IPL Retention | ಡುಪ್ಲೆಸಿ ಔಟ್‌, ಆರ್‌ಸಿಬಿಯಲ್ಲಿ ತ್ರಿಬಲ್‌ ಸ್ಟಾರ್‌; ಕೊಹ್ಲಿ ಸಂಭಾವನೆಯಲ್ಲಿ ದಿಢೀರ್‌ 6 ಕೋಟಿ ಏರಿಕೆ

Public TV
2 Min Read

– ನಾಕೌಟ್‌ ಪಂದ್ಯದಲ್ಲಿ ಮ್ಯಾಚ್‌ ಗೆಲ್ಲಿಸಿದ್ದ ಯಶ್‌ ದಯಾಳ್‌ಗೆ ಆರ್‌ಸಿಬಿ ಮಣೆ

ಮುಂಬೈ: 2025ರ ಐಪಿಎಲ್‌ ಮೆಗಾ ಹರಾಜು ಹಿನ್ನೆಲೆಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ರೀಟೆನ್‌ ಆಟಗಾರರ ಪಟ್ಟಿಯನ್ನು (IPL Retention List) ಬಿಡುಗಡೆಗೊಳಿಸಿದೆ. ನಿರೀಕ್ಷೆಯಂತೆ ಹಾಲಿ ನಾಯಕ ಫಾಫ್‌ ಡು ಪ್ಲೆಸಿಸ್‌ ಅವರನ್ನ ತಂಡದಿಂದ ಹೊರದಬ್ಬಿದ್ದು, ಮೂವರು ದೇಶಿ ಆಟಗಾರರನ್ನ ಮಾತ್ರ ಉಳಿಸಿಕೊಂಡಿದೆ.

ಆರ್‌ಸಿಬಿ ತಂಡದ ಜೀವಾಳ ಕಿಂಗ್‌ ಕೊಹ್ಲಿ (Virat Kohli) 18ನೇ ಆವೃತ್ತಿಯಲ್ಲೂ ಆರ್‌ಸಿಬಿ ತಂಡದಲ್ಲೇ ಮುಂದುವರಿದಿದ್ದಾರೆ. ಇದರೊಂದಿಗೆ ರಜತ್‌ ಪಾಟೀದಾರ್‌ ಹಾಗೂ ಯಶ್‌ ದಯಾಳ್‌ ಅವರನ್ನ ಆರ್‌ಸಿಬಿ (RCB) ರೀಟೆನ್‌ ಮಾಡಿಕೊಂಡಿದೆ. ಇಲ್ಲಿ 2024ರ ಐಪಿಎಲ್‌ ಆವೃತ್ತಿಯಲ್ಲಿ 15 ಕೋಟಿ ರೂ. ಇದ್ದ ಸಂಭಾವನೆ ಕೊಹ್ಲಿ ಸಂಭಾವನೆ ದಿಢೀರ್‌ 21 ಕೋಟಿ ರೂ.ಗೆ ಏರಿಕೆಯಾಗಿರುವುದು ವಿಶೇಷ. ಇದನ್ನೂ ಓದಿ: IPL 2025: ಆರ್‌ಸಿಬಿ ಕ್ಯಾಪ್ಟನ್‌ ಆಗಿ ವಿರಾಟ್‌ ಕೊಹ್ಲಿ ರೀ ಎಂಟ್ರಿ?

ಇನ್ನೂ 2024ರ ಐಪಿಎಲ್‌ ಆವೃತ್ತಿಯಲ್ಲಿ ಬ್ಯಾಕ್‌ ಟು ಬ್ಯಾಕ್‌ ಫಿಫ್ಟಿ ಸಿಡಿಸಿ ಮಿಂಚಿದ್ದ ರಜತ್‌ ಪಾಟೀದಾರ್‌ ಅವರನ್ನು 11 ಕೋಟಿ ರೂ.ಗಳಿಗೆ ಆರ್‌ಸಿಬಿ ಉಳಿಸಿಕೊಂಡಿದೆ. ಜೊತೆಗೆ 2024ರ ಐಪಿಎಲ್‌ನ ನಾಕೌಟ್‌ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಗೆಲುವು ತಂದುಕೊಟ್ಟು ಹೀರೋ ಆಗಿದ್ದ ಯಶ್‌ ದಯಾಳ್‌ ಅವರನ್ನ 5 ಕೋಟಿ ರೂ.ಗಳಿಗೆ ರೀಟೆನ್‌ ಮಾಡಿಕೊಂಡಿದೆ. ಇದನ್ನೂ ಓದಿ: IPL Retention | ರೋಹಿತ್‌, ಪಾಂಡ್ಯಗಿಂತಲೂ ಬುಮ್ರಾ ದುಬಾರಿ – ಮುಂಬೈನಲ್ಲಿ ವಿದೇಶಿ ಆಟಗಾರರಿಗೆ ಕೊಕ್‌

ಯಾರಿಗೆ ಎಷ್ಟು ಮೊತ್ತ?
ವಿರಾಟ್‌ ಕೊಹ್ಲಿ – 21 ಕೋಟಿ ರೂ.
ರಜತ್‌ ಪಾಟೀದಾರ್‌ – 11 ಕೋಟಿ ರೂ.
ಯಶ್‌ ದಯಾಳ್‌ – 5 ಕೋಟಿ ರೂ.

ಕಿಂಗ್‌ ಕೊಹ್ಲಿ ಮತ್ತೆ ಕ್ಯಾಪ್ಟನ್‌?
ಆರಂಭದಿಂದಲೂ ಆರ್‌ಸಿಬಿ ಫ್ರಾಂಚೈಸಿಗಾಗಿಯೇ ಮುಡಿಪಾಗಿರುವ ಕಿಂಗ್‌ ಕೊಹ್ಲಿ 2025ರ ಆವೃತ್ತಿಯಲ್ಲಿ ಮತ್ತೆ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈವರೆಗೆ 252 ಪಂದ್ಯಗಳನ್ನಾಡಿರುವ ವಿರಾಟ್‌ 8,000 ರನ್‌ ಪೂರೈಸಿದ್ದು, ಇಡೀ ಐಪಿಎಲ್‌ನಲ್ಲೇ ಗರಿಷ್ಠ ರನ್‌ ಗಳಿಸಿರುವ‌ ನಂ.1 ಆಟಗಾರನಾಗಿದ್ದಾರೆ. ಅಲ್ಲದೇ ಐಪಿಎಲ್‌ನಲ್ಲಿ ಅತಿಹೆಚ್ಚು ಶಕತ (8) ಸಿಡಿಸಿದ ದಾಖಲೆಯೂ ಕಿಂಗ್‌ ಕೊಹ್ಲಿ ಹೆಸರಿನಲ್ಲಿಯೇ ಇದೆ.

ಮುಂದಿನ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಪಟ್ಟಿಯನ್ನು ಎಲ್ಲಾ ಫ್ರಾಂಚೈಸಿಗಳು ಬಿಡುಗಡೆ ಮಾಡಿವೆ.

Share This Article