ಸಿದ್ದು ಫುಲ್ ಟರ್ಮ್ ಸಿಎಂ ಅಸ್ತ್ರಕ್ಕೆ ಡಿಕೆಶಿ ನೆಕ್ಸ್ಟ್ ಸಿಎಂ ಬ್ರಹ್ಮಾಸ್ತ್ರ: ಸಂಖ್ಯಾಬಲ ಡಿಸಿಎಂಗೆ ಇದೆ – ಇಕ್ಬಾಲ್ ಹುಸೇನ್

Public TV
2 Min Read

ಬೆಂಗಳೂರು: ಸಿದ್ದು (Siddaramaiah) ಫುಲ್ ಟರ್ಮ್ ಸಿಎಂ ಅಸ್ತ್ರಕ್ಕೆ ಡಿಕೆಶಿ (DK Shivakumar) ನೆಕ್ಸ್ಟ್ ಸಿಎಂ ಬ್ರಹ್ಮಾಸ್ತ್ರ ಬಿಡುತ್ತಾರೆ. ಡಿಸಿಎಂ ಡಿಕೆಶಿಗೆ ಸಂಖ್ಯಾಬಲ ಜಾಸ್ತಿಯಿದೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಬಾಂಬ್ ಸಿಡಿಸಿದ್ದಾರೆ.

ಹೌದು, ರಾಜ್ಯ ಕಾಂಗ್ರೆಸ್‌ನಲ್ಲಿ ನೀವು ಮಾತಾಡಿದರೆ ನಾವು ಮಾತನಾಡುತ್ತೇವೆ ಎಂಬ ಮುಯ್ಯಿಗೆ ಮುಯ್ಯಿ ಪಾಲಿಟಿಕ್ಸ್ ಶುರುವಾಗಿದೆ. ಸಿದ್ದು ಟೀಂ ಮೇಲೆ ಇಕ್ಬಾಲ್ ಹುಸೇನ್ ಬಲಾಬಲ ಬ್ರಹ್ಮಾಸ್ತ್ರ ಬಿಟ್ಟಿದ್ದಾರೆ. ಇತ್ತ ಸುರ್ಜೇವಾಲಾ ವಾರ್ನ್ ಮಾಡಿದ್ದು, ನೀವು ಕೈ ಹಿಡಿದು ನಿಂತಿದ್ದು ಸರಿ. ನಿಮ್ಮ ಆಪ್ತರ ರಿಪೇರಿ ಯಾವಾಗ ಎಂದು ಪ್ರಶ್ನಿಸಿದ್ದಾರೆ.

ಯಾರೇ ಕೂಗಾಡಲಿ, ಯಾರೇ ವಾರ್ನ್ ಮಾಡ್ಲಿ, ನಾವ್ ಏನ್ ಹೇಳ್ಬೇಕೋ ಹೇಳ್ತೀವಿ. ಇದು ಕಾಂಗ್ರೆಸ್ ಒಳಗಿನ ಎಸ್‌ಟೀಂ, ಡಿಟೀಂ, ಡಿಸಿಎಂ ಸಿಎಂ ಆಗ್ಬೇಕು, ಆಗುತ್ತಾರೆ ಎಂದು ಇಕ್ಬಾಲ್ ಹುಸೇನ್ ತುಪ್ಪ ಸುರಿಯುತ್ತಲೇ ಇದ್ದಾರೆ. ಸಿದ್ದರಾಮಯ್ಯ ಆಪ್ತ ಸಚಿವರು, ಶಾಸಕರು ಫುಲ್ ಟರ್ಮ್ ಸಿಎಂ ಅಸ್ತ್ರಕ್ಕೆ ಡಿಕೆಶಿ ನೆಕ್ಸ್ಟ್‌ ಸಿಎಂ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ್ದಾರೆ ಎಂದಿದ್ದಾರೆ.

ರಾಮನಗರದಲ್ಲಿ ಇಕ್ಬಾಲ್ ಹುಸೇನ್ ಮಾತನಾಡಿ, ಕ್ರಾಂತಿ ಹೇಳಿದವರೇ ಡೇಟ್ ಕೊಟ್ಟಿದ್ದಾರೆ, ಡಿಸಿಎಂ ಸಿಎಂ ಆಗುವ ಕಾಲ ಹತ್ತಿರ ಇದೆ. ಶಾಸಕರ ಸಂಖ್ಯಾಬಲವೂ ಇದೆ ಎಂದು ಬಾಂಬ್ ಹಾಕಿದ್ದಾರೆ. ಇನ್ನೊಂದೆಡೆ ಸಿಎಂ ಆಪ್ತ ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಸಿದ್ದರಾಮಯ್ಯ ಬದಲಾಗಲ್ಲ, ಫುಲ್ ಟರ್ಮ್ ಸಿಎಂ ಎಂದಿದ್ದಾರೆ. ಆದರೆ ಯಾರ ಸಹವಾಸವೂ ಬೇಡ, ಸಿದ್ದು, ಡಿಕೆಶಿ ನಮ್ಮ ಎರಡು ಕಣ್ಣು, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಶಾಸಕ ನಂಜೇಗೌಡ ಜಾಣತನದ ಹೇಳಿಕೆ ಕೊಟ್ಟಿದ್ದಾರೆ.

