ಇರಾನ್ ಅಧ್ಯಕ್ಷ ರೈಸಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

Public TV
1 Min Read

ನವದೆಹಲಿ/ಟೆಹ್ರಾನ್: ದುರಂತಕ್ಕೀಡಾದ ಹೆಲಿಕಾಪ್ಟರ್ ನಲ್ಲಿದ್ದ ಇರಾನ್ (Iran Helicopter Tragedy) ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Risi) ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಈ ಸಂಬಂಧ ಎಕ್ಸ್ ಮಾಡಿರುವ ಪ್ರಧಾನಿ ಮೋದಿ (Narendra Modi), ಇರಾನ್‍ನ ಅಧ್ಯಕ್ಷ ಡಾ. ಸೈಯದ್ ಇಬ್ರಾಹಿಂ ರೈಸಿ ಅವರ ದುರಂತ ನಿಧನದಿಂದ ತೀವ್ರ ದುಃಖ ಮತ್ತು ಆಘಾತವಾಗಿದೆ. ಭಾರತ-ಇರಾನ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಅವರ ಕೊಡುಗೆ ಯಾವಾಗಲೂ ಸ್ಮರಣೀಯವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಇರಾನ್‍ನ ಜನರು ಈ ದುಃಖದ ಸಮಯದಲ್ಲಿ ಇರಾನ್‍ನೊಂದಿಗೆ ನಿಂತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಘಟನೆ ವಿವರ: ಭಾನುವಾರ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಅಜರ್ ಬೈಜಾನ್‍ನ ಗಡಿಗೆ ಭೇಟಿ ನೀಡಿ ಹಿಂದಿರುಗುವ ಮಾರ್ಗದಲ್ಲಿ ಪರ್ವತ ಪ್ರದೇಶವನ್ನು ದಾಟುತ್ತಿದ್ದಾಗ ದಟ್ಟ ಮಂಜಿನಿಂದಾಗಿ ಪತನವಾಗಿತ್ತು.‌ ಇದನ್ನೂ ಓದಿ: ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ, ವಿದೇಶಾಂಗ ಸಚಿವ ದುರ್ಮರಣ

ಕಡಿದಾದ ಪರ್ವತ ಶ್ರೇಣಿಯ ಕಣಿವೆ ಭಾಗದಲ್ಲಿ ಪ್ರತಿಕೂಲ ವಾತಾವರಣದ ನಡುವೆ ಹಲವು ಗಂಟೆಗಳ ಶೋಧ ಕಾರ್ಯದ ಬಳಿಕ ಡ್ರೋನ್ ಮೂಲಕ ಪತನಗೊಂಡ ಹೆಲಿಕಾಪ್ಟರ್ ಅವಶೇಷ ಪತ್ತೆ ಮಾಡಲಾಗಿತ್ತು. ಹೆಲಿಕಾಪ್ಟರ್ ಸುಟ್ಟು ಭಸ್ಮವಾಗಿದೆ ಎಂದು ಅಧಿಕಾರಿ ತಿಳಿಸಿದ್ದರು.

ಅಧ್ಯಕ್ಷ ರೈಸಿ ಹಾಗೂ ವಿದೇಶಾಂಗ ಸಚಿವ ಹೊಸೈನ್ ಸೇರಿದಂತೆ ಹೆಲಿಕಾಪ್ಟರ್ ನಲ್ಲಿದ್ದ ಎಲ್ಲ 9 ಮಂದಿ ಬಲಿಯಾಗಿದ್ದಾರೆ. ಈ ಹೆಲಿಕಾಪ್ಟರ್ ನಲ್ಲಿ ಪೂರ್ವ ಅಜರ್‍ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ, ಮೂವರು ಇರಾನ್ ಅಧಿಕಾರಿಗಳು ಹಾಗೂ ಭದ್ರತಾ ತಂಡದ ಸದಸ್ಯರಿದ್ದು, ಎಲ್ಲರೂ ಮೃತಪಟ್ಟಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

Share This Article