾದವು. ಇದು 14 ಸ್ಥಾವರಗಳ 30 ಸಾವಿರಕ್ಕೂ ಹೆಚ್ಚು ಕಂಪ್ಯೂಟರ್‌ಗಳ ಮೇಲೆ ಪರಿಣಾಮ ಬೀರಿತು. ಇದರ ಹಿಂದೆ ಮೊಸಾದ್‌ ಕೈವಾಡ ಇದೆಯೆನ್ನುವುದು ಇರಾನ್‌ ಆರೋಪ.
* 2011, ಏಪ್ರಿಲ್‌: ಇರಾನ್‌ನ ಭದ್ರತಾ ಸಂಸ್ಥೆಯ ಮುಖ್ಯಸ್ಥ ಘೋಲಮ್ರೆಜಾ ಜಲಾಲಿ ಪ್ರಕಾರ, ಇಸ್ರೇಲ್‌ ಸೃಷ್ಟಿಸಿದ ‘ಸ್ಟಾರ್ಸ್‌’ ಹೆಸರಿನ ವೈರಸ್‌ ಇರಾನ್‌ನ ಸರ್ಕಾರಿ ದಾಖಲೆಗಳನ್ನೇ ನಕಲು ಮಾಡಿತು.
* 2012, ಏಪ್ರಿಲ್‌: ವೈಪರ್‌ ಮಾಲ್ವೇರ್‌ ಇರಾನ್‌ನ ಪೆಟ್ರೋಲಿಯಂ ಸಚಿವಾಲಯ ಮತ್ತು ನ್ಯಾಷನಲ್‌ ಇರಾನಿಯನ್‌ ಆಯಿಲ್‌ ಕಂಪನಿಯ ಕಂಪ್ಯೂಟರ್‌ಗಳಲ್ಲಿದ್ದ ಡೇಟಾವನ್ನೆಲ್ಲ ಅಳಿಸಿಹಾಕಿತ್ತು. ಹೀಗೆ ಇನ್ನೂ ಅನೇಕ ಉದಾಹರಣೆಗಳಿವೆ.

ಕದನ ವಿರಾಮಕ್ಕೂ ಕ್ಯಾರೆ ಎನ್ನದೇ ಯುದ್ಧದಲ್ಲಿ ಮುನ್ನುಗ್ಗುತ್ತಿರುವ ಇಸ್ರೇಲ್‌ ಒಂದು ಕಡೆಯಾದ್ರೆ, ಇಸ್ರೇಲ್‌ ಅನ್ನೂ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಅದರ ಶತ್ರು ರಾಷ್ಟ್ರಗಳು ಮತ್ತೊಂದು ಕಡೆ ಇದೆ. ಇದರ ತಾರ್ಕಿತ ಅಂತ್ಯ ಎಲ್ಲಿಗೆ ಒಯ್ಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Share This Article