ಅಂದಹಾಗೆ ಸೋಮವಾರ ಸುರ್ಜೇವಾಲಾ ನೇತೃತ್ವದಲ್ಲಿ ಸಿಎಂ, ಡಿಸಿಎಂ ಸಭೆ ನಡೆಯಿತು. ಸಭೆಯಲ್ಲಿ ಸಿಎಂ, ಡಿಸಿಎಂ ಆಪ್ತರಿಗೆ ಬಿಸಿ ಮುಟ್ಟಿಸುವ ಸಂದೇಶ ಹೊರಬಿತ್ತು ಎನ್ನಲಾಗಿದೆ. ಮೈಸೂರು ಏರ್‌ಪೋರ್ಟ್ನಲ್ಲಿ ನಡೆದ ಘಟನೆಯ ವಿಡಿಯೋ ಬಗ್ಗೆ ಸುರ್ಜೇವಾಲಾ ಸಭೆಯಲ್ಲಿ ಪ್ರಸ್ತಾಪ ಆಗಿದೆ.

ಸಿದ್ದರಾಮಯ್ಯ ಡಿಕೆಶಿಯ ಕೈ ಎತ್ತಿ ಹಿಡಿದ ವಿಡಿಯೋ ಬಗ್ಗೆ ಪ್ರಸ್ತಾಪಿಸಿ, ನಾನು ವಿಡಿಯೋ ನೋಡಿದೆ, ಕೆಪಿಸಿಸಿ ಕಚೇರಿಯಲ್ಲಿ ತೋರಿಸಿದರು. ಒಳ್ಳೆಯ ಬೆಳವಣಿಗೆ. ನೀವಿಬ್ಬರು ಒಗ್ಗಟ್ಟು ಪ್ರದರ್ಶಿಸಿದ್ದು ಓಕೆ, ಆದರೆ ಕೆಲ ಮಿನಿಸ್ಟರ್ಸ್, ಶಾಸಕರು ಗೊಂದಲದ ಹೇಳಿಕೆಗಳು ಯಾಕೆ? ಎಂದು ಸುರ್ಜೇವಾಲಾ ಪ್ರಶ್ನಿಸಿದ್ರು ಎನ್ನಲಾಗಿದೆ. ಮೊದಲು ಅವರನ್ನ ಸರಿಮಾಡಬೇಕಿದೆ, ನೀವು ನಿಮ್ಮ ಆಪ್ತರನ್ನ ಎಂಟರ್ಟೈನ್ ಮಾಡ್ಬೇಡಿ. ಆಪ್ತರಿಗೆ ನೀವು ಬುದ್ಧಿ ಹೇಳಿ ಎಂದಿದ್ದಾರೆ. ನಾವು ವಾರ್ನ್ ಮಾಡುತ್ತೇವೆ, ನಾವು ಎಂಟರ್ಟೈನ್ ಮಾಡಲ್ಲ, ಮಾತಾಡ್ತೀವಿ ಎಂದು ಸಿಎಂ, ಡಿಸಿಎಂ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಮಾತನಾಡಿ ಕಾಂಗ್ರೆಸ್ ಒಳಗೆ ಕದನಕ್ಕೆ ಮುನ್ನುಡಿ ಬರೆದಿದ್ದ ರಾಜಣ್ಣ ಈಗ ಸೈಲೆಂಟ್ ಆಗಿದ್ದಾರೆ. ಇವತ್ತು ಏನನ್ನೂ ಮಾತನಾಡದೇ ಮೌನಕ್ಕೆ ಶರಣಾಗಿದ್ದಾರೆ. ಒಟ್ನಲ್ಲಿ ಡಿಕೆಶಿ ಆಪ್ತ ಶಾಸಕನಿಂದ ಮತ್ತೆ ಬಹಿರಂಗ ಹೇಳಿಕೆ ಹೊರಬಿದ್ದಿದ್ದು, ಯಾರೂ ಹೇಳಿದ್ರೂ ನಿಲ್ಲೋದಿಲ್ಲವಾ? ಸೆಪ್ಟೆಂಬರ್ ಕ್ರಾಂತಿಗೂ ಮುನ್ನವೇ ಬಲಾಬಲ ಆಟ ನಡೆಯಲು ಶುರುವಾಯ್ತಾ? ಎಂಬ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಿದೆ.

Share This Article